ಬೆಂಗಳೂರು: ವಿಜಯನಗರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಕೂಡಲಸಂಗಮ ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಶನಿವಾರ ಭೇಟಿ ನೀಡಿದ್ದರು. ಈ ವೇಳೆ ಪೀಠಾಧ್ಯಕ್ಷರಾದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಜತೆ ಮೀಸಲಾತಿ ಬಗ್ಗೆ ವಿಸ್ತೃತವಾಗಿ ಚರ್ಚಿಸಿದರು. ಎರಡು ಸಮುದಾಯಗಳ ಮುಖಂಡರು ಮತ್ತು ಕಾನೂನು ತಜ್ಞರು ಚರ್ಚೆಯಲ್ಲಿ ಪಾಲ್ಗೊಂಡರು.
ಪಂಚಮಸಾಲಿ ಸಮುದಾಯಕ್ಕೆ ಒಬಿಸಿ 2ಎ ಮೀಸಲಾತಿ ನೀಡಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಮೀಸಲಾತಿಗಾಗಿ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯ ಹೋರಾಟ ಆರಂಭಿಸಿದೆ. ಇತ್ತೀಚೆಗೆ ಸಚಿವ ಸಂಪುಟ ಸಭೆಯಲ್ಲಿ ಒಬಿಸಿ 3 ಎ ಪ್ರವರ್ಗದಲ್ಲಿದ್ದ ಒಕ್ಕಲಿಗ ಸಮಾಜಕ್ಕೆ 2ಸಿ ಹಾಗೂ 3 ಬಿ ಪ್ರವರ್ಗದಲ್ಲಿದ್ದ ಪಂಚಮಸಾಲಿ ಸಮುದಾಯಕ್ಕೆ 2ಡಿ ಪ್ರವರ್ಗ ಸೃಷ್ಟಿಸಿ ಮೀಸಲಾತಿ ನೀಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಪಂಚಮಸಾಲಿ ಸಮುದಾಯ ತಮಗೆ 2ಎ ಮೀಸಲಾತಿ ನೀಡಲೇಬೇಕು ಎಂದು ಪಟ್ಟುಹಿಡಿದಿದೆ.
ಒಬಿಸಿ 3ಎ ಪ್ರವರ್ಗದಲ್ಲಿ ಒಕ್ಕಲಿಗರಿಗೆ ಶೇ.4 ಇರುವ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಬೇಕು. ಸಮುದಾಯದ ಜನಗಣತಿ ಆಗಬೇಕು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಬೇಕು ಎಂದು ಒಕ್ಕಲಿಗ ಸಮಾಜ ಒತ್ತಾಯಿಸಿತ್ತು. ಆದರೆ, ಒಕ್ಕಲಿಗರಿಗೆ 2ಸಿ ಪ್ರವರ್ಗ ಸೃಷ್ಟಿಸಿ ಮೀಸಲಾತಿ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿತ್ತು.
ಇದನ್ನೂ ಓದಿ | Sadanandotsava : ಸರಳ ಸಜ್ಜನ ರಾಜಕಾರಣಿ ಸದಾನಂದ ಗೌಡ; ಸಿಎಂ ಬಸವರಾಜ ಬೊಮ್ಮಾಯಿ ಬಣ್ಣನೆ
ಏಪ್ರಿಲ್ 10ರೊಳಗೆ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಪ್ರತಿ ಕ್ಷೇತ್ರಕ್ಕೆ ತೆರಳಿ ಬಿಜೆಪಿ ವಿರುದ್ಧ ಪ್ರಚಾರ ನಡೆಸುವುದಾಗಿ ಶನಿವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಕೂಡಲಸಂಗಮ ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದರು.