ಬೆಂಗಳೂರು: ನಗರದ ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಹಗರಣದ (Bank Fraud) ಸಂತ್ರಸ್ತರು ಪ್ರಧಾನಿ, ಕೇಂದ್ರ ಗೃಹ ಮಂತ್ರಿ ಹಾಗೂ ಮುಖ್ಯಮಂತ್ರಿಗೆ ಪತ್ರ ರವಾನಿಸುವ ಸಲುವಾಗಿ ಸಹಿ ಸಂಗ್ರಹ ಅಭಿಯಾನವನ್ನು ಮಂಗಳವಾರ ನಡೆಸಿದ್ದಾರೆ.
ಈ ಹಗರಣ ಬೆಳಕಿಗೆ ಬಂದು ಮೂರು ವರ್ಷಗಳಾದರೂ ವಂಚನೆ ಮಾಡಿದ ಆರೋಪಿಗಳಿಗೆ ಶಿಕ್ಷೆಯಾಗಿಲ್ಲ. ವಂಚನೆಗೊಳಗಾದ ಷೇರುದಾರರಿಗೆ ಮತ್ತು ಠೇವಣಿದಾರರಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ಈ ಅಭಿಯಾನ ನಡೆಸಲಾಗುತ್ತಿದೆ.
ಬಸವನಗುಡಿಯಲ್ಲಿರುವ ಶ್ರೀ ಗುರುರಾಘವೇಂದ್ರ ಕೋ- ಆಪರೇಟಿವ್ ಬ್ಯಾಂಕ್ ಮುಂಭಾಗದಲ್ಲಿ ನಡೆದ ಈ ಸಹಿ ಸಂಗ್ರಹ ಅಭಿಯಾನದಲ್ಲಿ ಬ್ಯಾಂಕ್‌ನ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆಯ ಮಹಾ ಪೋಷಕ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು. ವಂಚನೆಗೊಳಾಗದ ಸದಸ್ಯರು ಪ್ರತಿಭಟನೆ ಕೂಡ ನಡೆಸಿದರು.
ಕೂಡಲೇ ಸಂತ್ರಸ್ತರ ನೆರವಿಗೆ ಬರುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ, ಗೃಹ ಮತ್ತು ಸಹಕಾರಿ ಸಚಿವರಾದ ಅಮಿತ್ ಶಾ ಮತ್ತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆಯಲಾಗಿದ್ದು, ಇದಕ್ಕೆ ಸಹಿ ಪಡೆದುಕೊಳ್ಳಲಾಯಿತು. ಶ್ರೀ ಗುರು ರಾಘವೇಂದ್ರ ಬ್ಯಾಂಕ್, ವಸಿಷ್ಠ ಸೌಹಾರ್ದ, ಗುರುಸಾರ್ವಭೌಮ ಸೊಸೈಟಿ, ಕಣ್ವ ಸೊಸೈಟಿ, ನಾಗರತ್ನ ಬ್ಯಾಂಕ್ ಹಾಗೂ ಇನ್ನುಳಿದ ಎಲ್ಲಾ ಸಹಕಾರಿ ಬ್ಯಾಂಕ್ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಈ ಸಂದರ್ಭದಲ್ಲಿ ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಂಕರ ಗುಹಾ ದ್ವಾರಕಾನಾಥ್, ಗುರು ರಾಘವೇಂದ್ರ ಬ್ಯಾಂಕ್ ಹಗರಣ ಬೆಳಕಿಗೆ ಬಂದು ಮೂರು ವರ್ಷ ಕಳೆದಿದೆ. ಆದರೆ ಈ ಬಗ್ಗೆ ಸರಿಯಾಗಿ ತನಿಖೆ ನಡೆಯುತ್ತಿಲ್ಲ. ಸಿಬಿಐಗೆ ಈ ಪ್ರಕರಣವನ್ನು ಒಪ್ಪಿಸುಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಣ್ಯ ಅವರು ಈ ವಿಷಯದಲ್ಲಿ ಬೇಜವಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಮೂರು ವರ್ಷಗಳಿಂದ ಹೇಳಿದ್ದನ್ನೇ ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು, ಡಿಐಸಿಜಿಸಿ (DICGC) ಇನ್ಷೂರೆನ್ಸ್ ಹಣ ಬಂದಿರುವುದಕ್ಕೆ ಯಾರು ಕ್ರೆಡಿಟ್ ತೆಗೆದುಕೊಳ್ಳಬೇಕಿಲ್ಲ. ಇದು ಸಹಜವಾದ ಪ್ರಕ್ರಿಯೆ ಎಂದು ಎಚ್ಚರಿಸಿದರು.
ಸಂಸದ ತೇಜಸ್ವಿಯವರನ್ನು ನಾವು ಅತಿಯಾಗಿ ನಂಬಿದ್ದು ತಪ್ಪಾಯಿತು. ಅವರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು, ಇತ್ತೀಚೆಗೆ ವಿಧಾನಸಭೆಯಲ್ಲಿ ಸಹಕಾರಿ ಸಚಿವರು ಕೂಡ ಈ ವಿಷಯದಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿದ್ದಾರೆ. ಈ ಅಕ್ರಮದಲ್ಲಿ ಭಾಗಿಯಾದವರ ಸಹಾಯವನ್ನು ಸಂಸದ ತೇಜಸ್ವಿ ಸೂರ್ಯ ಪಡೆದುಕೊಂಡಿರಬಹುದು. ಹೀಗಾಗಿಯೇ ಅವರ ಬಗ್ಗೆ ಮೃದುಧೋರಣೆ ತಾಳುತ್ತಿದ್ದಾರೆ ಎಂದು ಟೀಕಿಸಿದರು.
ಈ ಪ್ರಕರಣವನ್ನು ಕೂಡಲೇ ಸಿಬಿಐಗೆ ಒಪ್ಪಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ ಅವರು, ಈ ವಂಚನೆಯಿಂದ ಅಘಾತಕ್ಕೊಳಗಾದ ಸುಮಾರು 150 ಮಂದಿ ಸಂತ್ರಸ್ತ ಠೇವಣಿದಾರರು ಮತ್ತು ಷೇರುದಾರರು ತೀರಿಕೊಂಡಿದ್ದಾರೆ. ಅವರಿಗೆಲ್ಲ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೋ-ಆಪರೇಟಿವ್ ಹಗರಣಗಳಿಂದಾದ ನಷ್ಟ 25,000 ಕೋಟಿ ರೂಪಾಯಿ. ಒಟ್ಟು 1.8ಕೋಟಿ ಜನ ಸಂತ್ರಸ್ತರಾಗಿದ್ದಾರೆ. ಅಂದರೆ ಮೂವರಲ್ಲಿ ಒಬ್ಬರಿಗೆ ಸಹಕಾರಿ ಬ್ಯಾಂಕ್‌ಗಳಲ್ಲಿನ ವಂಚನೆಯಿಂದಾಗಿ ಮೋಸವಾಗಿದೆ. ಇದನ್ನ ತಡೆಯಲು ಸರಿಯಾದ ಕಾನೂನು ಇಲ್ಲ. ಸಂಸದ ತೇಜಸ್ವಿ ಸೂರ್ಯರವರು ಈ ಪ್ರಕರಣದಲ್ಲಿ ಎಲ್ಲಾ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದಲ್ಲಿ ಇದಕ್ಕೆ ತಾರ್ಕಿಕ ಅಂತ್ಯ ಕಾಣಿಸಬಹುದಿತ್ತು. ಆದರೆ ಎಲ್ಲರನ್ನೂ ದೂರ ಮಾಡಿ, ತಾವೇ ಕ್ರೆಡಿಟ್ ತೆಗೆದುಕೊಳ್ಳಲು ಹೋಗಿ ಜನ ಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ. ಬಹುಶಃ ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಗುಹಾ ದ್ವಾರಕಾನಾಥ್ ಬೆಳ್ಳೂರು ಹೇಳಿದ್ದಾರೆ.
ಇದನ್ನೂ ಓದಿ | Bank Fraud | ಕೋಆಪರೇಟಿವ್ ಬ್ಯಾಂಕ್ ಧೋಖಾ; ಗ್ರಾಹಕರ ಮುತ್ತಿಗೆ ಕಂಡು ಸಿಬ್ಬಂದಿ ಆತ್ಮಹತ್ಯೆ ಯತ್ನ