ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿಯೂ ಮಳೆಯ ಅಬ್ಬರ ಮುಂದುವರಿದಿದ್ದು, ಹಲವೆಡೆ ಬಿರುಗಾಳಿ, ಗುಡುಗು ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಪ್ರಮುಖ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ಇನ್ನು ಕೆಲವು ಕಡೆ ಬೃಹತ್ ಮರಗಳು ನೆಲಕ್ಕುರುಳಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು.
ತಪ್ಪಿದ ಮತ್ತೊಂದು ದುರಂತ
ಕೆ.ಆರ್. ಸರ್ಕಲ್ ಅಂಡರ್ ಪಾಸ್ ದುರಂತದ ಬಳಿಕ ಮತ್ತೊಂದು ದುರಂತ ತಪ್ಪಿದೆ. ಶೇಷಾದ್ರಿಪುರಂ ಅಂಡರ್ ಪಾಸ್‌ನ ನೀರಿನಲ್ಲಿ ಬಿಎಂಟಿಸಿ ಬಸ್ ಸಿಲುಕಿದ್ದು, 20 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಬಸ್ ಮುಂದೆ ಮೂವ್ ಆಗ್ತಿದ್ದಂತೆ, ಅಪಾಯದ ಮುನ್ಸೂಚನೆ ಅರಿತು ಬಸ್ ಚಾಲಕ ಅಲ್ಲೇ ನಿಲ್ಲಿಸಿದ್ದಾರೆ. ನಂತರ ಬಸ್‌ನಲ್ಲಿದ್ದವರನ್ನು ಸ್ಥಳೀಯ ವ್ಯಕ್ತಿ ಮಣಿಕಂಠ ಹೊರ ಕರೆತಂದಿದ್ದಾರೆ. ಓರ್ವ ವೃದ್ಧೆ, ಇಬ್ಬರು ಮಹಿಳೆಯರು, ಮಗುವನ್ನು ಬಸ್‌ನಿಂದ ರಕ್ಷಣೆ ಮಾಡಲಾಗಿದೆ.
ಅಂಡರ್‌ಪಾಸ್‌ನಲ್ಲಿ ನೀರಿಗೆ ಬಿದ್ದ ಇಬ್ಬರು ಯುವಕರು
ಬಿರುಸಿನ ಮಳೆಯಿಂದ ಕೋರಮಂಗಲ, ಮಡಿವಾಳ, ವಿಲ್ಸನ್ ಗಾರ್ಡನ್, ಡೈರಿ ಸರ್ಕಲ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು K.R. ಸರ್ಕಲ್ ಅಂಡರ್ ಪಾಸ್‌ನಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದರಿಂದ ಬ್ಯಾರಿಕೇಡ್ ಹಾಕಿ ಮುಚ್ಚಲಾಗಿತ್ತು. ಹೆಚ್ಚು ನೀರು ಇರುವುದು ತಿಳಿಯದೇ ಬೈಕ್‌ನಲ್ಲಿ ವೇಗವಾಗಿ ಬಂದ ಇಬ್ಬರು ಯುವಕರು ನೀರಿಗೆ ಬಿದ್ದಿದ್ದು, ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಮೆಟ್ರೋ ವಯಡಕ್ಟ್ ಮೇಲೆ ಬಿದ್ದ ಮರ
ಸಂಜೆ ಭಾರಿ ಮಳೆಯಿಂದಾಗಿ ಎಂಜಿ ರಸ್ತೆ ಮತ್ತು ಟ್ರಿನಿಟಿ ರೋಡ್ ನಿಲ್ದಾಣದ ನಡುವಿನ ವಯಡಕ್ಟ್ ಟ್ರ್ಯಾಕ್‌ನಲ್ಲಿ ಮರ ಬಿದ್ದ ಹಿನ್ನೆಲೆಯಲ್ಲಿ ಎಂಜಿ ರಸ್ತೆ ಮತ್ತು ಇಂದಿರಾನಗರ ನಡುವೆ ರೈಲು ಸೇವೆ ಸ್ಥಗಿತಗೊಂಡಿದೆ. ಆದರೆ, ಇಂದಿರಾನಗರ ಮತ್ತು ವೈಟ್‌ಫೀಲ್ಡ್ ನಡುವೆ ಶಾರ್ಟ್ ಲೂಪ್‌ಗಳು ಚಾಲನೆಯಲ್ಲಿವೆ. ಚಲ್ಲಘಟ್ಟ ಮತ್ತು ಎಂಜಿ ರೋಡ್ ನಡುವೆ
ಉಂಟಾದ ಅನನುಕೂಲತೆ ಬಗ್ಗೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸಿದೆ.
ನಗರದ ಬನಶಂಕರಿ, ಕುಮಾರಸ್ವಾಮಿ ಲೇಔಟ್, ಎಳಚೇನಹಳ್ಳಿ, ಉತ್ತರಹಳ್ಳಿ, ಪದ್ಮನಾಭ ನಗರ, ಜಯನಗರ, ಪೀಣ್ಯ, ಬನ್ನೇರುಘಟ್ಟ ರಸ್ತೆ, ಮಲ್ಲೇಶ್ವರ, ರೇಸ್ ಕೋರ್ಸ್, ವಿಜಯನಗರ, ಶಾಂತಿನಗರ, ಎಂಜಿ ರೋಡ್, ಕೆ.ಆರ್ ಸರ್ಕಲ್, ಚಾಲುಕ್ಯ ಸರ್ಕಲ್ ಸೇರಿದಂತೆ ಹಲವು ಕಡೆ ಬಿರುಸಿನ ಮಳೆಯಾಗಿದೆ.
ಮರಗಳು ಬಿದ್ದು ಹಲವು ವಾಹನ ಜಖಂ
ಭಾರಿ ಮಳೆಯಿಂದ ಹಲವೆಡೆ ಬೃಹತ್ ಮರಗಳು ಧರೆಗುರುಳಿವೆ. ಜಯನಗರ-ಬನ್ನೇರುಘಟ್ಟ ರಸ್ತೆ, ಪೀಣ್ಯ ಬಳಿ ಮರಗಳು ನೆಲಕ್ಕುರುಳಿವೆ. ಪೀಣ್ಯದ ಅರವಿಂದ ಮೋಟಾರ್ಸ್ ಬಳಿ ಕಾರಿನ ಮೇಲೆ ಮರ ಬಿದ್ದಿದ್ದು, ಕಾರಿನಲ್ಲಿ ಸಿಲುಕಿರುವ ಚಾಲಕನನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಇನ್ನು ಬನ್ನೇರುಘಟ್ಟ ರಸ್ತೆ ವೆಗಾ ಸಿಟಿ ಮಾಲ್ ಬಳಿ ಮರ ಧರೆಗುರುಳಿದ್ದು, ತೆರವು ಕಾರ್ಯಾಚರಣೆ ನಡೆಯುತ್ತಿದೆ. ಅದೇ ರೀತಿ ಜಯನಗರದ 4ನೇ ಟಿ ಬ್ಲಾಕ್ ಬಳಿ ಮರ ಧರೆಗುರುಳಿದಿದೆ, ರಾಜಾಜಿನಗರದ ಮಂಜುನಾಥನಗರದಲ್ಲಿ ಮರ ಬಿದ್ದಿದೆ. ಬಸವನಗುಡಿ ರಾಮಕೃಷ್ಣ ಆಶ್ರಮ ಬಳಿ ಮತ್ತು ಕೆಜಿ ರಸ್ತೆ ಪೋತೀಸ್ ಮುಂಭಾಗ ಬೃಹತ್ ಮರ ಧರೆಗಿರುಳಿದೆ. ಹುಳಿಮಾವು ರಸ್ತೆಯಲ್ಲಿ ಮರ ಧರೆಗುರುಳಿದಿದ್ದು, ಪಾನಿಪುರಿ ಅಂಗಡಿ, ಸುಮಾರು 10 ಬೈಕ್‌ಗಳು ಜಖಂಗೊಂಡಿವೆ.
ಇದನ್ನೂ ಓದಿ | Karnataka Rain : ವೀಕೆಂಡ್ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ
ಇನ್ನು ಹಲವು ಕಡೆ ತಗ್ಗು ಪ್ರದೇಶಗಳ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಗೋವಿಂದರಾಜ ನಗರದ ಪಟ್ಟೇಗಾರ ಪಾಳ್ಯದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಜೋರಾದ ಮಳೆ ಹಿನ್ನೆಲೆ ಪ್ರಮುಖ ರಸ್ತೆಗಳು ಹೊಳೆಯಂತೆ ಬದಲಾಗಿದ್ದರಿಂದ ಬೈಕ್ ಸವಾರರು ಪರದಾಡಿದರು. ಹಲವೆಡೆ ವಾಹನಗಳು ಕೆಟ್ಟುನಿಂತು ಸವಾರರು ತೊಂದರೆಪಟ್ಟರು.