Site icon Vistara News

Ban on Firecrackers: ರಾಜಕೀಯ ಸಮಾವೇಶ, ರ‍್ಯಾಲಿಗಳಲ್ಲಿ ಪಟಾಕಿ ಬಳಕೆ ನಿಷೇಧ: ಡಿ.ಕೆ.ಶಿವಕುಮಾರ್

DK Shivakumar with CM Siddaramaiah

ಬೆಂಗಳೂರು: ಅತ್ತಿಬೆಲೆ ಪಟಾಕಿ ಅಂಗಡಿ ದುರಂತ ನಡೆದ ಬಳಿಕ ಅಂತಹ ಅವಘಡಗಳು ನಡೆಯದಂತೆ ಮುನ್ನೆಚ್ಚರಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಇತ್ತೀಚೆಗೆ ತಿಳಿಸಿದ್ದರು. ಇದರ ಬೆನ್ನಲ್ಲೇ ರಾಜಕೀಯ ಸಮಾವೇಶ, ಮದುವೆ, ಶುಭ ಸಮಾರಂಭಗಳಲ್ಲಿ ಇನ್ನು ಮುಂದೆ ಅಪಾಯಕಾರಿ ಪಟಾಕಿಗಳ ಬಳಕೆಗೆ ನಿಷೇಧ ವಿಧಿಸಲಾಗುವುದು (Ban on Firecrackers) ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಅತ್ತಿಬೆಲೆ ಪಟಾಕಿ ಅವಘಡದ ಹಿನ್ನೆಲೆಯಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಮಂಗಳವಾರ ನಡೆದ ಉನ್ನತ ಮಟ್ಟದ ಸಭೆ ನಂತರ ಮುಖ್ಯಮಂತ್ರಿಗಳ ಜತೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. 5 ವರ್ಷಕ್ಕೆ ನೀಡಿರುವ ಪಟಾಕಿ ಮಳಿಗೆ, ದಾಸ್ತಾನು ಪರವಾನಗಿಯನ್ನು ಇನ್ನು ಮುಂದೆ ಒಂದು ವರ್ಷಕ್ಕೆ ಮಾತ್ರ ನೀಡಲಾಗುವುದು. ಈ ಹಿಂದಿನ ಕಾನೂನುಗಳನ್ನು ಮೀರಿ ಅಧಿಕಾರಿಗಳು ಪರವಾನಗಿ ನೀಡಿದ್ದರೆ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು, ಪರಿಶೀಲನೆ ಮಾಡದ ಉನ್ನತ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದರು.

ಸರ್ಕಾರದಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಗಳ ಸಭೆಯೇ ಜಾಗೃತಿ ಮೂಡಿಸುವ ದೊಡ್ಡ ಸಂದೇಶ. ಪಟಾಕಿಗಳಿಂದ ಅವಘಡಗಳೇ ಹೆಚ್ಚು, ಅಲ್ಲದೇ ಪರಿಸರಕ್ಕೂ ಹಾನಿ, ಸಾರ್ವಜನಿಕರಿಗೂ ತೊಂದರೆ. ಆದ ಕಾರಣ ಹಸಿರು ಪಟಾಕಿ ಬಳಕೆಗೆ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.

ಸಾಂಪ್ರದಾಯಿಕ ಪಟಾಕಿ ಬದಲಾಗಿ ಹಸಿರು ಪಟಾಕಿಯನ್ನು ಬಳಸಲು ಸರ್ಕಾರ ಸೂಚನೆ ನೀಡಿದೆ. ಹಸಿರು ಪಟಾಕಿಗಳು ಗಾತ್ರದಲ್ಲೂ ಸಣ್ಣದಾಗಿದ್ದು ಮಾಲಿನ್ಯದ ಪ್ರಮಾಣ ಶೇ. 30 ರಿಂದ 90 ಪ್ರತಿಶತ ಕಡಿಯಾಗಿದೆ. ಸಾಂಪ್ರದಾಯಿಕ ಪಟಾಕಿಗೆ ಹೋಲಿಕೆ ಮಾಡಿದರೆ ಬೆಳಕು ಹಾಗೂ ಶಬ್ಧದಲ್ಲಿ ಯಾವುದೇ ವ್ಯೆತ್ಯಾಸವಿಲ್ಲ.

ಆದರೆ ಹಸಿರು ಪಟಾಕಿ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಇದರ ಬಳಕೆಯಿಂದ ಪರಿಸರ ಮಾಲಿನ್ಯ ನಿಯಂತ್ರಣ ಸಾಧ್ಯನಾ ಎಂಬ ಪ್ರಶ್ನೆಯನ್ನು ಪರಿಸರವಾದಿಗಳು ಮುಂದಿಟ್ಟಿದ್ದಾರೆ. ಅಷ್ಟೇ ಮಾತ್ರವಲ್ಲ, ಮಾರುಕಟ್ಟೆಯಲ್ಲಿ ಹಸಿರು ಪಟಾಕಿಗಳು ಅಷ್ಟು ಬೇಗ ಲಗ್ಗೆ ಇಡಲು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಇದನ್ನೂ ಓದಿ | CM Siddaramaiah : ದೀಪಾವಳಿಗೂ ಪಟಾಕಿ ಹೊಡೀಬಾರದಾ? ಸಿದ್ದರಾಮಯ್ಯ ಹೇಳಿದ್ದೇನು?

ಏನಿದು ಹಸಿರು ಪಟಾಕಿ?

ಸಾಂಪ್ರದಾಯಿಕ ಅಪಾಯಕಾರಿ ಪಟಾಕಿಗಳ ಬದಲಾಗಿ ಹಸಿರು ಪಟಾಕಿಗಳನ್ನು ಬಳಸಲು ಸರ್ಕಾರ ಸೂಚನೆ ನೀಡಿದೆ. ಹಸಿರು ಪಟಾಕಿಗಳು ಗಾತ್ರದಲ್ಲೂ ಸಣ್ಣದಾಗಿದ್ದು, ಇದರಿಂದ ಮಾಲಿನ್ಯದ ಪ್ರಮಾಣವೂ ಕಡಿಮೆ ಇರುತ್ತದೆ. ಕೌನ್ಸಿಲ್ ಫಾರ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ತಜ್ಞರು ಅಭಿವೃದ್ಧಿಪಡಿಸಿದ ಹಸಿರು ಪಟಾಕಿಗಳು ಶೇ.30ರಷ್ಟು ಕಡಿಮೆ ಪ್ರಮಾಣದಲ್ಲಿ ಮಾಲಿನ್ಯಕಾರಕಗಳನ್ನು ಹೊರಸೂಸುತ್ತವೆ. ಇದರಲ್ಲಿ ಲಿಥಿಯಂ, ಆರ್ಸೆನಿಕ್‌, ಬೇರಿಯಂ, ಸತುವಿನಂತಹ ಅಪಾಯಕಾರಿ ರಾಸಾಯನಿಕಗಳನ್ನು ಬಳಸುವುದಿಲ್ಲ. ಬದಲಾಗಿ ಮೆಗ್ನೀಷಿಯಂ, ಪೊಟಾಷಿಯಂ ನೈಟ್ರೇಟ್‌, ಸಲ್ಫರ್‌ ಅನ್ನು ಕಡಿಮೆ ಪ್ರಮಾಣದಲ್ಲಿ ಬಳಸುತ್ತಾರೆ. ಅಪಾಯಕಾರಿ ಪಟಾಕಿಗಳಿಗೆ ಹೋಲಿಸಿದರೆ ಕಡಿಮೆ ಶಬ್ದ ಮತ್ತು ಬೆಳಕು ಉತ್ಪತ್ತಿ ಮಾಡುತ್ತವೆ.

Exit mobile version