ಬೆಂಗಳೂರು: ಚಿತ್ರಸಂತೆ (Bangalore Chitra Santhe) ಬೆರಗು ಮೂಡಿಸುವ ಬಣ್ಣದ ಲೋಕ. ದೇಶ-ವಿದೇಶಗಳ 25ಕ್ಕೂ ಹೆಚ್ಚು ಪ್ರಕಾರಗಳ ಚಿತ್ರಗಳು ಅರಳಿ ನಿಲ್ಲುವ ಕಲಾಲೋಕ ಇದು. ಕಳೆದ ಆರು ದಶಕಗಳಿಂದ ದೃಶ್ಯಕಲಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಕೊಟ್ಟಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು, ಪ್ರತಿ ವರ್ಷದಂತೆ ಈ ವರ್ಷವೂ ಜನವರಿ 8ರಂದು ಚಿತ್ರಸಂತೆ ಏರ್ಪಡಿಸಿದೆ.
ಚಿತ್ರ ಪ್ರದರ್ಶನಕ್ಕೆ ಸುಮಾರು 2,300 ಮಂದಿ ಕಲಾವಿದರು ಅರ್ಜಿ ಸಲ್ಲಿಸಿದ್ದು, ಈ ಪೈಕಿ 1,300 ಕಲಾವಿದರು ಭಾಗವಹಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಕರ್ನಾಟಕ ಸೇರಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರ, ಪಂಜಾಬ್, ಪಶ್ಚಿಮ ಬಂಗಾಳ, ಓಡಿಶಾ, ಸಿಕ್ಕಿಂ, ರಾಜ್ಯಗಳಿಂದ ಕಲಾವಿದರು ಆಗಮಿಸಿ ತಮ್ಮ ವಿಶಿಷ್ಠ ಚಿತ್ರಗಳನ್ನು ಪ್ರದರ್ಶಿಸಿದರು.
ವಿಶೇಷವಾಗಿ ಸಂತೆಯಲ್ಲಿ ಮೈಸೂರು ಸಾಂಪ್ರದಾಯಿಕ ಶೈಲಿಯ ಕಲಾಕೃತಿಗಳು ಹಾಗೂ ತೊಗಲು ಬೊಂಬೆ ಕಲಾಕೃತಿಗಳು ಸೇರಿ ಪ್ರಶಸ್ತಿಗೆ ಭಾಜನರಾಗುವ ಕಲಾವಿದರ ಕಲಾಕೃತಿಗಳನ್ನು ಪರಿಷತ್ತಿನ ಕಲಾ ಗ್ಯಾಲರಿಗಳಲ್ಲಿ ಪ್ರದರ್ಶನ ಮಾಡಲಾಯಿತು. ಇದಲ್ಲದೆ ರಾಜಸ್ಥಾನಿ, ಮುಧುಬನಿಯ ಶೈಲಿ, ತೈಲ ಮತ್ತು ಜಲವರ್ಣಗಳ ಕಲಾಕೃತಿಗಳು, ಆಕ್ರಲಿಕ್, ಕೊಲಾಜ್, ಲಿಥೋಗ್ರಾಪ್ ಮೊದಲಾದ ಪ್ರಕಾರದ ಕಲಾಕೃತಿಗಳು ಚಿತ್ರಸಂತೆಯಲ್ಲಿ ಆಕರ್ಷಿಸುತ್ತಿವೆ.
ಶಿವಾನಂದ ಸರ್ಕಲ್‌ನಿಂದ ವಿಂಡ್ಸರ್ ಮ್ಯಾನರ್‌ವರೆಗೆ ಕುಮಾರ ಕೃಪಾ ರಸ್ತೆ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿ ಕಲಾಕೃತಿಗಳ ಪ್ರದರ್ಶನವನ್ನು ಬೆಳಗ್ಗೆ 8 ರಿಂದ ರಾತ್ರಿ 8ಗಂಟೆವರೆಗೂ ಆಯೋಜಿಸಲಾಗಿದೆ. ರಸ್ತೆಯುದ್ದಕ್ಕೂ 1,200 ಸ್ಟಾಲ್‌ಗಳ ನಿರ್ಮಾಣ ಮಾಡಲಾಗಿದ್ದು, ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಪರಿಷತ್ ಒಳಗೆ ಅವಕಾಶ ಕಲ್ಪಿಸಲಾಗಿತ್ತು. ಕೋವಿಡ್ ಹಿನ್ನೆಲೆ ಮಾಸ್ಕ್ ಹಾಗೂ ಸ್ಯಾನಿಟೈಸ್ ಕಡ್ಡಾಯ ಮಾಡಲಾಗಿತ್ತು. ಭದ್ರತೆಯ ದೃಷ್ಟಿಯಿಂದ ಸುಮಾರು 130 ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿತ್ತು. ಜತೆಗೆ 400 ವಿದ್ಯಾರ್ಥಿಗಳು ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ. ವೀಕೆಂಡ್ ಕಾರಣಕ್ಕೆ ಲಕ್ಷಾಂತರ ಜನರು ಚಿತ್ರಸಂತೆಯಲ್ಲಿ ಭಾಗಿಯಾದರು.
ಇದನ್ನೂ ಓದಿ | Santro Ravi Case : ಗೃಹ ಸಚಿವರ ಮನೆಯಲ್ಲಿ 15 ಲಕ್ಷ ರೂ. ಎಣಿಸಿದ ಸ್ಯಾಂಟ್ರೋ ರವಿ; ವಿಡಿಯೊ ಮಾಡಿದವರ ಬಗ್ಗೆ ತನಿಖೆಯಾಗಲಿ: ಎಚ್‌ಡಿಕೆ