Site icon Vistara News

ಪಠ್ಯ ಕೈಬಿಟ್ಟಿರುವ ಬಗ್ಗೆ ಶಿಕ್ಷಣ ಸಚಿವರಿಂದ ತಪ್ಪು ಮಾಹಿತಿ: ಬರಗೂರು ಆರೋಪ

BARAGURU RAMACHANDRAPPA

ಬೆಂಗಳೂರು: ನನ್ನ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆದಾಗ ಕುವೆಂಪು, ಗಾಂಧಿ, ಅಂಬೇಡ್ಕರ್‌, ಕಿತ್ತೂರು ರಾಣಿ ಚನ್ನಮ್ಮ , ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಮದಕರಿ ನಾಯಕ, ಕೆಂಪೇಗೌಡರ ಪಠ್ಯವಿಷಯಗಳನ್ನು ಕೈಬಿಟ್ಟಿರುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ಕುವೆಂಪು ಅವರ ರಚನೆಗಳು 10 ಮತ್ತು 7ನೇ ತರಗತಿಯ ಕನ್ನಡ ಪಠ್ಯಪುಸ್ತಕಗಳಲ್ಲಿ ಇವೆ, ಅದನ್ನು ಕೈಬಿಟ್ಟಿಲ್ಲ. ಪ್ರೌಢಶಾಲೆ ಹಂತದಲ್ಲಿ ಇದ್ದ ಕುವೆಂಪು ಅವರ ಭಾರತ ನಮ್ಮ ತಾಯಿ ಭೂಮಿ ಎಂಬ ಪದ್ಯವನ್ನು ಚಿಕ್ಕಂದಿನಿಂದಲೇ ಮಕ್ಕಳಲ್ಲಿ ದೇಶಪ್ರೇಮ ಬೆಳೆಯಲಿ ಎಂಬ ದೃಷ್ಟಿಯಿಂದ 7ನೇ ತರಗತಿಗೆ ಅಳವಡಿಸಿಲು ಸೂಚಿಸಿದ್ದೆವು ಎಂದಿದ್ದಾರೆ.

ಇನ್ನು 7ನೇ ತರಗತಿಯ ಎರಡನೇ ಭಾಗ ಹಾಗೂ 10ನೇ ತರಗತಿಯ ಎರಡನೇ ಭಾಗದ ಸಮಾಜ ವಿಜ್ಞಾನ ಪಠ್ಯದಲ್ಲಿ ಗಾಂಧೀಜಿ ಕುರಿತ ಸಾಕಷ್ಟು ವಿವರ ಇದೆ. 8ನೇ ತರಗತಿಯ ಭಾಗ-1ರಲ್ಲಿ ಮತ್ತು, 10ನೇ ತರಗತಿಯ ಭಾಗ-2ರಲ್ಲಿ ಡಾ. ಅಂಬೇಡ್ಕರ್‌ ಪಾಠಗಳಿವೆ. 9ನೇ ತರಗತಿಯ ಪಠ್ಯದಲ್ಲಿ ನಮ್ಮ ಸಂವಿಧಾನ ಎಂಬ ಪಾಠವಿದೆ ಎಂದು ಬರಗೂರು ಹೇಳಿದ್ದಾರೆ.

ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ ಸಮಾಜ ವಿಜ್ಞಾನದ 6ನೇ ತರಗತಿಯ ಭಾಗ- 2 ಮತ್ತು 10ನೇ ತರಗತಿಯ ಭಾಗ-1ರಲ್ಲಿ ಪಾಠಗಳಿವೆ. ಜತೆಗೆ ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ 5ನೇ ತರಗತಿ ಕನ್ನಡ ಪುಸ್ತಕದಲ್ಲಿ ಹೊಸದಾಗಿ ಒಂದು ಪಾಠವನ್ನು ಸೇರಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.

ಮದಕರಿ ನಾಯಕರ ಬಗ್ಗೆ ಪಾಠ ಕೈಬಿಟ್ಟಿಲ್ಲ, ಇದರ ಜತೆಗೆ ಸುರಪುರ ಸಂಸ್ಥಾನದ ಬಗ್ಗೆಯೂ ಸೇರಿಸಲಾಗಿದೆ. ಕೆಂಪೇಗೌಡರ ಬಗ್ಗೆ ಮಾಹಿತಿ ಇಲ್ಲ ಎನ್ನುವುದು ತಪ್ಪು, ಯಲಹಂಕ ನಾಡಪ್ರಭುಗಳ ಬಗ್ಗೆ ಪ್ರತ್ಯೇಕ ವಿವರಗಳಿದ್ದು, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಬಗ್ಗೆ ಪ್ರತ್ಯೇಕ ಮಾಹಿತಿ ಸೇರಿಸಲಾಗಿದೆ. ಇವು ಸಮಾಜ ವಿಜ್ಞಾನದ 7ನೇ ತರಗತಿಯ ಭಾಗ-1ನೇ ಪಠ್ಯದಲ್ಲಿದೆ ಎಂದವರು ತಿಳಿಸಿದ್ದಾರೆ.

7ನೇ ತರಗತಿಯ ಭಾಗ-2ರಲ್ಲಿ ಸಮಾಜ ವಿಜ್ಞಾನ ಪಠ್ಯದಲ್ಲಿ ರಾಣಿ ಅಬ್ಬಕ್ಕ ಪಠ್ಯವಿದೆ. ಭಾಗ-1ರಲ್ಲಿ ಮೈಸೂರು ಒಡೆಯರು ಎಂಬ ಪ್ರತ್ಯೇಕ ಪಠ್ಯವಿದೆ. ಸಚಿವರು ಹೇಳಿದಂತೆ ಇಲ್ಲಿನ ವಿವರ ಕಡಿಮೆ ಎನಿಸಿದರೆ ಮರುಪರಿಷ್ಕರಣೆಯಲ್ಲಿ ವಿಸ್ತರಿಸಬಹುದಿತ್ತು. ಟಿಪ್ಪು ಸೇರಿದಂತೆ ಯಾರ ಬಗ್ಗೆಯೂ ಆಧಾರವಿಲ್ಲದೆ ಏನನ್ನೂ ಸೇರಿಸಿಲ್ಲ. ಟಿಪ್ಪು, ಸಾವರ್ಕರ್‌ ಒಳಗೊಂಡಂತೆ ಯಾರ ಬಗ್ಗೆಯೂ ನಕಾರಾತ್ಮಕ ವಿಷಯಗಳನ್ನು ಹೇಳಿಲ್ಲ, ನಡೆದ ಘಟನೆಗಳ ವಾಸ್ತವ ಮಾಹಿತಿಯನ್ನಷ್ಟೇ ಕೊಡಲಾಗಿದೆ, ಯಾರನ್ನೂ ವೈಭವೀಕರಿಸಿಲ್ಲ ಎಂದು ಬರಗೂರು ಹೇಳಿದ್ದಾರೆ.

ವಾಸ್ತವದಲ್ಲಿ ಮೈಸೂರು ಒಡೆಯರ ಬಗ್ಗೆ ಸೇರಿಸಲಾಗಿದ್ದ ಭಾಗದಲ್ಲಿ ಬ್ರಿಟೀಷರೊಡನೆ ನಡೆಸಲಾದ ಯುದ್ಧಗಳ ಬಗ್ಗೆ ಹೇಳಲಾಗಿದೆ. ಈ ಯುದ್ಧಗಳ ವಿಚಾರ ಬಂದಾಗ ಟಿಪ್ಪು ಸುಲ್ತಾನ್ ಹಾಗೂ ಹೈದರ್ ಅಲಿ ಬಗ್ಗೆ ಮಾಹಿತಿ ನೀಡಲಾಗಿದೆ. ಅದರ ಹೊರತಾಗಿ ವಿಶೇಷವಾದ ಅಧ್ಯಾಯ ಟಿಪ್ಪು ಸುಲ್ತಾನ್ ಗೆ ಬರೆಯಲಾಗಿಲ್ಲ. ಸಚಿವರು ಇಂಥ ಕಾರಣ‌ ಕೊಟ್ಟು ಅವರಿಗೆ ಬೇಕಾದ ಪಠ್ಯ ಸೇರಿಸಿ ವಿವಾದ ಹುಟ್ಟು ಹಾಕಿದ್ದಾರೆ. ಸತ್ಯ ಏನು ಏನು ಎಂಬುವುದಕ್ಕೆ ನನ್ನ ಬಳಿ ದಾಖಲೆ ಇದೆ ಎಂದು ಬರಗೂರು ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ | Textbook controversy: ತಮ್ಮ ಕಥನವನ್ನು ಪಠ್ಯದಲ್ಲಿ ಸೇರಿಸಲು ನಿರಾಕರಿಸಿದ ದೇವನೂರು

Exit mobile version