Site icon Vistara News

Mangalore Blast | ಪಿಎಫ್​ಐ ನಿಷೇಧಕ್ಕೆ ಪ್ರತೀಕಾರವಾ ಈ ಮಂಗಳೂರು ಆಟೋ ಸ್ಫೋಟ? -ಮಾಹಿತಿ ಕಲೆ ಹಾಕುತ್ತಿರುವ ಪೊಲೀಸ್​

PFI Banned

ಮಂಗಳೂರು: ಇಲ್ಲಿನ ನಾಗುರಿ ಬಳಿ ಶನಿವಾರ ಸಂಜೆ 4.40ರ ಹೊತ್ತಿಗೆ ಆಟೋ ಸ್ಫೋಟವಾಗಿದ್ದು ಈಗ ರಾಷ್ಟ್ರಮಟ್ಟದಲ್ಲಿ ಸಂಚಲನ ನಡೆಸಿದ ಸುದ್ದಿಯಾಗಿ ಮಾರ್ಪಾಡಾಗಿದೆ. ಮೊದಲು ಇದು ಸಿಲಿಂಡರ್​ ಬ್ಲಾಸ್ಟ್​ ಕೇಸ್​ ಅಂದುಕೊಳ್ಳಲಾಯಿತು. ಆದರೆ ಈಗ ಅದೊಂದು ಭಯೋತ್ಪಾದಕ ಕೃತ್ಯ ಎಂಬುದು ಸಾಬೀತಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಇದನ್ನೇ ಹೇಳಿದ್ದು, ರಾಷ್ಟ್ರೀಯ ತನಿಖಾ ದಳ (ಎನ್​ಐಎ) ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ.

ಭಯೋತ್ಪಾದನಾ ಕೃತ್ಯವೆಂದು ಸಾಬೀತಾಗುತ್ತಿದ್ದಂತೆ ಹತ್ತು-ಹಲವು ಪ್ರಶ್ನೆಗಳು, ಅನುಮಾನಗಳು ಎದ್ದಿವೆ. ಅದರಲ್ಲಿ ಮುಖ್ಯವಾಗಿ ಗಮನ ಹೋಗುತ್ತಿರುವುದು ನಿಷೇಧಿತ ಪಿಎಫ್​ಐ ಸಂಘಟನೆಯತ್ತ. ಎರಡು ತಿಂಗಳ ಹಿಂದೆ ಕೇಂದ್ರ ಸರ್ಕಾರ ಈ ಪಾಪ್ಯುಲರ್​ ಫ್ರಂಟ್ ಆಫ್​ ಇಂಡಿಯಾವನ್ನು ಬ್ಯಾನ್ ಮಾಡಿದೆ. ಹೀಗೆ ಬ್ಯಾನ್​ ಮಾಡುವುದಕ್ಕೂ ಮೊದಲು ದೇಶಾದ್ಯಂತ, ಕರ್ನಾಟಕವೂ ಸೇರಿ (ಅದರಲ್ಲೂ ವಿಶೇಷವಾಗಿ ಮಂಗಳೂರು) ಎಲ್ಲ ಕಡೆ ಪಿಎಫ್​ಐ ಕಚೇರಿಗಳು, ಮುಖಂಡರ ಮನೆಗಳ ಮೇಲೆ ಎನ್​ಐಎ (ರಾಷ್ಟ್ರೀಯ ತನಿಖಾ ದಳ) ನಿರಂತರವಾಗಿ ದಾಳಿ ನಡೆಸಿತ್ತು. ಸೆಪ್ಟೆಂಬರ್​ ತಿಂಗಳಾದ್ಯಂತ ಪಿಎಫ್​ಐ ಮತ್ತು ಎಸ್​ಎಫ್​ಐ ಗಳ ಮೇಲೆ ರೇಡ್​ ನಡೆದು, ಪಿಎಫ್​ಐ ಉಗ್ರಕೃತ್ಯಗಳಿಗೆ ನೆರವು ನೀಡುವ ಸಂಘಟನೆ ಎಂದು ಸಾಬೀತಾಗಿತ್ತು. ಅಂತಿಮವಾಗಿ ಸೆಪ್ಟೆಂಬರ್​ 28ರಂದು ಪಿಎಫ್​ಐ ನಿಷೇಧಗೊಂಡಿತ್ತು. ಆ ಸಮಯದಲ್ಲಿ ಮಂಗಳೂರಿನಲ್ಲಿಯೇ ಪಿಎಫ್​ಐನ 12 ಕಚೇರಿಗಳಿಗೆ ಬೀಗ ಹಾಕಲಾಗಿದೆ.

ಹೀಗೆ ಪಿಎಫ್​ಐ ನಿಷೇಧ ಮಾಡಿದ್ದಕ್ಕೆ, ಅದರ ಪ್ರತೀಕಾರವಾಗಿ ಮಂಗಳೂರಿನಲ್ಲಿ ಆಟೋ ಬಾಂಬ್​ ಸ್ಫೋಟ ನಡೆಯಿತಾ? ಎಂಬ ಅನುಮಾನ ದೊಡ್ಡಮಟ್ಟದಲ್ಲಿ ತನಿಖಾ ಸಿಬ್ಬಂದಿ ಮತ್ತು ಜನಸಾಮಾನ್ಯರನ್ನು ಕಾಡುತ್ತಿದೆ. ಆ ಬಗ್ಗೆಯೂ ಕೂಲಂಕುಷ ಪರಿಶೀಲನೆ ಶುರುವಾಗಿದೆ. ಇನ್ನು ಇಲ್ಲಿ ಸ್ಫೋಟವಾದ ಐಇಡಿಯನ್ನು ಸ್ಥಳೀಯವಾಗಿ ಸಿಗುವ ರಾಸಾಯನಿಕ ಬಳಸಿಯೇ ತಯಾರಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಈ ಬಾಂಬ್​​ನ್ನು ತಯಾರಿಸಿ ಸ್ಫೋಟಗೊಳಿಸಿ, ಅದನ್ನು ಹಿಂದು ಹೆಸರಿನ ತಲೆಗೆ ಕಟ್ಟಲು ಸ್ಲೀಪರ್​ ಸೆಲ್​ ರಚಿಸಿ, ಎರಡು ತಿಂಗಳುಗಳಿಂದಲೂ ತರಬೇತಿ ನೀಡಲಾಗುತ್ತಿತ್ತು. ಈ ಸ್ಲೀಪರ್​ಸೆಲ್​​ನಲ್ಲಿ ಕೆಲಸ ಮಾಡುತ್ತಿದ್ದವರು ಬಿಇ ಪದವೀಧರರು, ಆಟೋವನ್ನು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಇಟ್ಟು ಸ್ಫೋಟಿಸಲು ಯೋಜನೆ ರೂಪಿಸಲಾಗಿತ್ತು ಎಂಬಿತ್ಯಾದಿ ಮಾಹಿತಿಗಳೂ ಹೊರಬಿದ್ದಿವೆ. ಆದರೆ ತನಿಖಾ ವರದಿಯಲ್ಲೇ ಇವೆಲ್ಲವೂ ಸ್ಪಷ್ಟವಾಗಬೇಕಿದೆ.

ಮಂಗಳೂರು ಪೊಲೀಸರು ಫುಲ್​ ಅಲರ್ಟ್ ಆಗಿದ್ದು, ನಿಷೇಧಿತ ಪಿಎಫ್​ಐ ಸಂಘಟನೆ ಬೆನ್ನತ್ತಿದ್ದಾರೆ. ಆ ಸಂಘಟನೆಯಲ್ಲಿದ್ದ ಮುಖಂಡರ ಜಾಡು ಹಿಡಿದಿದ್ದಾರೆ. ಮಂಗಳೂರಿನಲ್ಲಿ ಇಲ್ಲದವರ ಬಗ್ಗೆ ಮಾಹಿತಿಯನ್ನೂ ಕಲೆ ಹಾಕುತ್ತಿದ್ದಾರೆ. ಈಗಾಗಲೇ ಸಿಕ್ಕಿಬಿದ್ದಿರುವ ಆರೋಪಿಯನ್ನೂ ಎನ್​ಐಎ ಮತ್ತು ಪೊಲೀಸರು ವಿಚಾರಣೆ ನಡೆಸಿ, ಮಾಹಿತಿಗಳನ್ನು ಕಲೆಹಾಕುತ್ತಿದ್ದಾರೆ.

ಇದನ್ನೂ ಓದಿ: Mangalore Blast | ಇಬ್ಬರು ನುರಿತ ಎಫ್ಎಸ್ಎಲ್ ತಜ್ಞರು ಮಂಗಳೂರಿಗೆ; ತನಿಖೆ ಮತ್ತಷ್ಟು ಚುರುಕು

Exit mobile version