Site icon Vistara News

Ballari News: ಜಿಲ್ಲಾ ಉಸ್ತುವಾರಿ ನೀಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು: ಸಚಿವ ಬಿ. ನಾಗೇಂದ್ರ

Minister BNagendra visit Chellagurki Sri Erritatha Jeeva Samadhi Kshetra

ಬಳ್ಳಾರಿ: ಜಿಲ್ಲಾ ಉಸ್ತುವಾರಿ (District incharge) ನೀಡುವುದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ವಿವೇಚನೆಗೆ ಬಿಡಲಾಗಿದೆ ಎಂದು ಯುವಜನಸೇವೆ, ಕ್ರೀಡಾ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಬಿ. ನಾಗೇಂದ್ರ ಹೇಳಿದರು.

ಸಚಿವರಾದ ನಂತರ ಇದೇ ಮೊದಲ ಬಾರಿಗೆ ಬಳ್ಳಾರಿಗೆ ಭೇಟಿ ನೀಡುವ ಮುನ್ನ ಚೇಳ್ಳಗುರ್ಕಿಯ ಶ್ರೀ ಎರ‍್ರಿತಾತ ಅವರ ಜೀವ ಸಮಾಧಿ ಕ್ಷೇತ್ರಕ್ಕೆ ಭೇಟಿ ನೀಡಿ, ದರ್ಶನ ಪಡೆದು, ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ನೀಡುವುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ ಆದರೆ ಆಯಾ ಜಿಲ್ಲೆಯವರಿಗೆ ಆಯಾ ಜಿಲ್ಲಾ ಉಸ್ತುವಾರಿ ನೀಡಬೇಕೆಂಬ ವಾಡಿಕೆಯಿದೆ ಎಂದು ತಿಳಿಸಿದರು.

ಇದನ್ನೂ ಓದಿ: Odisha Train Accident: ‘ಸಂತ್ರಸ್ತರ ನೆರವಿಗೆ ನಾವಿದ್ದೇವೆ’, ರೈಲು ಅಪಘಾತಕ್ಕೆ ಕಂಬನಿ ಮಿಡಿದ ವಿಶ್ವ ನಾಯಕರು

ಸರ್ಕಾರ ಹೊರಿಸಿರುವ ಜವಾಬ್ದಾರಿ ಪಡೆದು ಸಚಿವನಾಗಿ ಜಿಲ್ಲೆಗೆ ಬಂದಿದ್ದೀನೆ. ಯುವಜನಸೇವೆ, ಕ್ರೀಡಾ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿದ್ದಾರೆ. ಚೇಳ್ಳಗುರ್ಕಿ ಎರ‍್ರಿತಾತ ಅವರ ಆಶೀರ್ವಾದ ಪಡೆದು ಜಿಲ್ಲೆಗೆ ಪದಾರ್ಪಣೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಅಭಿವೃದ್ಧಿಗೆ ಎರ‍್ರಿತಾತ ಅವರು ಶಕ್ತಿ ನೀಡಲೆಂದು ಬೇಡಿರುವೆ. ನನ್ನ ಇಲಾಖೆ ವತಿಯಿಂದ ಆಗುವ ಅಭಿವೃದ್ಧಿಯಲ್ಲಿ, ಜಿಲ್ಲೆಯ ಅಭಿವೃದ್ಧಿಯಲ್ಲಿ ತಾತ ನನ್ನನ್ನು ಸರಿ ದಾರಿಯಲ್ಲಿ ನಡೆಸಲಿ, ನನಗೆ ಶಕ್ತಿ ತುಂಬಲಿ ಎಂದು ಬೇಡಿಕೊಂಡಿರುವೆ ಎಂದು ತಿಳಿಸಿದರು.

ಇನ್ನು ಮುಂದೆ ಅವಳಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಪರ್ವ ಆರಂಭವಾಗಲಿದೆ. ಎರಡೂ ಜಿಲ್ಲೆಗಳನ್ನು ಹಾಗೂ ನನ್ನ ಇಲಾಖೆಗಳ ಮೂಲಕ ಇಡೀ ರಾಜ್ಯವನ್ನು ಅಭಿವೃದ್ಧಿ ಮಾಡುವ ಸಂಕಲ್ಪ ತೊಟ್ಟಿರುವೆ ಎಂದು ಸಚಿವ ನಾಗೇಂದ್ರ ಹೇಳಿದರು.

ಇದನ್ನೂ ಓದಿ: Odisha Train Accident: ಹೌರಾದಿಂದ ವಾಪಸ್ಸಾಗಲು ರಾಜ್ಯದ 31 ವಾಲಿಬಾಲ್‌ ಕ್ರೀಡಾಪಟುಗಳ ಪರದಾಟ

ಶಿಕ್ಷಣದಿಂದ ಯಾವ ಒಬ್ಬ ವಿದ್ಯಾರ್ಥಿಯೂ ವಂಚಿತ ಆಗಬಾರದು ಎಂಬುದು ನನ್ನ ಆಶಯ. ಹೀಗಾಗಿ ನನ್ನ ಇಲಾಖೆ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಎಲ್ಲ ರೀತಿಯ ಪ್ರೋತ್ಸಾಹ ನೀಡುವೆ. ಕ್ರೀಡಾ ಇಲಾಖೆ ಮೂಲಕ ರಾಜ್ಯದ ಎಲ್ಲ ಕ್ರೀಡಾಳುಗಳಿಗೆ ಪ್ರೋತ್ಸಾಹ ನೀಡುವೆ. ನಮ್ಮ ರಾಜ್ಯ ಪ್ರತಿನಿಧಿಸಿ ಎಲ್ಲ ಕ್ರೀಡೆಗಳಲ್ಲೂ ನಮ್ಮ ಕ್ರೀಡಾಳುಗಳು ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡುವಂತಾಗಬೇಕು ಎಂದರು.

ಗಣಿಬಾಧಿತ ಪ್ರದೇಶಗಳಿಗೆ ಕೆಎಂಆರ್‌ಸಿಇ ಮೂಲಕ ಅಭಿವೃದ್ಧಿ ಮಾಡಲಾಗುವುದು. ಖನಿಜ ನಿಧಿಯ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಸಮರ್ಪಕ ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.

ಸಂತಾಪ: ಒರಿಸ್ಸಾ ರೈಲು ದುರಂತದಲ್ಲಿ ಬಹಳ ಜನರ ಸಾವಾಗಿದೆ, ಜನರ ಸಾವಿಗೆ ಸಂತಾಪ ಸಲ್ಲಿಸುವೆ. ನಮ್ಮ ರಾಜ್ಯದ ಜನರೂ ರೈಲಿನಲ್ಲಿದ್ದರು, ಅದೃಷ್ಟವಶಾತ್ ಬದುಕುಳಿದಿದ್ದಾರೆ. ಅಲ್ಲಿನ ಪರಿಸ್ಥಿತಿ ತಿಳಿಯಲು, ನಮ್ಮ ರಾಜ್ಯದ ಪ್ರಯಾಣಿಕರ ಸುರಕ್ಷತೆಗಾಗಿ ಸೋದರ, ಸಚಿವ ಸಂತೋಷ್ ಲಾಡ್ ಅವರು ತೆರಳಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: KPSC Departmental Examination : ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆ; ಪ್ರವೇಶ ಪತ್ರ ಪ್ರಕಟ

ಅದ್ಧೂರಿ ಸ್ವಾಗತ: ನೂತನ ಸಚಿವ ಬಿ.ನಾಗೇಂದ್ರ ಅವರನ್ನು ಸ್ವಾಗತಿಸಲು ಮಧ್ಯಾಹ್ನ 2 ಗಂಟೆಯಿಂದಲೇ ಅವರ ಬೆಂಬಲಿಗರು, ಆಪ್ತರು, ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಚೇಳ್ಳಗುರ್ಕಿ ಶ್ರೀ ಎರ‍್ರಿತಾತ ದೇವಸ್ಥಾನದ ಬಳಿ ಜಮಾಯಿಸಿದ್ದರು.

ಸಚಿವ ನಾಗೇಂದ್ರ ಅವರು ಇಳಿ ಹೊತ್ತು 4.30ರ ವೇಳೆಗೆ ಆಂಧ್ರದ ಅನಂತಪುರ ಮಾರ್ಗವಾಗಿ ಚೇಳ್ಳಗುರ್ಕಿ ಪ್ರವೇಶ ಮಾಡಿದರು. ಆಂಧ್ರದ ಉರವಕೊಂಡ, ಕೊಟ್ಟಾಲ, ವಿಡಪನಕಲ್ಲ ಗ್ರಾಮಗಳಲ್ಲೂ ನೂತನ ಸಚಿವರನ್ನು ಸ್ವಾಗತಿಸಿ ಹಾರ ತುರಾಯಿ ಹಾಕಿ ಸಂಭ್ರಮಿಸಿದರು. ಕರ್ನಾಟಕ ಗಡಿಯಿಂದಲೂ ಸಾಕಷ್ಟು ಜನರು ರಸ್ತೆ ಬದಿ ಕಾದು ನಿಂತು ಸ್ವಾಗತಿಸಿದರು. ಚೇಳ್ಳಗುರ್ಕಿಯಿಂದ ಬಳ್ಳಾರಿ ನಗರದ ಶ್ರೀ ಕನಕದುರ್ಗಮ್ಮ ದೇವಿ ದೇವಸ್ಥಾನದವರೆಗೂ ಅಲ್ಲಲ್ಲಿ ಬೆಂಬಲಿಗರು, ಆಪ್ತರು ಸ್ವಾಗತಿಸಿದರು.

Exit mobile version