ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದು ಸಣ್ಣ ಮಳೆಯಾದರೂ (Bangalore Rain) ಕೆರೆಯಂತಾಗುತ್ತದೆ ಎಂಬ ಮಾತು ಅಕ್ಷರಶಃ ಸತ್ಯವಾಗಿದೆ. ಇದರ ಪರಿಣಾಮ ಮಲ್ಲೇಶ್ವರದಲ್ಲಿ ಚಿನ್ನದಂಗಡಿಯೊಳಗೆ ನೀರು ನುಗ್ಗಿ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಭಾನುವಾರ (ಮೇ 21) ಸುರಿದ ಮಳೆಯು ನಾನಾ ಅವಾಂತರವನ್ನೇ ಸೃಷ್ಟಿಸಿದೆ. ಮಲ್ಲೇಶ್ವರದ ನೆಲಮಹಡಿಯಲ್ಲಿದ್ದ ನಿಹಾನ್ ಜ್ಯುವೆಲ್ಲರಿ ಶಾಪ್‌ಗೆ ಏಕಾಏಕಿ ನೀರು ಪ್ರವಾಹದಂತೆ ನುಗ್ಗಿತ್ತು.
ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯು ಜ್ಯುವೆಲ್ಲರಿ ಶಾಪ್ ಪೂರ್ತಿ ಮುಳುಗುವಂತೆ ಮಾಡಿತ್ತು. ಅಂಗಡಿಯಲ್ಲಿದ್ದ ಫರ್ನಿಚರ್ಸ್, ಜ್ಯುವೆಲ್ಲರಿ, 50 ಸಾವಿರ ರೂ. ಹಣ ಎಲ್ಲವೂ ನೀರಿನಲ್ಲಿ ಕೊಚ್ಚಿ ಹೋಗಿತ್ತು. ಜ್ಯುವೆಲ್ಲರಿ ಶಾಪ್‌ನ ಹಿಂಭಾಗದ ಬಾಗಿಲ ಮೂಲಕ ಎಲ್ಲ ವಸ್ತುಗಳು ಕೊಚ್ಚಿ ಹೋಗಿದ್ದವು.
ಶಾಪ್ ಆರಂಭವಾಗಿ ಇದೇ ಮೇ 27ಕ್ಕೆ ಒಂದು ವರ್ಷ ತುಂಬಲಿದೆ. ಆದರೆ ಏಕಾಏಕಿ ಮಳೆ ನೀರು ರಭಸವಾಗಿ ಹರಿದು ಬಂದು ಅಂಗಡಿಯಲ್ಲಿದ್ದ ವಸ್ತುಗಳನ್ನು ಕಳೆದುಕೊಂಡ ಮಾಲೀಕರು ಕಂಗಾಲಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಪ್ ಮಾಲೀಕರಾಗಿರುವ ಪ್ರಿಯಾ, ನೀರು ತುಂಬಿದಾಗಲೇ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿದ್ದೆವು. ಆದರೆ, ಯಾರೊಬ್ಬರೂ ಕ್ಯಾರೇ ಅನ್ನಲಿಲ್ಲ. ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದ ಆಭರಣ, ಫರ್ನಿಚರ್ಸ್ ಎಲ್ಲವೂ ನೀರು ಪಾಲಾಗಿದೆ ಎಂದು ಕಣ್ಣೀರು ಹಾಕಿದರು.
ಇದನ್ನೂ ಓದಿ: Rain News: ವಿದ್ಯುತ್ ತಂತಿ ತುಳಿದು ಯುವಕ ಸಾವು; ಆಲಿಕಲ್ಲು ಮಳೆಗೆ ನೆಲಕಚ್ಚಿದ ಬೆಳೆ, ರೈತರು ಕಂಗಾಲು