Site icon Vistara News

Ballari News: ಜನನಾಯಕ ಕರ್ಪೂರಿ ಠಾಕೂರ್ ಜನ್ಮಶತಮಾನೋತ್ಸವ; ಲೋಹಿಯಾ ಪ್ರಕಾಶನದಿಂದ 4 ಕೃತಿಗಳು ಲೋಕಾರ್ಪಣೆ

karpuri thakur janma shathamanotsava book release programme inaugurated by alanda MLA B.R. Patil in Ballari

ಬಳ್ಳಾರಿ: ಸಮಾಜವಾದ ನೆಲೆಯಲ್ಲಿ ಬಂದಿರುವ ದೇಶದ ಅನೇಕ ರಾಜಕೀಯ ನಾಯಕರು (Political Leaders) ವ್ಯವಸ್ಥೆಯೊಂದಿಗೆ ಎಂದೂ ರಾಜಿಮಾಡಿಕೊಳ್ಳದೆ ನಿಷ್ಠುರವಾಗಿಯೇ ಬದುಕಿದ್ದಾರೆ ಎಂದು ಹಿರಿಯ ಸಮಾಜವಾದಿ ಹಾಗೂ ಆಳಂದ ಕ್ಷೇತ್ರದ ಶಾಸಕ ಬಿ.ಆರ್‌.ಪಾಟೀಲ್ ಅಭಿಪ್ರಾಯಪಟ್ಟರು.

ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಶರಣ ಸಭಾಂಗಣದಲ್ಲಿ ಲೋಹಿಯಾ ಪ್ರಕಾಶನ ಹಮ್ಮಿಕೊಂಡಿದ್ದ ಜನನಾಯಕ ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕರ್ಪೂರಿ ಠಾಕೂರ್ ಅವರು ಎರಡು ಬಾರಿ ಸಿಎಂ ಆಗಿದ್ದರೂ ಸಹ ಇರಲು ಮನೆಯಿರಲಿಲ್ಲ. ಅವರು ಸಿಎಂ ಆಗಿದ್ದಾಗಲೂ ಅವರ ತಂದೆ ಕ್ಷೌರಿಕ ವೃತ್ತಿಯನ್ನೇ ಮುಂದುವರಿಸಿದ್ದರು. ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್.ನಿಜಲಿಂಗಪ್ಪ ಅವರ ಬಳಿ ಕಾರ್ ಇರಲಿಲ್ಲ. ಅವರು ನಿಧನರಾದಾಗ ಹೂಳಲು ಸ್ವಂತ ಜಾಗವಿರಲಿಲ್ಲ. ಈ ರೀತಿಯ ಸರಳ ವ್ಯಕ್ತಿಗಳು ಇಂದು ನೋಡಲು ಸಾಧ್ಯವೇ ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Road Accident : ಕೊಳ್ಳೇಗಾಲದಲ್ಲಿ ಭತ್ತ ಕಟಾವು ಯಂತ್ರದ ಲಾರಿಗೆ ಬೈಕ್‌ ಡಿಕ್ಕಿ; ಭೀಕರ ಅಪಘಾತಕ್ಕೆ ಮೂವರು ಬಲಿ

ಚಳುವಳಿಗಳು ಜೀವಂತವಾಗಿರಬೇಕು. ಚಳುವಳಿಗಳು ಜೀವ ಕಳೆದುಕೊಂಡರೆ ಸಮಾಜವೇ ಜೀವ ಕಳೆದುಕೊಳ್ಳುತ್ತದೆ. ದೆಹಲಿಯಲ್ಲಿ ನಡೆದ ಚಳುವಳಿಯಲ್ಲಿ 600 ರೈತರು ಹುತಾತ್ಮರಾದರು. ಹೋರಾಟದಿಂದ ಕೇಂದ್ರದ ಸರ್ಕಾರ ಮೂರು ರೈತ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ಸಾಧ್ಯವಾಯಿತು ಎಂದರಲ್ಲದೆ, ಯುವ ಸಮುದಾಯಕ್ಕೆ ಸಮಾಜವಾದದ ಪ್ರಜ್ಞೆ ಮೂಡಿಸುವ ಹಾಗೂ ಹೋರಾಟಕ್ಕೆ ಧುಮುಕಿಸುವ ಕೆಲಸವಾಗಬೇಕಿದೆ. ಇಂದಿಗೂ ನಾನು ಜನಪರ ಚಳವಳಿಗೆ ನುಗ್ಗಲು ಸಜ್ಜಾಗಿದ್ದೇನೆ ಎಂದು ಹೇಳಿದರು.

ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ ಕುರಿತು ಒಂದು ಅವಲೋಕನ ಮಾಡಿದ ಹಿರಿಯ ಚಿಂತಕ ಡಾ.ರಾಜೇಂದ್ರ ಚೆನ್ನಿ ಮಾತನಾಡಿ, ಭಾರತೀಯ ರಾಜಕೀಯದಲ್ಲಿ ಹಿಂದುಳಿದ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗಲು ಆಸ್ಪದವಾಗಿದ್ದರೆ ಅದಕ್ಕೆ ಕರ್ಪೂರಿ ಠಾಕೂರ್ ಅವರೇ ಕಾರಣ. ತಮ್ಮ ಬದುಕಿನುದ್ದಕ್ಕೂ ಠಾಕೂರ್ ಅವರು ಹಿಂದುಳಿದ ವರ್ಗಗಳಿಗೆ ಸ್ವಾಭಿಮಾನ ಹಾಗೂ ರಾಜಕೀಯ ಎಚ್ಚರಿಕೆಯ ಪ್ರಜ್ಞೆ ನೀಡುತ್ತಾ ಬಂದರು. ಭಾಷೆ , ಭೂಮಿ ಹಾಗೂ ಸಾಮಾಜಿಕ ನ್ಯಾಯ ಈ ಮೂರಕ್ಕೆ ಪ್ರಮುಖ ಆದ್ಯತೆಯನ್ನು ನೀಡಿ ಹೋರಾಟ ನಡೆಸಿದರು ಎಂದು ತಿಳಿಸಿದರು.

ಇದನ್ನೂ ಓದಿ: Mumbai Fire: ಬಹುಮಹಡಿ ಕಟ್ಟಡ, ಶಾಲೆಯಲ್ಲಿ ಬೆಂಕಿ ಆಕಸ್ಮಿಕ, ಸ್ಫೋಟ

ಹಿರಿಯ ಕವಿಗಳಾದ ಸವಿತಾ ನಾಗಭೂಷಣ ಹಾಗೂ ಡಾ.ದಸ್ತಗಿರಿಸಾಬ್ ದಿನ್ನಿ ಅವರು ಕೃತಿಗಳ ಪರಿಚಯಿಸಿದರು. ಲೇಖಕರಾದ ಡಾ.ಎನ್.ಜಗದೀಶ್‌ ಕೊಪ್ಪ ಹಾಗೂ ಮಂಗ್ಳೂರ ವಿಜಯ ಅವರು ಮಾತನಾಡಿದರು.

ಹಿರಿಯ ಕವಿ ಹಾಗೂ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಲೋಹಿಯಾ ಪ್ರಕಾಶನದ ಮುಖ್ಯಸ್ಥ ಹಾಗೂ ಹಿರಿಯ ಸಮಾಜವಾದಿ ಚಿಂತಕ ಸಿ.ಚನ್ನಬಸವಣ್ಣ ಪ್ರಾಸ್ತಾವಿಕ ಮಾತನಾಡಿದರು.

ಯಲ್ಲನಗೌಡ ಶಂಕರಬಂಡೆ ಹಾಗೂ ಜಡೇಶ್ ಎಮ್ಮಿಗನೂರು ಅವರು ಜನನಾಯಕ ಕರ್ಪೂರಿ ಠಾಕೂರ್ ಅವರ ಬರೆದ ಗೀತೆಗಳನ್ನು ರಾಗ ಸಂಯೋಜಿಸಿ ಪ್ರಸ್ತುತಪಡಿಸಿದರು. ಹಿರಿಯ ಕವಿ ಅಲ್ಲಮ ಪ್ರಭು ಬೆಟ್ಟದೂರು ಕಾರ್ಯಕ್ರಮ ನಿರ್ವಹಿಸಿದರು.

ಇದನ್ನೂ ಓದಿ: Fighter Trailer: ʼಫೈಟರ್‌ʼ ಚಿತ್ರದ ಟ್ರೈಲರ್‌ ಔಟ್‌; ವೈಮಾನಿಕ ಸಾಹಸವೇ ಹೈಲೈಟ್‌

ನರೇಂದ್ರ ಪಾಠಕ್ ಅವರ ಕರ್ಪೂರಿ ಠಾಕೂರ್ ಹಾಗೂ ಸಮಾಜವಾದ (ಅನು: ಹನಸ್ ನಯೀಂ ಸುರಕೋಡ), ಮಾನವತಾವಾದಿ ಮಧು ದಂಡವತೆ (ಲೇ.ಡಾ.ಎನ್.ಜಗದೀಶ್ ಕೊಪ್ಪ), ಅಪ್ಪಟ ಸಮಾಜವಾದಿ ಮಧು ಲಿಮಯೆ ( ಲೇ: ಮಂಗ್ಳೂರ ವಿಜಯ), ಹಾಗೂ ಸವಿತಾ ನಾಗಭೂಷಣ ಅವರ ದಿನದ ಪ್ರಾರ್ಥನೆ ಕೃತಿಗಳು ಲೋಕಾರ್ಪಣೆಗೊಂಡವು.

Exit mobile version