Site icon Vistara News

ಗೃಹ ಸಚಿವರ ಮನೆಗೇ ಎಬಿವಿಪಿ ಮುತ್ತಿಗೆ, ಗುಪ್ತಚರ ವೈಫಲ್ಯ ಒಪ್ಪಿಕೊಂಡ ಪೊಲೀಸ್ ಕಮಿಷನರ್

ABVP protest

ಬೆಂಗಳೂರು: ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮನೆಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ಪ್ರಕರಣದಲ್ಲಿ ಗುಪ್ತಚರ ವೈಫಲ್ಯವಾಗಿದೆ ಎನ್ನುವುದನ್ನು ನಗರ ಪೊಲೀಸ್‌ ಕಮಿಷನರ್ ಪ್ರತಾಪ್‌ ರೆಡ್ಡಿ ಒಪ್ಪಿಕೊಂಡಿದ್ದಾರೆ.

ʻʻಈ ರೀತಿ ನಡೆಯುವ ಬಗ್ಗೆ ಮುನ್ಸೂಚನೆ ಅರಿತುಕೊಳ್ಳಬೇಕಿತ್ತು. ಅದು ನಮ್ಮಿಂದ ಆಗಿಲ್ಲʼʼ ಎಂದು ಹೇಳುವ ಮೂಲಕ ಆಯಕ್ತ ಪ್ರತಾಪ್‌ ರೆಡ್ಡಿ ವೈಫಲ್ಯ ಒಪ್ಪಿಕೊಂಡಿದ್ದಾರೆ. ಇದು ಸಮರ್ಥನೆ ಮಾಡುವ ವಿಚಾರವೇ ಅಲ್ಲ ಎಂದಿದ್ದಾರೆ.

ʻʻನಮಗೆ ಹತ್ತು ಗಂಟೆಗೆ ವಿಚಾರ ಗೊತ್ತಾಯಿತು. ನಮ್ಮ ಡಿಸಿಪಿ, ಹೆಚ್ಚುವರಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆʼʼ ಎಂದು ಹೇಳಿದ ಅವರು ಪರಿಸ್ಥಿತಿ ಈ ರೀತಿಯ ತಿರುವು ಪಡೆಯುವ ಕಲ್ಪನೆ ಇರಲಿಲ್ಲ ಎಂದರು.

ʻʻಸುಮಾರು ೫೦ರಷ್ಟಿದ್ದ ಎಬಿವಿಪಿ ಕಾರ್ಯಕರ್ತರು ಮೊದಲು ಮೌನವಾಗಿ ಪ್ರತಿಭಟನೆ ಮಾಡುತ್ತಿದ್ದರು ಎಂದು ಗೊತ್ತಾಗಿದೆ. ಆಗ ಸ್ಥಳದಲ್ಲಿ ಮನೆ ಕಾವಲಿಗೆ ನೇಮಕವಾಗಿದ್ದ ಸಿಬ್ಬಂದಿ ಇದ್ದರು. ಆ ಬಳಿಕ ಸಿಬ್ಬಂದಿ ಗೇಟ್‌ ಮುಚ್ಚಿದ್ದಾರೆ. ಇದಾದ ಬಳಿ ಕಾರ್ಯಕರ್ತರು ಗೇಟ್‌ ತಳ್ಳಿಕೊಂಡು ಒಳಗೆ ನುಗ್ಗಲು ಯತ್ನಿಸಿದ್ದಾರೆ. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದು ಹೊರ ಹಾಕಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆʼʼ ಎಂದರು ಪ್ರತಾಪ್‌ ರೆಡ್ಡಿ ಹೇಳಿದರು.

ʻʻಹಾಗಂತ ಇದು ಸಮರ್ಥನೆ ಮಾಡಿಕೊಳ್ಳುವ ವಿಚಾರವಲ್ಲ. ಪೊಲೀಸರು ಪೂರ್ವ ಮಾಹಿತಿ ಸಂಗ್ರಹ ಮಾಡಬೇಕಿತ್ತು. ಅದು ಮಾಡದೆ ತಪ್ಪಾಗಿದೆ. ಅಧಿಕಾರಿಗಳ ತಪ್ಪು ಕಂಡು ಬಂದರೆ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುತ್ತದೆʼʼ ಎಂದು ಹೇಳಿದ ಪ್ರತಾಪ್‌ ರೆಡ್ಡಿ, ʻʻಈ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಲಾಗಿದೆ, ನಾನೂ ಮಾತಾಡಿದ್ದೇನೆʼʼ ಎಂದರು.

ಶನಿವಾರ ಮುಂಜಾನೆ ೫೦ರಷ್ಟು ಎಬಿವಿಪಿ ಕಾರ್ಯಕರ್ತರು ಜಯಮಹಲ್‌ನಲ್ಲಿರುವ ಗೃಹ ಸಚಿವರ ಮನೆ ಮುಂದೆ ಧರಣಿ ನಡೆಸಿ ಬಳಿಕ ಮನೆಗೆ ಮುತ್ತಿಗೆ ಹಾಕಿದ್ದರು.

Praveen Nettaru | ಗೃಹ ಸಚಿವರ ಮನೆಗೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ, ರಾಜೀನಾಮೆಗೆ ಒತ್ತಾಯ

Exit mobile version