ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ (Bangalore University) ಜ್ಞಾನಭಾರತಿ ಕ್ಯಾಂಪಸ್ ಜಾಗ ದಿನದಿಂದ ದಿನಕ್ಕೆ ಕಿರಿದಾಗುತ್ತಿದೆ. ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲ ಬೇರೆ ಬೇರೆ ಸಂಸ್ಥೆಗಳಿಗೆ ಒಂದೊಂದಷ್ಟು ಜಾಗವನ್ನು ಹಂಚುತ್ತಾ ಬರುತ್ತಿದೆ. ಇದಕ್ಕೆ ವಿವಿಧ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಇದೀಗ ಕ್ಯಾಂಪಸ್ ಜಾಗವನ್ನು ಸಂರಕ್ಷಿಸಿಕೊಳ್ಳಲು ದಿಟ್ಟ ಹೆಜ್ಜೆ ಇಟ್ಟಿದೆ.
ಇತ್ತೀಚೆಗಷ್ಟೇ ಉನ್ನತ ಶಿಕ್ಷಣ ಇಲಾಖೆಯ ಅಪರ ಕಾರ್ಯದರ್ಶಿ, ಬೆಂಗಳೂರು ವಿವಿ ಕುಲಸಚಿವರಿಗೆ ಪತ್ರವೊಂದನ್ನು ಬರೆದಿದ್ದರು. ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ 4 ಎಕರೆ ಜಾಗ ನೀಡುವ ಸಂಬಂಧ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದರು. ಇದಕ್ಕೆ ಪತ್ರದ ಮೂಲಕವೇ ಉತ್ತರ ನೀಡಿರುವ ವಿವಿ ಕುಲಸಚಿವರು ಯಾವುದೇ ಕಾರಣಕ್ಕೂ ಕ್ಯಾಂಪಸ್ ಭೂಮಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಬೆಂಗಳೂರು ವಿವಿ ಕ್ಯಾಂಪಸ್‌ನ ಸುಮಾರು 1,200 ಎಕರೆಯಷ್ಟು ಜಾಗದಲ್ಲಿ 297 ಎಕರೆ ಜಾಗವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಂಗಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ.
⦁ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆ- 81.2 ಎಕರೆ
⦁ ಐಸೆಕ್-38.2 ಎಕರೆ
⦁ ಅಂಬೇಡ್ಕರ್ ಸ್ಕೂಲ್ ಎಕನಾಮಿಕ್ಸ್ ವಿಶ್ವವಿದ್ಯಾಲಯಕ್ಕೆ (ಬೇಸ್)-40 ಎಕರೆ
⦁ ರಾಷ್ಟ್ರೀಯ ಕಾನೂನು ಶಾಲೆಗೆ 24 ಎಕರೆ
⦁ ಕಲಾಗ್ರಾಮಕ್ಕೆ 20 ಎಕರೆ
⦁ ಆಟೋಮ್ಯಾಟಿಕ್ ಎನರ್ಜಿ-15 ಎಕರೆ
ಸುಮಾರು 297 ಎಕರೆ ಜಾಗವನ್ನು ಸರ್ಕಾರದ ಸೂಚನೆಯಂತೆ ಬೇರೆ ಬೇರೆ ಸಂಸ್ಥೆಗಳಿಗೆ ನೀಡಲಾಗಿದೆ. ಹೀಗಾಗಿ ಇನ್ನು ಮುಂದೆ ಬೆಂಗಳೂರು ವಿಶ್ವವಿದ್ಯಾಲಯ ಜಾಗವನ್ನು ಯಾವುದೇ ಸಂಸ್ಥೆಗೂ ಬಿಟ್ಟು ಕೊಡದೇ ಶೈಕ್ಷಣಿಕ ಚಟುವಟಿಕೆಗೆ ಮಾತ್ರ ಮುಡಿಪಾಗಿಡಲು ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಇನ್ನು ಈ ನಿರ್ಧಾರವನ್ನು ವಿದ್ಯಾರ್ಥಿ ಸಂಘಟನೆಗಳು ಸ್ವಾಗತಿಸಿವೆ.
ಇದನ್ನೂ ಓದಿ: KC General hospital: ಎಕ್ಸ್ ರೇ, ಸ್ಕ್ಯಾನಿಂಗ್‌ಗೆ ಕರೆಂಟ್ ಪ್ರಾಬ್ಲಂ; ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ
ಬೆಂಗಳೂರು ಮಹಾನಗರದಲ್ಲಿ ಈ ರೀತಿಯ ವಿಶಾಲ ಕ್ಯಾಂಪಸ್ ಹೊಂದಿರುವ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು ವಿವಿ ಸಹ ಒಂದು. ಇದನ್ನು ಶೈಕ್ಷಣಿಕ ಚಟುವಟಿಕೆಗೆ ಮಾತ್ರ ಮುಡಿಪಾಗಿಸಿಕೊಂಡು ಹೋಗುವುದು ಆಡಳಿತ ಮಂಡಳಿಯ ಆದ್ಯ ಕರ್ತವ್ಯವಾಗಿದೆ. ಸರ್ಕಾರ ಸೂಚಿಸಿದಂತೆ ಜಾಗವನ್ನು ಇತರೆ ಅನ್ಯ ಸಂಸ್ಥೆಗಳಿಗೆ ನೀಡುತ್ತಾ ಹೋದರೆ ಕ್ಯಾಂಪಸ್ ಅಧೋಗತಿ ತಲುಪಲಿದೆ. ಹೀಗಾಗಿ ಸದ್ಯ ವಿವಿ ಕುಲಸಚಿವ ಮಹೇಶ್ ಬಾಬು ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.