Site icon Vistara News

Bangalore Water Crisis: ಕಾವೇರಿ ನೀರಿನ ದುರ್ಬಳಕೆ; 1.05 ಲಕ್ಷ ದಂಡ ವಸೂಲಿ ಮಾಡಿದ ಜಲಮಂಡಳಿ

misuse of Cauvery water

ಬೆಂಗಳೂರು: ರಾಜಧಾನಿಯಲ್ಲಿ ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ (Bangalore Water Crisis) ಉಂಟಾಗಿರುವುದರಿಂದ ನೀರಿನ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ಬೆಂಗಳೂರು ಜಲಮಂಡಳಿ ಹಲವು ಕ್ರಮ ಕೈಗೊಂಡಿದೆ. ಕಾವೇರಿ ನೀರು ದುರ್ಬಳಕೆ ಮಾಡಿದರೆ ದಂಡಾಸ್ತ್ರ ಪ್ರಯೋಗ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಇದೀಗ ನಿಯಮ ಉಲ್ಲಂಘಿಸಿದವರಿಂದ 1,05,000 ರೂ. ದಂಡವನ್ನು ವಸೂಲಿ ಮಾಡಿರುವುದು ಕಂಡುಬಂದಿದೆ.

ಕುಡಿಯುವ ನೀರಿನ ಅಭಾವದ ಹಿನ್ನಲೆ ಕಾವೇರಿ ನೀರು ದುರುಪಯೋಗ ಮಾಡದಂತೆ ಜಲಮಂಡಳಿ ಸೂಚನೆ ನೀಡಿತ್ತು. ಆದಾಗ್ಯೂ ಹಲವೆಡೆ ನೀರಿನ ದುಂದುವೆಚ್ಚ ಮಾಡುವುದು ಕಂಡುಬರುತ್ತಿದೆ. ಕಾವೇರಿ ನೀರಿನಿಂದ ಕಾರು ತೊಳೆಯುವುದು, ಸ್ವಚ್ಛತೆ ಸೇರಿ ಅನ್ಯ ಉದ್ದೇಶಗಳಿಂದ ಕಾವೇರಿ ನೀರು ದುರುಪಯೋಗ ಮಾಡಿದವರಿಗೆ ಜುಲ್ಮಾನೆ ವಿಧಿಸಲಾಗಿದೆ.

ಬೆಂಗಳೂರಲ್ಲಿ ಈ 7 ಕೆಲಸಕ್ಕೆ ನೀರು ಬಳಸಿದ್ರೆ 5000 ರೂ. ದಂಡ! ನೀವೂ ದೂರು ಕೊಡಿ

ಬೆಂಗಳೂರು: ಕರ್ನಾಟಕವು ಹಿಂದೆಂದೂ ಕಂಡರಿಯದ ಭೀಕರ ಬರಗಾಲಕ್ಕೆ ತುತ್ತಾಗಿದೆ. ಎಲ್ಲೆಲ್ಲೂ ನೀರಿಗೆ ಹಾಹಾಕಾರ (Water Crisis) ಶುರುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಈ ಸಮಸ್ಯೆ (Bangalore Water Problem) ಮತ್ತಷ್ಟು ಉಲ್ಬಣಿಸಿದೆ. ಈ ನಡುವೆ ನೀರಿನ ಸಮರ್ಪಕ ನಿರ್ವಹಣೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (Bangalore Water Supply and Sewerage Board – ಬಿಡಬ್ಲ್ಯುಎಸ್‌ಎಸ್‌ಬಿ) ಮುಂದಾಗಿದೆ. ನೀರಿನ ಬಳಕೆ ಹೇಗೆ ಮಾಡಬೇಕು ಎಂದು ಮಾರ್ಗಸೂಚಿಯನ್ನು ಹೊರಡಿಸಿದೆ. ಇದರ ಅನುಸಾರ ನೀರಿನ ಬಳಕೆ ಮಾಡಬೇಕು. ನಿಷೇಧಿತ 7 ಅಂಶಗಳ ಕಾರ್ಯಗಳಿಗೆ ನೀರು ಬಳಕೆ ಮಾಡಿದರೆ 5 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ಅಲ್ಲದೆ, ಇದಕ್ಕೆ ಸಾರ್ವಜನಿಕರ ಸಹಕಾರವನ್ನೂ ಕೋರಲಾಗಿದ್ದು, ನಿಯಮ ಉಲ್ಲಂಘನೆ ಕಂಡು ಬಂದರೆ 1916 ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಲಾಗಿದೆ.

ನೀರಿನ ದುರ್ಬಳಕೆ ಮಾಡಿದರೆ ಮೊದಲು ಕನಿಷ್ಠ 5,000 ರೂಪಾಯಿ ದಂಡವನ್ನು ವಿಧಿಸಲಾಗುವುದು. ಇದೇ ತಪ್ಪನ್ನು ಮತ್ತೆ ಮತ್ತೆ ಮಾಡಿದರೆ ಕನಿಷ್ಠ ದಂಡ ಶುಲ್ಕದ ಮೇಲೆ 500 ರೂಪಾಯಿ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಚ್ಚರಿಕೆ ನೀಡಿದೆ.

ಬೆಂಗಳೂರು ಜಲ ಮಂಡಳಿಯ ಎಚ್ಚರಿಕೆ ಏನು?

ಈ ಬಗ್ಗೆ ಬೆಂಗಳೂರು ಜಲ ಮಂಡಳಿ ಪ್ರಕಟಣೆಯನ್ನು ಹೊರಡಿಸಿದ್ದು, ಕೆಲವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. “ಬೆಂಗಳೂರು ಮಹಾನಗರದಲ್ಲಿ ಕಾಯಂ ನಿವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆ ಇದೆ ಎಂದು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯಕವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿತ ಕಂಡಿದೆ. ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

7 ಚಟುವಟಿಕೆಗೆ ನಿರ್ಬಂಧ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34 ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಈ ಕೆಳಕಂಡ ಚಟುವಟಿಕೆಗೆ ಬಳಸಬಾರದು ಎಂದು ಬೆಂಗಳೂರು ಜಲ ಮಂಡಳಿ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

  1. ವಾಹನಗಳ ಸ್ವಚ್ಛತೆಗೆ
  2. ಕೈದೋಟಕ್ಕೆ
  3. ಕಟ್ಟಡ ನಿರ್ಮಾಣಕ್ಕೆ
  4. ಮನೋರಂಜನೆಗಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ
  5. ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರೆ ಬಳಕೆಗೆ
  6. ರಸ್ತೆ ನಿರ್ಮಾಣ ಮತ್ತು ಸ್ವಚ್ಚತೆಗೆ
  7. ಸ್ವಿಮ್ಮಿಂಗ್‌ ಪೂಲ್‌ಗೆ ಬಳಕೆ

5000 ರೂಪಾಯಿ ದಂಡ

ಬೆಂಗಳೂರು ಜಲಮಂಡಳಿಯ ಈ ನಿಷೇಧ ಆದೇಶ ಉಲ್ಲಂಘಿಸಿ ಮೇಲೆ ಉಲ್ಲೇಖಿಸಿದ ಚಟುವಟಿಕೆಗಳಿಗಾಗಿ ನೀರು ಬಳಸಿದರೆ, ಅಂಥವರ ವಿರುದ್ಧ ಜಲಮಂಡಳಿಯ ಕಾಯ್ದೆ 1964 ರ ಕಲಂ 109 ರಂತೆ 5000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ಉಲ್ಲಂಘನೆಯು ಮರುಕಳಿಸಿದಲ್ಲಿ ದಂಡ ಮೊತ್ತ 5000 ರೂಪಾಯಿ ಜತೆಗೆ ಹೆಚ್ಚುವರಿಯಾಗಿ 500 ರೂಪಾಯಿ ಪ್ರತಿದಿನದಂತೆ ದಂಡ ಹಾಕಲಾಗುವುದು ಎಂದು ಜಲ ಮಂಡಳಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: Save Water: ಸ್ನಾನಕ್ಕೆ ಅರ್ಧ ಬಕೆಟ್‌ ನೀರು ಬಳಸಿ; ಇದು ಬೆಂಗಳೂರಿನ ಅಪಾರ್ಟ್‌ಮೆಂಟ್‌ ಫರ್ಮಾನು!

ತಪ್ಪು ಕಂಡರೆ 1916ಕ್ಕೆ ಕರೆ ಮಾಡಿ ದೂರು ಕೊಡಿ

ಈ ಆರು ಚಟುವಟಿಕೆಗೆ ಸಂಬಂಧಪಟ್ಟಂತೆ ಯಾವುದೇ ಸಾರ್ವಜನಿಕರು ನೀರು ಬಳಕೆ ಮಾಡಿದ್ದು ಕಂಡುಬಂದರೆ, ಕೂಡಲೇ ಜಲ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ : 1916ಕ್ಕೆ ಕರೆ ಮಾಡಿ ದೂರು ನೀಡಬೇಕು ಎಂದು ಬೆಂಗಳೂರು ಜಲಮಂಡಳಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

Exit mobile version