ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಬಿಬಿಎಂಪಿ ಶಾಲೆಗಳ ಶೈಕ್ಷಣಿಕ ವರ್ಷವು ಮೇ 29 ರಿಂದ ಆರಂಭವಾಗಲಿದೆ. ಈ ನಡುವೆ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರು ಗೈರಾಗಲಿದ್ದಾರೆ (BBMP Teachers absent) ಎಂಬ ಮಾತು ಕೇಳಿ ಬಂದಿದೆ. ಬಿಬಿಎಂಪಿ ಶಾಲಾ-ಕಾಲೇಜುಗಳಿಗೆ ಹೊರಗುತ್ತಿಗೆ ಆಧಾರದಲ್ಲಿ (Outsourcing Basis) ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಆದರೆ, ಈ ಬಾರಿ ನೇಮಕಾತಿ ಪ್ರಕ್ರಿಯೆಯಲ್ಲಿ ಸಮಸ್ಯೆ ಆಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ಏಜೆನ್ಸಿಗಳು ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ನಗರದ ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ಜೂನ್ 1 ರಿಂದ ಗೈರಾಗುವ ಆತಂಕ ಎದುರಾಗಿದೆ.
4 ವಲಯಗಳಿಗೆ ಪ್ರತ್ಯೇಕ ಟೆಂಡರ್ ಕರೆದ ಪಾಲಿಕೆ
ಬಿಬಿಎಂಪಿ ಶಾಲಾ-ಕಾಲೇಜುಗಳಿಗೆ 700ಕ್ಕೂ ಹೆಚ್ಚು ಶಿಕ್ಷಕರ ಹೊರಗುತ್ತಿಗೆ ನೇಮಕಾತಿ ಟೆಂಡರ್ ಕರೆಯಲಾಗಿತ್ತು. ಆದರೆ, ಹಲವು ದಿನಗಳಿಂದ ಟೆಂಡರ್ ಕರೆದರೂ ಯಾವ ಏಜೆನ್ಸಿಗಳು ಭಾಗವಹಿಸಿಲ್ಲ. ಈ ಕಾರಣದಿಂದ ಬಿಬಿಎಂಪಿಯಿಂದ ಮರು ಟೆಂಡರ್ ಕರೆಯಲಾಗಿದ್ದು, ಈ ಪ್ರಕ್ರಿಯೆ ಮುಗಿಯುವವರೆಗೂ ಶಿಕ್ಷಕರ ಕೊರತೆ ಉಂಟಾಗಲಿದೆ.
ಹೊರಗುತ್ತಿಗೆ ಶಿಕ್ಷಕರ ಟೆಂಡರ್ ಪ್ರಕಿಯೆಯಲ್ಲಿ ಹಲವಾರು ನ್ಯೂನತೆಗಳು ಇರುವುದರಿಂದ ಗುತ್ತಿಗೆದಾರ ಸಂಸ್ಥೆಗಳು ಭಾಗವಹಿಸುತ್ತಿಲ್ಲ ಎಂಬ ಆರೋಪವು ಕೇಳಿ ಬಂದಿದೆ. ನಾಲ್ಕು ವಲಯಗಳಲ್ಲಿ ಟೆಂಡರ್ ಕರೆದಿರುವುದರಿಂದ ವಲಯವಾರುಗಳಲ್ಲಿ ಬಿಲ್ಲು ಸಂದಾಯ ಮಾಡಿ, ಶಿಕ್ಷಕರಿಗೆ ವೇತನ ನೀಡಲು ವಿಳಂಬವಾಗುತ್ತದೆ. ಒಂದು ವಲಯ ವ್ಯಾಪ್ತಿಯಲ್ಲಿ ಸಕಾಲಕ್ಕೆ ಸಂಬಳ ಪಾವತಿಯಾದರೆ, ಇನ್ನೊಂದು ವಲಯ ವ್ಯಾಪ್ತಿಯಲ್ಲಿ ವೇತನ ಬಿಡುಗಡೆಯಲ್ಲಿ ವಿಳಂಬವಾದಲ್ಲಿ ಅರ್ಧ ಶಿಕ್ಷಕರಿಗೆ ಸಂಬಳ ನೀಡುವುದು, ಇನ್ನೊಬ್ಬರಿಗೆ ನೀಡದಂತೆ ಆಗುತ್ತದೆ ಎಂದು ಗುತ್ತಿಗೆದಾರರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಪೇಮೆಂಟ್ ವಿಚಾರವಾಗಿ ಅನೇಕ ಗೊಂದಲಗಳು
ಅಧಿಕಾರ ಕೇಂದ್ರೀಕರಣ ಮಾಡಿ ಒಂದೇ ಕಡೆ ಬಿಲ್‌ಗಳ ಪಾವತಿ ಮಾಡಿ, ಒಂದೇ ಕಡೆ ವೇತನ ಪಾವತಿ ಮಾಡುವುದರಿಂದ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಬಿಬಿಎಂಪಿ ಹೊರಗುತ್ತಿಗೆ ಶಿಕ್ಷಕರ ನೇಮಕಾತಿಗೆ ಬೇಕಾದ ನಿಯಮಾವಳಿ ಪ್ರಕಾರ ಶಿಕ್ಷಕರನ್ನು ನೀಡುತ್ತೇವೆ. ಆದರೆ, ವಲಯವಾರು ಟೆಂಡರ್ ಕೈ ಬಿಡಬೇಕು ಎಂದು ಏಜೆನ್ಸಿಗಳು ಮನವಿ ಮಾಡಿವೆ.
ಇದನ್ನೂ ಓದಿ: Weather Report: ಈ ವಾರ ಕರಾವಳಿಯಲ್ಲಿ ಮಳೆ ಅಬ್ಬರ; ಉಳಿದೆಡೆ ಬಿಸಿಲಿಗೆ ಜನ ತತ್ತರ
ಸದ್ಯ, ಟೆಂಡರ್ ಅಂತಿಮವಾಗದೆ ಹೋದರೆ ಜೂನ್ ತಿಂಗಳಲ್ಲಿ ಆರಂಭವಾಗುವ ಶಾಲೆಗೆ ಹೊರಗುತ್ತಿಗೆ ಶಿಕ್ಷಕರು ಇರುವುದಿಲ್ಲ. ಟೆಂಡರ್ ನಿಯಮಾವಳಿ ಸರಳೀಕರಣ ಮಾಡಿರುವ ಕಾರಣದಿಂದ ಯಾರು ಬೇಕಾದರೂ ಭಾಗವಹಿಸಬಹುದು. ಇದರಿಂದ ಉತ್ತಮ ಗುಣಮಟ್ಟದ ಶಿಕ್ಷಕರನ್ನು ನೀಡಲು ಅಸಾಧ್ಯವಾಗುತ್ತದೆ ಎಂದು ಏಜೆನ್ಸಿಗಳು ಬೇಸರ ವ್ಯಕ್ತಪಡಿಸಿವೆ. ಆದರೆ ಪಾಲಿಕೆ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.