Site icon Vistara News

Education Department: ಶಾಲಾ ಆವರಣದಲ್ಲಿ ಶಿಕ್ಷಣೇತರ ಚಟುವಟಿಕೆಗೆ ಬ್ರೇಕ್‌; ಶಿಕ್ಷಣ ಇಲಾಖೆ ಸುತ್ತೋಲೆ

School

ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಆವರಣ ಅಥವಾ ಮೈದಾನವನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಇನ್ನಿತರ ಯಾವುದೇ ಚಟುವಟಿಕೆಗಳಿಗೆ ಬಳಸಿಕೊಳ್ಳಬಾರದು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ.

ಈ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರಾದ ಬಿ. ಬಿ. ಕಾವೇರಿ ಅವರು ಸುತ್ತೋಲೆ ಹೊರಡಿಸಿದ್ದು, ಇದರಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳನ್ನು ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ, ಇತರ ಚಟುವಟಿಕೆಗಳಿಗೆ ಇಲಾಖೆ ಅನುಮತಿ ಇಲ್ಲದೇ ಬಳಸಿಕೊಳ್ಳುವುದಕ್ಕೆ ಹಾಗೂ ಅನುಮತಿಸುವುದಕ್ಕೆ ಅವಕಾಶ ನೀಡಬಾರದು. ಶಾಲಾ ಆವರಣವು ಮಕ್ಕಳಿಗೆ ದೈನಂದಿನ ಪಾಠ ಪ್ರವಚನಗಳೊಂದಿಗೆ, ಪಠ್ಯೇತರ ಚಟುವಟಿಕೆಗಳು ಮತ್ತು ಆಟೋಟ ಕಾರ್ಯಕ್ರಮಗಳು, ಶಾರೀರಿಕ ಶಿಕ್ಷಣ ಹಾಗೂ ವ್ಯಾಯಾಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಸದ್ವಿನಿಯೋಗವಾಗಬೇಕು. ಹೀಗಾಗಿ ಶಾಲಾ ಮೈದಾನ ಅಥವಾ ಆವರಣವನ್ನು ಶಿಕ್ಷಣೇತರ ಚಟುವಟಿಕೆ ಉದ್ದೇಶಗಳಿಗೆ ಸರ್ಕಾರ, ಇಲಾಖೆ ಅನುಮತಿ ಇಲ್ಲದೆ ಬಳಸಬಾರದು ಹಾಗೂ ಅನುಮತಿ ನೀಡಬಾರದು ಎಂದು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮುಂದುವರಿದು ಶಾಲೆಗೆ ಸಂಬಂಧವಿರದ ಯಾವುದೇ ವ್ಯಕ್ತಿಗಳು ಶಾಲೆಯ ಆವರಣದಲ್ಲಿ ಅನಗತ್ಯವಾಗಿ ಸುತ್ತಾಡುತ್ತಿರುವುದು ಕಂಡುಬಂದಲ್ಲಿ ಹಾಗೂ ಯಾವುದೇ ವ್ಯಕ್ತಿಗಳಿಂದ ಶಾಲಾ ಸುರಕ್ಷತೆಗೆ ಭಂಗ ತರುವಂತಹ ಅನಾಮಧೇಯ ದೂರವಾಣಿ ಕರೆಗಳು, ಪತ್ರಗಳು ಬಂದಲ್ಲಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸಿದಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳು ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಶಾಲಾ ಮುಖ್ಯಸ್ಥರು, ಉಸ್ತುವಾರಿ ಅಧಿಕಾರಿ, ಸಿಬ್ಬಂದಿಗೆ ತಿಳಿಸಲಾಗಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಸರ್ಕಾರಿ ಶಾಲೆಗಳ ಬಲವರ್ಧನೆಗೆ ತಜ್ಞರ ಸೂತ್ರಗಳು ಜಾರಿಯಾಗಲಿ

ವಸತಿ ಶಾಲೆಯ 6ನೇ ತರಗತಿ ಪ್ರವೇಶಾತಿ; ಅರ್ಜಿ ಸಲ್ಲಿಸೋಕೆ ಡಿ.31 ಕೊನೇ ದಿನ

ಬೆಂಗಳೂರು: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (Karnataka Residential Educational Institutions Society) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಿಗೆ (Residential School) 2024-25ರ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. 6ನೇ ತರಗತಿ ಪ್ರವೇಶಕ್ಕೆ (6th Class Admission) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ – Karnataka Examination Authority) ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆಗಲೇ ಆರಂಭವಾಗಿದೆ.

ಹಾಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸಂಘದ ವ್ಯಾಪ್ತಿಯಲ್ಲಿರುವ ಶಾಲೆ ಅಥವಾ ಕಾಲೇಜಿನಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಡಿಸೆಂಬರ್‌ 7ರಿಂದ ಆರಂಭವಾಗಿದ್ದು, ಡಿ.31 ಕೊನೆಯ ದಿನವಾಗಿದೆ. 2024ರ ಫೆ. 18ರಂದು ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.

ಇದನ್ನೂ ಓದಿ: Aadhaar update: ಆಧಾರ್‌ ಕಾರ್ಡ್‌ ಉಚಿತ ಅಪ್ಡೇಟ್‌ಗೆ 4 ದಿನ ಮಾತ್ರವೇ ಅವಕಾಶ! ಹೀಗೆ ಮಾಡಿ ನವೀಕರಿಸಿ

ಯಾವ ವಸತಿ ಶಾಲೆಗಳಿಗೆ ಅರ್ಜಿ ಸಲ್ಲಿಸಬಹುದು?

ವಸತಿ ಶಿಕ್ಷಣ ಸಂಸ್ಥೆಗಳಡಿ ಕಾರ್ಯ ನಿರ್ವಹಿಸುವ ಎಲ್ಲ ಮಾದರಿಯ ವಸತಿ ಶಾಲೆಗಳಿಗೂ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ಯಾರಿಗೆ ಯಾವುದು ಸೂಕ್ತ ಎಂದೆನ್ನಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಈ ವಸತಿ ಶಾಲೆಗಳಿಗೆ 6ನೇ ತರಗತಿ ಪ್ರವೇಶ ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕೆಇಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಾರ್ಷಿಕ ಆದಾಯ ಮಿತಿ ಇರಲಿದೆ

ಈ ವಸತಿ ಶಾಲೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳ ಕುಟುಂಬದವರ ಆದಾಯ ಮಿತಿಯನ್ನು ಇಲ್ಲಿ ಪರಿಗಣಿಸಲಾಗುತ್ತದೆ. ನಿಗದಿತ ಮಾನದಂಡಕ್ಕಿಂತ ಹೆಚ್ಚಿನ ವಾರ್ಷಿಕ ವರಮಾನ ಇದ್ದರೆ ಅಂಥವರಿಗೆ ಪ್ರವೇಶದ ಅವಕಾಶ ಇರುವುದಿಲ್ಲ. ಪರಿಶಿಷ್ಟ ಜಾತಿ/ ಪಂಗಡ, ಹಿಂದುಳಿದ ವರ್ಗದ ಪ್ರವರ್ಗ – 1ರ ವಿದ್ಯಾರ್ಥಿಗಳಿಗೆ 2.50 ಲಕ್ಷ ರೂ. ಮತ್ತು ಹಿಂದುಳಿದ ವರ್ಗ 2ಎ, 2ಬಿ, 3ಎ ಮತ್ತು 3ಬಿಗೆ 1 ಲಕ್ಷ ರೂ.ಗಳ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು ನಿಗದಿ ಪಡಿಸಲಾಗಿದೆ. ಹೀಗಾಗಿ ಆದಾಯ ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿರಲಿದೆ.

ಏನೇನು ದಾಖಲೆ ಬೇಕು?

ಅರ್ಜಿ ಸಲ್ಲಿಸಲು ವಿದ್ಯಾರ್ಥಿಯ ಸ್ಯಾಟ್ಸ್ ಸಂಖ್ಯೆ, ಭಾವಚಿತ್ರ ಮತ್ತು ಮೀಸಲಾತಿಗೆ ಸಂಬಂಧಿಸಿದ ಎಲ್ಲ ಮೂಲ ದಾಖಲಾತಿಯನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಈ ಸಹಾಯವಾಣಿಗೆ ಕರೆ ಮಾಡಿ

ಹೆಚ್ಚಿನ ಮಾಹಿತಿಗಾಗಿ ಕೆಇಎಯ ಸಹಾಯವಾಣಿ 080 23460460 ಕರೆ ಮಾಡಿ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: Yuva Nidhi Scheme: ಜನವರಿಯಲ್ಲೇ ಯುವನಿಧಿ ಜಾರಿ; ಅರ್ಹತೆ ಯಾರಿಗಿದೆ? ಈ ದಾಖಲೆ ನಿಮ್ಮಲ್ಲಿರಲಿ!

ವೆಬ್‌ಸೈಟ್‌ ಲಿಂಕ್‌ ಇಲ್ಲಿದೆ

ಕೆಇಎ ವೆಬ್‌ಸೈಟ್ ಮತ್ತು ವಸತಿ ಶಿಕ್ಷಣ ಸಂಸ್ಥೆಗಳ ವೆಬ್‌ಸೈಟ್‌ ಸಂಪರ್ಕಿಸಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version