Site icon Vistara News

BBMP workers protest : ಸರ್ಕಾರಿ ನೌಕರರ ಪ್ರತಿಭಟನೆ ನಡುವೆಯೇ ಪೌರ ಕಾರ್ಮಿಕರಿಂದಲೂ ಕೆಲಸ ಸ್ಥಗಿತ, ಕಸ ಎತ್ತೋರ‍್ಯಾರು?

BBMP protest

#image_title

ಬೆಂಗಳೂರು: ಒಂದು ಕಡೆ ರಾಜ್ಯಾದ್ಯಂತ ಸರ್ಕಾರಿ ನೌಕರರು ಮಾರ್ಚ್‌ ಒಂದರಿಂದ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿರುವ ನಡುವೆಯೇ ಇನ್ನೊಂದು ಕಡೆ ಬೆಂಗಳೂರು ಮಹಾನಗರ ಪಾಲಿಕೆಯ ಪೌರ ಕಾರ್ಮಿಕರು (BBMP workers protest) ಕೂಡಾ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗೇ ಮುಂದುವರಿದರೆ ಬೆಂಗಳೂರಿನ ಕಸ ಎತ್ತೋರು ಯಾರು ಎನ್ನುವ ಗಂಭೀರ ಪ್ರಶ್ನೆ ಎದುರಾಗಿದೆ.

ಯಾವುದೇ ತಾರತಮ್ಯವಿಲ್ಲದೆ ತಮ್ಮೆಲ್ಲರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಪೌರ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದಾರೆ. ಸೋಮವಾರ ಮತ್ತು ಮಂಗಳವಾರ ಮಂದಗತಿಯಲ್ಲಿದ್ದ ಪ್ರತಿಭಟನೆ ಮಾರ್ಚ್‌ ೧ರಿಂದ ತೀವ್ರ ಗತಿಯನ್ನು ಪಡೆದುಕೊಳ್ಳಲಿದೆ. ಸೇವೆ ಕಾಯಂನಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ ಪೌರ ಕಾರ್ಮಿಕರು ಮಂಗಳವಾರ ಪಾಲಿಕೆ ಕಚೇರಿ ಮುಂದೆಯೇ ಕಸದ ರಾಶಿ ತಂದು ಸುರಿದಿದ್ದಾರೆ. ಬೆಂಗಳೂರಿನ ಹೆಚ್ಚಿನ ಭಾಗದಲ್ಲಿ ಕಸ ಸಂಗ್ರಹ ಕಾರ್ಯ ನಡೆದಿಲ್ಲ. ಕಾಯಂ ಆಗಿರುವ ಸುಮಾರು ೨, ೫೦೦ ಕಾರ್ಮಿಕರು ಮಾತ್ರ ಕೆಲಸಕ್ಕೆ ಹಾಜರಾಗಿದ್ದು, ಉಳಿದ ೧೪,೫೦೦ ಮಂದಿ ಕೆಲಸಕ್ಕೆ ಹೋಗಿಲ್ಲ. ಹೀಗಾಗಿ ರಾಜಧಾನಿಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.

ಏನಿದು ಬೇಡಿಕೆ, ಯಾಕೆ ಪ್ರತಿಭಟನೆ?

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು ೧೭,೦೦೦ ಕಾರ್ಮಿಕರಿದ್ದಾರೆ. ಅವರನ್ನು ಕಾಯಂಗೊಳಿಸಬೇಕು ಎಂಬ ಬೇಡಿಕೆ ಜೋರಾಗಿದೆ. ರಾಜ್ಯ ಸರಕಾರ ಇದೀಗ ಕೆಲವೊಂದು ಮಾರ್ಗದರ್ಶಿ ಸೂತ್ರಗಳನ್ನು ಇಟ್ಟುಕೊಂಡು ೨,೫೦೦ ಕಾರ್ಮಿಕರನ್ನು ಕಾಯಂಗೊಳಿಸಿದೆ. ಇದು ಉಳಿದ ೧೪,೫೦೦ ಕಾರ್ಮಿಕರನ್ನು ಕೆರಳಿಸಿದೆ. ತಮ್ಮ ನಡುವೆ ತಾರತಮ್ಯ ಧೋರಣೆ ಅನುಸರಿಸಬಾರದು ಎಂದು ಅವರು ಆಗ್ರಹಿಸಿದ್ದು, ಮಾಡುವುದಾದರೆ ಎಲ್ಲರನ್ನೂ ಕಾಯಂ ಮಾಡಿ ಎಂದು ಆಗ್ರಹಿಸಿದ್ದಾರೆ.

ಈಗ ಬಿಡುಗಡೆ ಮಾಡಿರುವ ತಾತ್ಕಾಲಿಕ ಪಟ್ಟಿಯನ್ನು ಕೈಬಿಡಬೇಕು, ಎಲ್ಲರನ್ನೂ ಕಾಯಂ ಮಾಡಬೇಕು ಎಂದು ಆಗ್ರಹಿಸಿ ಈ ಮುಷ್ಕರ ನಡೆಯುತ್ತಿದೆ ಎಂದು ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷರಾಗಿರುವ ಅಮೃತ್‌ ರಾಜ್‌ ಹೇಳಿದ್ದಾರೆ. ಒಂದು ವೇಳೆ ಕಾರ್ಮಿಕರ ಮುಷ್ಕರ ನಿಲ್ಲದೆ ಹೋದರೆ ರಾಜಧಾನಿಯಲ್ಲಿ ಕಸ ಸಂಗ್ರಹ ಸಾಧ್ಯವಾಗದೆ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದು ಹೇಳಲಾಗಿದೆ.

ಸಾರ್ವತ್ರಿಕ ಮುಷ್ಕರಕ್ಕೂ ಬೆಂಬಲ

ಈ ನಡುವೆ, ರಾಜ್ಯದಲ್ಲಿ ಸರ್ಕಾರಿ ನೌಕರರು ಮಾರ್ಚ್‌ ೧ರಿಂದ ಆರಂಭಿಸಲಿರುವ ಮುಷ್ಕರಕ್ಕೆ ಬಿಬಿಎಂಪಿ ನೌಕರರ ಸಂಘವೂ ಬೆಂಬಲ ನೀಡಿದೆ. ಹೀಗಾಗಿ ಬಿಬಿಎಂಪಿ ಕಚೇರಿಗಳಲ್ಲಿರುವ ಸಿಬ್ಬಂದಿ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಅಮೃತರಾಜ್‌ ತಿಳಿಸಿದ್ದಾರೆ.

ಇದನ್ನೂ ಓದಿ : 7th Pay commission : ನಾಳೆಯಿಂದ ಸರ್ಕಾರಿ ನೌಕರರ ಮಹಾಮುಷ್ಕರ; ಸಿಎಂ ಬೊಮ್ಮಾಯಿ ಭರವಸೆ ಕೆಲಸ ಮಾಡುತ್ತಾ?

Exit mobile version