Site icon Vistara News

ಇಡೀ ರಾಜ್ಯದ ಜನರಿಗಾಗಿ ಸೇವೆ ಸಲ್ಲಿಸಿದ್ದೇನೆ : ಬಸವರಾಜ ಹೊರಟ್ಟಿ

ಧಾರವಾಡ: ಈಗಾಗಲೇ 7 ಚುನಾವಣೆ ಗೆದ್ದಿದ್ದೇನೆ, ಈ ಚುನಾವಣೆಯ ಬಗ್ಗೆ ಭಯವೇ ಇಲ್ಲ. ನಮ್ಮ ಮತದಾರರಿಗೆ ಮಾತ್ರ ಸೀಮಿತವಾಗದೆ ಇಡೀ ರಾಜ್ಯದ ಜನರಿಗಾಗಿ ಕೆಲ್ಸ ಮಾಡಿದ್ದೇನೆ ಎಂದು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಚಾರ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ 70 ಕಾಲೇಜುಗಳಿಗೆ ಭೇಟಿ ನೀಡಲಾಗಿದೆ. ಪುರುಷ ಮತ್ತು ಮಹಿಳೆಯರ ಎರಡು ಟೀಮ್‌ಗಳನ್ನು ಮಾಡಿದ್ದೇವೆ. ಕಾನೂನು ಮಂತ್ರಿಯಾದಾಗ ಹುಬ್ಬಳ್ಳಿಗೆ ವಿವಿ ಬರಲು ಶ್ರಮಿಸಿದ್ದೆ, 2004ರಲ್ಲಿ ಮಾತ್ರ ನನಗೆ ಕಡಿಮೆ ಮತಗಳು ಬಂದಿದ್ದವು. ಅದರಲ್ಲಿ ನನಗೆ ಮತ್ತು ಬಿಜೆಪಿಗೆ ಜಿದ್ದಾಜಿದ್ದಿ ಇತ್ತು, ಹೀಗಾಗಿ 3ನೇ ಸುತ್ತಿನಲ್ಲಿ ಆರಿಸಿ ಬಂದೆ ಎಂದರು.

ಡಿಕೆಶಿ ನನ್ನ ಭಯದ ಬಗ್ಗೆ ಮಾತನಾಡುತ್ತಾರೆ ಅಷ್ಟೇ, ಅದು ಅನಿವಾರ್ಯವಾಗಿ ಅವರು ಹೇಳಲೇ ಬೇಕು. ಈಗಿರುವ ಕಾಂಗ್ರೆಸ್ ಅಭ್ಯರ್ಥಿ ಶಿಕ್ಷಕರ ಪರವಾಗಿ ಎಂದಿಗೂ ಬದ್ಧವಿಲ್ಲ, ನನಗೆ ವಿರೋಧ ಮಾಡಿದವರಿಗಾಗಿಯೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಈ ಬಾರಿಯೂ ಗೆಲ್ಲುವ ವಿಶ್ವಾಸವಿದೆ.

ಶಿಕ್ಷಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ : ಬಸವರಾಜ ಗುರಿಕಾರ

ಹುಬ್ಬಳ್ಳಿ: ಶಿಕ್ಷಕರಿಗಾಗಿ ಸಾಕಷ್ಟು ಹೋರಾಟ ಮಾಡಿದ್ದೇನೆ, ಅವರ ಮೂಲ ಸಮಸ್ಯೆಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಹೀಗಾಗಿ ಕ್ಷೇತ್ರದ ಶಿಕ್ಷಕರು ಬದಲಾವಣೆ ಬಯಸಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ ಹೇಳಿದರು.

ನಗರದಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ನಡೆಸಿ, ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ, ಇದರಿಂದ ಹಲವಾರು ಶಿಕ್ಷಣ ಸಂಸ್ಥೆಗಳು ಸಂಕಷ್ಟದಲ್ಲಿವೆ‌. 27ವರ್ಷದಿಂದ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಇಲ್ಲಿ ದಾಖಲೆ ಮಾಡುವವರು ಬೇಡ, ಸಮಸ್ಯೆಗಳನ್ನ ಇತ್ಯರ್ಥ ಮಾಡುವವರು ಬೇಕು‌ ಎಂದು ಪರೋಕ್ಷವಾಗಿ ಬಸವರಾಜ ಹೊರಟ್ಟಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾನು ಒಬ್ಬಂಟಿಯಾಗಿಲ್ಲ, ನನ್ನ ಪರ ಅನೇಕ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ. ನಾನು ಮೊದಲ ಸುತ್ತಿನಲ್ಲಿಯೇ ಗೆಲವು ಸಾಧಿಸುತ್ತೇನೆ, ನನ್ನ ಗೆಲುವು ಗ್ಯಾರಂಟಿ ಎಂದರು.

ವಿರೋಧ ಪಕ್ಷಗಳು ಆಮಿಷ ಒಡ್ಡುತ್ತಿವೆ : ಸಂಸದ ಡಿ.ಕೆ.ಸುರೇಶ್‌

ಹಾಸನ: ಮಧುಮಾದೇಗೌಡ ಬಹಳ ವಿದ್ಯಾವಂತರು, ಸಮಾಜದ ಬಗ್ಗೆ ಬಹಳ ಕಾಳಜಿಯನ್ನು ಇಟ್ಟುಕೊಂಡಿದ್ದಾರೆ.
ಬೇರೆ ಬೇರೆ ಪಕ್ಷದವರು ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಹೀಗಾಗಿ ನಮ್ಮ‌ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.‌ ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಹಾಸನದ ವಕೀಲರ ಸಂಘದಲ್ಲಿ ಅವರು ಮತಯಾಚಿಸಿದರು.

ಮತದಾರರು ಯಾವ ರೀತಿ ಯೋಚನೆ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹಣ ಮುಖ್ಯ ಪಾತ್ರವನ್ನು ವಹಿಸಬಾರದು, ಸಿದ್ದರಾಮಯ್ಯ ಸೈದ್ಧಾಂತಿಕವಾದ ಮಾತಗಳನ್ನು ಆಡುತ್ತಿದ್ದಾರೆ, ಮತ ಯಾರನ್ನು ಬೇಕಾದರೂ ಕೇಳಬಹುದು, ಅವರು ಬಹಿರಂಗವಾಗಿಯೇ ಮತಯಾಚನೆ ಮಾಡಿದ್ದಾರೆ ಎಂದು ಹೇಳಿದರು.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಬಗ್ಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ ಸಂಖ್ಯಾಬಲದಲ್ಲಿ ಕಡಿಮೆಯಿದೆ, ಸಮಾನ ಮನಸ್ಕರು, ಜಾತ್ಯತೀತ ಮೇಲೆ ನಂಬಿಕೆ ಇಟ್ಟಿರುವವರು ಮತ ಹಾಕಿ ಎಂದು ಬೆಂಬಲ ಕೇಳಿದ್ದಾರೆ. ನಾವು ನೇರವಾಗಿ ಹೇಳುತ್ತಿದ್ದೇವೆ, ಜೆಡಿಎಸ್‌ಗೆ ಎಲ್ಲಾ ಸಂದರ್ಭದಲ್ಲು ಅವಕಾಶ ಮಾಡಿಕೊಟ್ಟಿದೆ. ನಿಮ್ಮ ಮನೆ ಬಾಗಿಲಿಗೆ ಬಂದು ಅಧಿಕಾರ ಕೊಟ್ಟಿದ್ದೇವೆ. ಈ ಹೋರಾಟದಲ್ಲಿ ಬಿಜೆಪಿ ವಿರುದ್ಧ ಸಮರ ಸಾರಲು ಕೈಜೋಡಿಸಬೇಕು ಎಂದರು. ಡಿ.ಕೆ.‌ಸುರೇಶ್‌ಗೆ ಕಾಂಗ್ರೆಸ್ ಜಿಲ್ಲಾ ಮುಖಂಡರು ಸಾಥ್ ನೀಡಿದರು.

ಇದನ್ನೂ ಓದಿ | ಪರಿಷತ್‌ ಚುನಾವಣೆಯಲ್ಲಿ ನಿರಾಣಿ, ಶಹಾಪುರ ಗೆಲುವು ಖಚಿತ ಎಂದ ಬಿಎಸ್‌ವೈ, ಭರ್ಜರಿ ಪ್ರಚಾರ

Exit mobile version