Site icon Vistara News

Bangalore Rain | ಜನರ ಸಂಕಷ್ಟದ ಹೊಳೆಯಲ್ಲಿ ಟ್ಯೂಬ್‌ನಲ್ಲಿ ಕುಳಿತು ಪ್ರತಿಭಟಿಸಿದ ಕಾಂಗ್ರೆಸ್‌ ಯುವ ನಾಯಕ

Nalapad protest

ಬೆಂಗಳೂರು: ರಾಜಧಾನಿಯ ಹೊರವರ್ತುಲ ರಸ್ತೆಯ ಉದ್ದಕ್ಕೂ ಮಳೆಯಿಂದಾಗಿ ಭಾಗಿ ಅನಾಹುತ ಉಂಟಾಗಿದೆ. ಇಲ್ಲಿನ ಜನರು ಅಕ್ಷರಶಃ ಪರದಾಡುತ್ತಿದ್ದಾರೆ. ಈ ನಡುವೆ, ಈ ಭಾಗದಲ್ಲಿ ಯುವ ಕಾಂಗ್ರೆಸ್‌ ನಾಯಕ ಮೊಹಮ್ಮದ್‌ ನಲಪಾಡ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇಕೋ ಸ್ಪೇಸ್ ಪ್ರದೇಶಕ್ಕೆ ತಮ್ಮ ದಂಡಿನೊಂದಿಗೆ ಬಂದ ಮಹಮದ್‌ ನಲಪಾಡ್‌ ಟ್ಯೂಬ್ ಮೇಲೆ ಕೂತು ಪ್ರತಿಭಟನೆ ನಡೆಸಿದರು. ಕಾರ್ಯಕರ್ತರು ಅವರನ್ನು ನೀರಿನಲ್ಲಿ ಎಳೆದುಕೊಂಡು ಹೋದರು. ಆದರೆ, ಪೊಲೀಸರು ಇವರ ಪ್ರತಿಭಟನೆಯನ್ನು ತಡೆದರು. ಈ ಹಂತದಲ್ಲಿ ಪೊಲೀಸರು ಮತ್ತು ನಲಪಾಡ್‌ ನಡುವೆ ವಾಗ್ವಾದ ನಡೆಯಿತು.

ಬಿಜೆಪಿ ನಾಯಕರ ಮೇಲೆ ಆರೋಪ
ಪೊಲೀಸರು ತಡೆದ ಘಟನೆಯಿಂದ ಆಕ್ರೋಶಿತರಾದ ನಲಪಾಡ್‌ ಅವರು ಈ ಭಾಗದಲ್ಲಿ ಬಿಜೆಪಿ ನಾಯಕರೇ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಅವರಿಂದಾಗಿಯೇ ಇಲ್ಲಿಗೆ ಈ ಸ್ಥಿತಿ ಬಂದಿರುವುದು ಎಂದು ಆಪಾದಿಸಿದರು.

ನಮ್ಮನ್ನು ಅರೆಸ್ಟ್‌ ಮಾಡ್ತೀರಾ? ನಮ್ಮ ಸರಕಾರ ಬಂದೇ ಬರುತ್ತದೆ ಎಂದು ಹೇಳಿದರು ನಲಪಾಡ್‌. ನಾವು ಇಲ್ಲಿಗೆ ಬಂದಿರುವುದು ಜನರಿಗೆ ಸಹಾಯ ಮಾಡಲಿಕ್ಕಾಗಿ. ಸಹಾಯ ಮಾಡಲು ಬಂದರೂ ಬಂಧಿಸುತ್ತಾರೆ ಎಂದರೆ ಏನಿದು ಎಂದು ಪ್ರಶ್ನಿಸಿದರು.

ʻʻಇದು ೪೦% ಸರ್ಕಾರ. ನಾನು ಹೋಗ್ತೇನೆ.. ಎಷ್ಟು ಕಮಿಷನ್ ಬೇಕು ಅಂತ ಕೇಳ್ತೇನೆʼʼ ಎಂದು ಅಬ್ಬರಿಸಿದರು ನಲಪಾಡ್‌. ಆದರೆ, ಕಾಂಗ್ರೆಸ್‌ ಕಾರ್ಯಕರ್ತರು ತಾವು ಬರುವಾಗಲೇ ಪ್ಲಕಾರ್ಡ್‌ ಸೇರಿದಂತೆ ಸರ್ವ ರೀತಿಯಲ್ಲೂ ಸಜ್ಜಾಗಿದ್ದು ಕಂಡುಬಂತು. ಕೊನೆಗೆ ಪೊಲೀಸರು ಕಾಂಗ್ರೆಸ್‌ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

Exit mobile version