ಸಾಗರ: “ಶಾಸಕ ಹರತಾಳು ಹಾಲಪ್ಪ ತಮ್ಮ ಅವಧಿಯಲ್ಲಿ ಹೊಸ ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್‍ಗೆ ಅವಕಾಶ ನೀಡಿಲ್ಲ ಎಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. 2018ರಿಂದ 2023ರವರೆಗೆ 6 ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆ ಮತ್ತು 18 ಬಾರ್ ಆ್ಯಂಡ್ ರೆಸ್ಟೋರೆಂಟ್‍ಗೆ (Bar and Restaurant) ಅವಕಾಶ ನೀಡಿದ್ದು ಮಾಹಿತಿ ಹಕ್ಕಿನಲ್ಲಿ ಸಾಬೀತಾಗಿದೆ” ಎಂದು ತಾಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಈ. ಕೆಳದಿ ತಿಳಿಸಿದರು.
ಗುರುವಾರ (ಮಾ.9) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಶಾಸಕರು ತಮ್ಮ ಅವಧಿಯಲ್ಲಿ ಯಾವುದೇ ಎಂಎಸ್‍ಐಎಲ್, ಬಾರ್ ಆ್ಯಂಡ್ ರೆಸ್ಟೋರೆಂಟ್‍ಗೆ ಅವಕಾಶ ನೀಡಿಲ್ಲ ಎಂದು ಹೇಳಿರುವ ಹಿನ್ನೆಲೆಯಲ್ಲಿ ಮಾಹಿತಿ ಹಕ್ಕಿನಡಿ ಅಬ್ಕಾರಿ ಇಲಾಖೆಯಿಂದ ಮಾಹಿತಿ ಪಡೆದಾಗ ಶಾಸಕರು ಜನರಿಗೆ ಸುಳ್ಳು ಹೇಳುತ್ತಿರುವುದು ಬಹಿರಂಗವಾಗಿದೆ” ಎಂದರು.
“ತಾಲೂಕಿನಲ್ಲಿ 6 ಎಂ.ಎಸ್.ಐ.ಎಲ್. ಮದ್ಯ ಮಾರಾಟ ಮಳಿಗೆ ಪ್ರಾರಂಭವಾಗಿದೆ. ಬೆಳ್ಳಿಕೊಪ್ಪದಂತಹ ಗ್ರಾಮದಲ್ಲಿ ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾಗ್ಯೂ ಪರವಾನಿಗೆ ನೀಡಲಾಗಿದೆ. 18 ಬಾರ್ ಆ್ಯಂಡ್ ರೆಸ್ಟೋರೆಂಟ್ ಪೈಕಿ ಒಂದು ಕಾಗೋಡು ಪುತ್ರಿ ಅನುರಾಧಾ ಕಾಗೋಡು ಹೆಸರಿಗೆ ಮಂಜೂರಾಗಿದೆ. ಬಹುತೇಕ ಎಂಎಸ್‍ಐಎಲ್ ಮದ್ಯ ಮಾರಾಟ ಮಳಿಗೆಯಲ್ಲಿ ಶಾಸಕರ ಆಪ್ತರು, ಬಿಜೆಪಿ ಬೆಂಬಲಿಗರು ಕೆಲಸ ಮಾಡುತ್ತಿದ್ದಾರೆ. ಶಾಸಕರ ಸ್ವಜನ ಪಕ್ಷಪಾತದಿಂದ ತಾಲೂಕಿನಲ್ಲಿ ಮದ್ಯದಂಗಡಿ ಹೆಚ್ಚಲು ಕಾರಣವಾಗಿದೆ” ಎಂದು ಹೇಳಿದರು.
ಇದನ್ನೂ ಓದಿ: ಸಾವಿಗೆ ರಹದಾರಿಯಾಗುತ್ತಿದೆಯೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ?; 6 ತಿಂಗಳಲ್ಲಿ ಹಾರಿತು 84 ಜನರ ಪ್ರಾಣಪಕ್ಷಿ!
“ಪಕ್ಕದ ಸೊರಬ ಕ್ಷೇತ್ರದ ತಾಳಗುಪ್ಪ ಹೋಬಳಿಯಲ್ಲಿ ಎಂ.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆಯಿಂದ ತೊಂದರೆಯಾಗುತ್ತದೆ ಎಂದು ಸಾರ್ವಜನಿಕರು ದೂರು ನೀಡಿದಾಗ ಶಾಸಕ ಕುಮಾರ ಬಂಗಾರಪ್ಪ ಅದನ್ನು ಸ್ಥಳಾಂತರ ಮಾಡಿಸಿದ್ದಾರೆ. ಆದರೆ ಸಾಗರ ಕ್ಷೇತ್ರದ ಶಾಸಕರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರೂ ಬೆಳ್ಳಿಕೊಪ್ಪದಲ್ಲಿ ಮದ್ಯದಂಗಡಿ ಪ್ರಾರಂಭ ಮಾಡಿಸಿದ್ದಾರೆ. ಶಾಸಕರು ಜನರಿಗೆ ತಪ್ಪು ಮಾಹಿತಿ ನೀಡುತ್ತಿರುವುದರ ವಿರುದ್ಧ ಒಕ್ಕೂಟವು ಜನ ಜಾಗೃತಿ ಮೂಡಿಸುತ್ತದೆ” ಎಂದು ಹೇಳಿದರು. ಗೋಷ್ಠಿಯಲ್ಲಿ ಚನ್ನಕೇಶವ ಹಾಜರಿದ್ದರು.