ಬೆಂಗಳೂರು: ವಿವಿಧ ಪದವಿ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಅನುತ್ತೀರ್ಣಗೊಂಡಿರುವ ಹಳೇ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಬಹುದು. ಇಂಥದ್ದೊಂದು ಅವಕಾಶವನ್ನು ಕಲ್ಪಿಸಲು ಬೆಂಗಳೂರು ವಿಶ್ವವಿದ್ಯಾಲಯವು (Bangalore University) ಮುಂದಾಗಿದೆ.
2004-05 ರಿಂದ 2017-18ರ ಅವಧಿಯ ಬೆಂಗಳೂರು ವಿಶ್ವವಿದ್ಯಾಲಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಈ ನಿರ್ಧಾರದಿಂದ 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ. ಎಲ್ಲ ಸೆಮಿಸ್ಟರ್ ಪರೀಕ್ಷೆ, ದೂರ ಶಿಕ್ಷಣ ಮೂಲಕ ಪದವಿ ವ್ಯಾಸಂಗ ಮಾಡಿದವರಿಗೂ ಅನ್ವಯವಾಗಲಿದೆ.
ಅಂದಹಾಗೆ, ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ನಿಯಮದ ಪ್ರಕಾರ ಪದವಿಗೆ ಪ್ರವೇಶ ಪಡೆಯುವವರು 5 ವರ್ಷದೊಳಗೆ ಬರುವ ಪರೀಕ್ಷೆಯಲ್ಲಿ ಎಷ್ಟು ಬಾರಿ ಬೇಕಾದರೂ ಪರೀಕ್ಷೆಯನ್ನು ಬರೆಯುವ ಅವಕಾಶ ಕಲ್ಪಿಸಲಾಗಿದೆ. ಆದರೆ, ಈ ಅವಕಾಶ 5 ವರ್ಷದ ನಂತರ ಫೇಲಾದ ವಿದ್ಯಾರ್ಥಿಗಳಿಗೆ ಇರಲಿಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ಉನ್ನತ ಮಟ್ಟದ ಉದ್ಯೋಗ ಪಡೆಯುವಲ್ಲಿ ವಂಚಿತರಾಗುತ್ತಿದ್ದರು. ಹೀಗಾಗಿ ಇದನ್ನು ತಪ್ಪಿಸುವ ಉದ್ದೇಶದಿಂದ ಇಂಥ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಬೆಂಗಳೂರು ವಿವಿ ಸುವರ್ಣ ಅವಕಾಶ ನೀಡಿದೆ.
2004-05ರಿಂದ 2017-18ರ ಅವಧಿಯಲ್ಲಿ ಬೆಂಗಳೂರು ವಿವಿಯಲ್ಲಿ ಫೇಲಾದ ವಿದ್ಯಾರ್ಥಿಗಳು ಪರೀಕ್ಷೆ ಶುಲ್ಕ ಕಟ್ಟಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಫೇಲಾದ ವಿದ್ಯಾರ್ಥಿಗಳಿಗೆ ಮುಂದಿನ 2023ರ ಫೆಬ್ರವರಿಯಲ್ಲಿ ಪರೀಕ್ಷೆ ನಡೆಸಲು ಚಿಂತನೆ ಮಾಡಲಾಗಿದೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪ್ರಸ್ತುತ ಪಠ್ಯ ಪುಸ್ತಕವನ್ನು ವ್ಯಾಸಂಗ ಮಾಡಬೇಕಿದ್ದು, ಶೀಘ್ರದಲ್ಲೇ ಈ ಸಂಬಂಧ ಬೆಂಗಳೂರು ವಿಶ್ವವಿದ್ಯಾಲಯವು ಸುತ್ತೋಲೆ ಹೊರಡಿಸಲಿದೆ.
ಇದನ್ನೂ ಓದಿ | Congress allegation | ಮತದಾರರ ಪಟ್ಟಿ ಗೋಲ್ಮಾಲ್ ಆರೋಪಕ್ಕೆ ಉತ್ತರ ನೀಡಲು ಸಿಎಂ ಬೊಮ್ಮಾಯಿ ನಕಾರ