Site icon Vistara News

Street Dogs Survey: ಬಿಬಿಎಂಪಿ ಸಮೀಕ್ಷೆ; ಬೆಂಗಳೂರಿನಲ್ಲಿವೆ 2.8 ಲಕ್ಷ ಬೀದಿ ನಾಯಿಗಳು

Street Dogs

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಮೀಕ್ಷೆ ವರದಿ ಬಿಡುಗಡೆಯಾಗಿದೆ. ನಾಲ್ಕು ವರ್ಷಗಳ ಬಳಿಕ ಪಾಲಿಕೆಯಿಂದ ಬೀದಿ ನಾಯಿಗಳ ಸಮೀಕ್ಷೆ ಮಾಡಲಾಗಿದ್ದು, ಬಿಬಿಎಂಪಿಯ ಎಂಟು ವಲಯಗಳಲ್ಲಿ ಒಟ್ಟು 2,79,335 ಬೀದಿ ನಾಯಿಗಳಿವೆ ಎಂದು ಸಮೀಕ್ಷೆಯಲ್ಲಿ (Street Dogs Survey) ತಿಳಿದುಬಂದಿದೆ.

ಈ ಬಗ್ಗೆ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕಚಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. 2019ರಲ್ಲಿ ನಡೆದ ಸಮೀಕ್ಷೆ ಪ್ರಕಾರ ನಗರದಲ್ಲಿ 3.10 ಲಕ್ಷ ಬೀದಿ ನಾಯಿಗಳಿದ್ದವು. ಈ ಬಾರಿಯ ಸಮೀಕ್ಷೆಯಲ್ಲಿ 2.79 ಲಕ್ಷ ಬೀದಿ ನಾಯಿಗಳಿರುವುದು ಕಂಡುಬಂದಿದೆ. ಬಿಬಿಎಂಪಿ ಕೈಗೊಂಡ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಿಂದ ಶೇ.20 ರಷ್ಟು ಬೀದಿ ನಾಯಿಗಳ ಸಂಖ್ಯೆ ಕುಸಿತವಾಗಿದೆ ಎಂದು ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಬಳಿಕ ಪಾಲಿಕೆಯಿಂದ ಬೀದಿ ನಾಯಿಗಳ ಸಮೀಕ್ಷೆ ಮಾಡಲಾಗಿದೆ. ಆ್ಯಪ್ ಮುಖಾಂತರ 50 ತಂಡಗಳ ಜತೆ ಈ ಸಮೀಕ್ಷೆ ಮಾಡಲಾಗಿದೆ. ಶೇ.70 ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡದಿರುವುದು ಕಂಡು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Chilume Case: ಬಿಬಿಎಂಪಿ ಮುಖ್ಯ ಆಯುಕ್ತರ ಕೊರಳಿಗೆ ಸುತ್ತಿಕೊಂಡ ಚಿಲುಮೆ ಹಗರಣ

ಈ ವರ್ಷ ಒಟ್ಟು 15 ಸಾವಿರ ಜನರಿಗೆ ಬೀದಿ ನಾಯಿಗಳು ಕಚ್ಚಿರುವ ಪ್ರಕರಣ ದಾಖಲಾಗಿದೆ. ಪ್ರತಿ ವರ್ಷ ಸಂತಾನಶಕ್ತಿ ಹರಣ ಚಿಕಿತ್ಸೆಗೆ 6-8 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಬೀದಿ ನಾಯಿಗಳಿಗೆ ಮೈಕ್ರೋ ಚಿಪ್ ಅಳವಡಿಸಲು ಟೆಂಡರ್ ಆಹ್ವಾನಿಸಲಾಗಿದೆ. ಒಂದು ಬೀದಿ ನಾಯಿಗೆ ಮೈಕ್ರೋ ಚಿಪ್ ಅಳವಡಿಸಲು ಅಂದಾಜು 200 ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತರ ಕೊರಳಿಗೆ ಸುತ್ತಿಕೊಂಡ ಚಿಲುಮೆ ಹಗರಣ

ಬೆಂಗಳೂರು: ಚಿಲುಮೆ ಸಂಸ್ಥೆಯ ಹಗರಣ ಇದೀಗ ಬಿಬಿಎಂಪಿ ಮುಖ್ಯ ಆಯುಕ್ತರ ಕೊರಳಿಗೆ ಸುತ್ತಿಕೊಂಡಿದೆ. ರಾಜ್ಯಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ ಚಿಲುಮೆ ಹಗರಣಕ್ಕೆ (Chilume Case) ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧವೇ ತನಿಖೆಗೆ ಆದೇಶ ನೀಡಿದೆ.

ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ನಡೆದಿದ್ದ ಚಿಲುಮೆ ಸಂಸ್ಥೆಯ ಹಗರಣ ಭಾರೀ ಸಂಚರಣ ಸೃಷ್ಟಿಸಿತ್ತು. ಇದರಿಂದ ಇಬ್ಬರು ಐಎಎಸ್ ಅಧಿಕಾರಿಗಳು ಹುದ್ದೆ ಕಳೆದುಕೊಂಡಿದ್ದರು. ಎಲ್ಲವೂ ಮುಗಿದು ಹೋಯಿತು ಎನ್ನುವಷ್ಟರಲ್ಲಿ ಇದೀಗ ಬಿಬಿಎಂಪಿಯ ಮುಖ್ಯ ಆಯುಕ್ತರ ಬುಡಕ್ಕೆ ಬಂದಿದೆ.

ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬೆಳಕಿಗೆ ಬಂದಿದ್ದ ಚಿಲುಮೆ ಸಂಸ್ಥೆ ಪ್ರಕರಣ ಸಂಬಂಧ ಮತದಾರರ ಖಾಸಗಿ ಮಾಹಿತಿ ಸಂಗ್ರಹಕ್ಕೆ (voter data theft case) ಅವಕಾಶ ಮಾಡಿಕೊಡಲಾಗಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ತನಿಖೆ ಮಾಡಿ ವರದಿ ನೀಡಲು ರಾಜ್ಯದ ಮುಖ್ಯಕಾರ್ಯದರ್ಶಿಗಳಿಗೆ ರಾಜ್ಯ ಸರ್ಕಾರ ಸೂಚಿಸಿದೆ.

ಇದನ್ನೂ ಓದಿ | IT Raid: ಬೆಳ್ಳಂಬೆಳಗ್ಗೆ ಐಟಿ ಶಾಕ್‌, ರಾಜಧಾನಿಯ ಹಲವು ಕಡೆ ದಾಳಿ

ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯೂ ಆಗಿದ್ದರು. ತುಷಾರ್ ಗಿರಿನಾಥ್ ಚಿಲುಮೆ ಸಂಸ್ಥೆಗೆ ಮತಪಟ್ಟಿ ಪರಿಷ್ಕರಣೆಗೆ ಅವಕಾಶ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜುಲೈ 3 ರಂದು ಪತ್ರ ಬರೆದು ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಪತ್ರದಲ್ಲಿ ಮತದಾರರ ಖಾಸಗಿ ಮಾಹಿತಿ ಸಂಗ್ರಹಿಸಲು ಚಿಲುಮೆ ಸಂಸ್ಥೆಗೆ ಅವಕಾಶ ನೀಡಿ, ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ಹಾಗೂ ಚಿಲುಮೆ ಸಂಸ್ಥೆಯ ಲೋಪದ ಬಗ್ಗೆ ಪೂರ್ಣ ಪ್ರಮಾಣದ ತನಿಖೆ ನಡೆಸುವಂತೆ ಕೋರಿದ್ದರು. ಈಗ ತನಿಖೆಗೆ ಆದೇಶ ಮಾಡಿದ್ದು ಭಾರೀ ಸಂಚಲನ ಸೃಷ್ಟಿ ಮಾಡಿದೆ.

Exit mobile version