ಬಳ್ಳಾರಿ: ಎಪಿಎಂಸಿ ಹೊರಗಡೆ ಭತ್ತ (Paddy), ಹತ್ತಿ (Cotton) ಸೇರಿದಂತೆ ಇತರೆ ಬೆಳೆಗಳ ಖರೀದಿಯ ಮೇಲೆ ಸೇವಾ ಶುಲ್ಕವನ್ನು (Service charge) ವಿಧಿಸಬಾರದು ಎಂದು ಬಳ್ಳಾರಿ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್.ಜಿ. ಬಸವರಾಜ್ ತಿಳಿಸಿದರು.
ಶನಿವಾರ ಮರ್ಚೇಡ್ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊರಗಡೆ ನಡೆಯುವ ಅಕ್ಕಿ ಖರೀದಿಗೆ ಸೇವಾ ಶುಲ್ಕ ವಿಧಿಸಬಾರದೆಂದು ಆಗ್ರಹಿಸಿ ಇಂದು ಅಕ್ಕಿ ಗಿರಣಿಗಳನ್ನು ಸಾಂಕೇತಿಕವಾಗಿ ಬಂದ್ ಮಾಡಲಾಗಿದೆ ಎಂದರು.
ವಿದ್ಯುತ್ ದರಗಳ ಹೆಚ್ಚಳದಿಂದ ಈಗಾಗಲೇ ಅಕ್ಕಿ ಗಿರಣಿದಾರರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಇದರಿಂದಾಗಿ ಗಿರಣಿ ನಡೆಸುವುದು ಕಷ್ಟವಾಗುತ್ತಿದೆ. ಕೂಡಲೇ ವಿದ್ಯುತ್ ದರ ಹೆಚ್ಚಳವನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: KPL: ನಾಲ್ಕು ವರ್ಷಗಳ ಬಳಿಕ ಮತ್ತೆ ಆರಂಭಗೊಳ್ಳಲಿದೆ ಕರ್ನಾಟಕ ಪ್ರೀಮಿಯರ್ ಲೀಗ್
ಸಚಿವ ಸಂಪುಟ ನಿರ್ಧಾರದಂತೆ ಎಪಿಎಂಸಿ ಕಾಯ್ದೆಯನ್ನು ಪುನಃ ಹಿಂದಿನ ರೀತಿಯಂತೆ ತಿದ್ದುಪಡಿ ಮಾಡಲು ಹೊರಟಿರುವ ನಿರ್ಧಾರದಿಂದ ಅಕ್ಕಿ ಗಿರಣಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲಾಗದು, ಅಕ್ಕಿ ಗಿರಣಿ ಉದ್ಯಮಗಳು ಮತ್ತೆ ತೊಂದರೆಗೆ ಸಿಲುಕುತ್ತದೆ ಎಂದರು.
ನಮ್ಮ ರಾಜ್ಯದಲ್ಲಿ ಬೆಳೆಯುತ್ತಿರುವ ಭತ್ತದ ಜತೆಗೆ ಹೊರ ರಾಜ್ಯಗಳಿಂದಲೂ ಭತ್ತವನ್ನು ಸರ್ಕಾರವೇ ಎಂಎಸ್‌ಪಿ ಬೆಂಬಲ ಯೋಜನೆ ಅಡಿಯಲ್ಲಿ ಅಧಿಕ ಪ್ರಮಾಣದ ಭತ್ತವನ್ನು ಖರೀದಿಸಿ ತಂದು ನಮ್ಮ ಅಕ್ಕಿ ಗಿರಣಿಯಲ್ಲಿಯೇ ಸಂಸ್ಕರಿಸಲು ಸಿಎಂಆರ್ ಮಿಲ್ ಪಾಯಿಂಟ್ ಪ್ರಕ್ರಿಯೆ ಆರಂಭಿಸಿದರೆ ರಾಜ್ಯದ ಅನ್ನಭಾಗ್ಯಕ್ಕೆ ಅನುಕೂಲವಾಗಲಿದೆ. ನಮ್ಮ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸಲಾಗುತ್ತದೆ ಎಂದರು.
ಇದನ್ನೂ ಓದಿ: Gold Rate Today: ವೀಕೆಂಡ್ ಶಾಪಿಂಗ್ನಲ್ಲಿ ಚಿನ್ನ-ಬೆಳ್ಳಿ ತುಟ್ಟಿ; ತಿಂಗಳ ಮೊದಲ ದಿನ ಎಷ್ಟಿದೆ ರೇಟ್?
ಸುದ್ದಿಗೋಷ್ಠಿಯಲ್ಲಿ ಅಕ್ಕಿ ಗಿರಣಿ ಮಾಲೀಕರ ಸಂಘದ ಹೇಮಯ್ಯಸ್ಚಾಮಿ, ಶ್ರೀನಿವಾಸ, ರಮೇಶ್ ಗೌಡ, ಬಿ.ನಾಗರಾಜ, ದೊಡ್ಡನಗೌಡ, ಶ್ರೀಕಾಂತ್, ಹರೀಶ್ ರೆಡ್ಡಿ ಸೇರಿದಂತೆ ಇತರರು ಇದ್ದರು.