Site icon Vistara News

Bangalore Chitrasanthe : ಚಿತ್ರಕಲಾ ಪರಿಷತ್‌ನಿಂದ ಜ.7ರಂದು ಬೆಂಗಳೂರು ಚಿತ್ರಸಂತೆ

Bengaluru Chitrasanthe 2024

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು (Bangalore Chitrasanthe) ವತಿಯಿಂದ 21ನೇ ಚಿತ್ರಸಂತೆಯು ಜನವರಿ 7 ರಂದು ನಡೆಯಲಿದೆ. ಭಾನುವಾರ ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಭಾನುವಾರ ಬೆಳಗ್ಗೆ 10:30ಕ್ಕೆ ಚಿತ್ರಸಂತೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಕಲಾ ಪ್ರದರ್ಶನವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಈ ಬಾರಿಯ ಚಿತ್ರಸಂತೆಯಲ್ಲಿ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭಾರತೀಯ ವಿಜ್ಞಾನಿಗಳಿಗೆ ಸಮರ್ಪಣೆ ಮಾಡಲಾಗುತ್ತಿದೆ. ಸಾಧನೆ ಮಾಡಿದ ವಿಜ್ಞಾನಿಗಳ ಮಾಹಿತಿ ಚಿತ್ರಸಂತೆಯಲ್ಲಿ ಇರಲಿದೆ.

ಚಿತ್ರಸಂತೆಗಾಗಿ ಅರ್ಜಿ ಸಲ್ಲಿಕೆ, ನೋಂದಣಿ ಶುಲ್ಕ, ಕಲಾವಿದರ ಆಯ್ಕೆ, ಮಳಿಗೆ ಎಲ್ಲವೂ ಆನ್‌ಲೈನ್‌ನಲ್ಲಿಯೇ ಮಾಡಲಾಗಿದೆ. ಸುಮಾರು 2,727 ಕಲಾವಿದರು ಚಿತ್ರಸಂತೆಯಲ್ಲಿ ಭಾಗವಹಿಸಲು ಅರ್ಜಿಯನ್ನು ಸಲ್ಲಿಸಿದ್ದರು. ಈ ಪೈಕಿ ಸುಮಾರು 22 ರಾಜ್ಯಗಳಿಂದ, 1,500 ಕಲಾವಿದರ ಕಲಾಕೃತಿಗಳು ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 300 ಮಳಿಗೆಗಳ ಸ್ಥಾಪನೆ ಮಾಡಲಾಗುತ್ತಿದೆ. ಈ ಬಾರಿ ವಿಶೇಷವಾಗಿ ತೊಗಲು ಗೊಂಬೆ ಹಾಗೂ ಮೈಸೂರು ಸಾಂಪ್ರದಾಯಿಕ ಕಲಾಕೃತಿಗಳ ಪ್ರದರ್ಶನ ಇರಲಿದೆ. ವ್ಯಂಗ್ಯ ಚಿತ್ರಗಳ ಪ್ರದರ್ಶನಕ್ಕೂ ಅವಕಾಶ ಇದೆ.

ಚಿತ್ರ ಪ್ರದರ್ಶನಕ್ಕೆ ಪ್ರತಿ ಬಾರಿ ಶಿವಾನಂದ ಸರ್ಕಲ್‌ನಿಂದ ಸ್ಟೀಲ್‌ ಬ್ರಿಡ್ಜ್ ಕೆಳಗೆ ಕೆಲ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಬಾರಿ ಸೇವಾದಳದ ಜಾಗದಲ್ಲೂ ಚಿತ್ರಸಂತೆ ನಡೆಲಿದ್ದು, ಹಿರಿಯ ಕಲಾವಿದರಿಗೆ, ವಿಶೇಷ ಚೇತನ ಕಲಾವಿದರಿಗೆ ನಿಗದಿಪಡಿಸಲಾಗಿದೆ.

ಕಲಾವಿದರು ಚಿತ್ರ ಪ್ರದರ್ಶನ ಮಾಡಬೇಕಾದರೆ ಗ್ಯಾಲರಿಗಳಲ್ಲಿ ಕಮಿಷನ್ ತೆಗೆದುಕೊಳ್ಳುತ್ತಾರೆ. ಆದರೆ ನಾವು ಯಾರ ಬಳಿಯೂ ಕಮಿಷನ್ ತೆಗೆದುಕೊಳ್ಳುವುದಿಲ್ಲ. ಕಳೆದ ಚಿತ್ರಸಂತೆಯಲ್ಲಿ 5 ಕೋಟಿಗೂ ಹೆಚ್ಚು ಮೊತ್ತದ ಕಲಾಕೃತಿಗಳು ಮಾರಾಟವಾಗಿದ್ದವು. ಬೇರೆ ರಾಜ್ಯದಿಂದ ಬರುವ ಕಲಾವಿದರಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ತಿಳಿಸಿದರು.

ಇದನ್ನೂ ಓದಿ: Malpe Beach : ಸ್ಕೂಟಿ ಸಮೇತ ಮಲ್ಪೆ ಸಮುದ್ರಕ್ಕೆ ಬಿದ್ದ ಮೀನುಗಾರ ಮೃತ್ಯು

ಪಾರ್ಕಿಂಗ್‌ ವ್ಯವಸ್ಥೆ

ಚಿತ್ರಸಂತೆಯು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಸುಮಾರು 5-6 ಲಕ್ಷ ಮಂದಿ ಬರುವ ನಿರೀಕ್ಷೆ ಇದೆ. ಹೀಗಾಗಿ ವಿಧಾನಸೌಧ, ಮಂತ್ರಿಮಾಲ್, ಮೆಜೆಸ್ಟಿಕ್, ಮೆಟ್ರೋ ಸ್ಟೇಷನ್‌ಗೆ ಫೀಡರ್ ಬಸ್ ವ್ಯವಸ್ಥೆ ಕೇಳಿದ್ದೇವೆ. ಚಿತ್ರಸಂತೆಗೆ ಬರುವ ಜನರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ರೇಸ್ ಕೋರ್ಸ್, ಬಿಡಿಎ ಆವರಣ, ರೈಲ್ವೆ ಪ್ಯಾರರಲ್ ರಸ್ತೆಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಂದು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಮಾಹಿತಿ ನೀಡಿದರು. ಸ್ವಚ್ಚತೆಗೆ ಹೆಚ್ಚು ಒತ್ತು ನೀಡಲಾಗಿದೆ. ಇನ್ನು ಸಂತೆ ಜತೆಗೆ ಫುಡ್ ಕೋರ್ಟ್‌ಗಳನ್ನು ಮಾಡಲು ಚಿಂತನೆ ನಡೆದಿದೆ.

ಜ.6 ರಂದು ಸಮ್ಮಾನ್‌ ಪ್ರಶಸ್ತಿ ಪ್ರಧಾನ

ಜ.6 ರಂದು ಚಿತ್ರಕಲಾ ಸಮ್ಮಾನ್ ಪ್ರಶಸ್ತಿ ಪ್ರಧಾನವನ್ನು ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾಡಲಿದ್ದಾರೆ. ಹೆಚ್.ಕೆ.ಕೇಜ್ರಿವಾಲ್ ಪ್ರಶಸ್ತಿಯನ್ನು ಪ್ರೋ ವಸುಧಾ ತೋಜುರ್‌ ಅವರಿಗೆ, ಎಂ.ಆರ್ಯಮೂರ್ತಿ ಪ್ರಶಸ್ತಿಯನ್ನು ಪ್ರೋ ಬಿ.ವಿ.ಸುರೇಶ್‌ರಿಗೆ ಪ್ರಧಾನ ಮಾಡಲಾಗುತ್ತಿದೆ. ಡಿ.ದೇವರಾಜ್ ಅರಸು ಪ್ರಶಸ್ತಿಯನ್ನು ಎಲ್.ಎನ್.ತಲ್ಲೂರ್‌ಗೆ, ವೈ.ಸುಬ್ರಮಣ್ಯರಾಜು ಪ್ರಶಸ್ತಿಯನ್ನು ಬಿ.ಬಿ.ರಾಘವೇಂದ್ರ ಅವರಿಗೆ ಪ್ರಧಾನ ಮಾಡಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version