Site icon Vistara News

ನಾಗೇಶ್‌ ಮನೆ ಮೇಲೆ ದಾಳಿ ಮಾಡಿದ್ದು ವಿದ್ಯಾರ್ಥಿಗಳಲ್ಲ ಎಂದ ಆರಗ, ಹಾಗಿದ್ರೆ ದಾಳಿ ಮಾಡಿದ್ಯಾರು?

ಆರಗ ಜ್ಞಾನೇಂದ್ರ

ದಾವಣಗೆರೆ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಎಲ್ಲ ಗೊಂದಲಗಳು ಬಗೆಹರಿದಿವೆ. ಸದ್ಯಕ್ಕೆ ಯಾವುದೇ ಕೋಮು ಗಲಬೆ, ಹಿಜಾಬ್ ವಿವಾದ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಬುಧವಾರ ಈ ಕುರಿತು ದಾವಣಗೆರೆ ನಗರದ ಎಸ್ಪಿ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವರು, “ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನೆ ಮೇಲೆ ದಾಳಿ ಮಾಡಿದ್ದು, ವಿದ್ಯಾರ್ಥಿಗಳಲ್ಲ, ಅವರೆಲ್ಲ‌ ಕಾಂಗ್ರೆಸ್ ಕಾರ್ಯಕರ್ತರು. ಅಕ್ರಮವಾಗಿ ಅವರ ಮನೆಗೆ ನುಗ್ಗಿ ಚಡ್ಡಿ ತಂದು ಸುಟ್ಟಿದ್ದಾರೆ. ಆ ಘಟನೆಯಲ್ಲಿ ದಾವಣಗೆರೆಯ ಮೂರು ಜನ ಇದ್ದಾರೆ.‌ ಈ ಬಗ್ಗೆ ತನಿಖೆ ನಡೆಯುತ್ತಿದೆ” ಎಂದರು.

ಇದನ್ನು ಓದಿ| ಸಚಿವ ಬಿ.ಸಿ. ನಾಗೇಶ್‌ ಮನೆ ಮೇಲೆ ದಾಳಿ ಯತ್ನಕ್ಕೆ ಬಿಜೆಪಿ ನಾಯಕರ ಖಂಡನೆ

ಬಳಿಕ “ಪಿಎಸ್ಐ ನೇಮಕಾತಿ ಹಗರಣ ಇದೇ ಮೊದಲೇನಲ್ಲ.‌ ಈ ಮೊದಲು ಇಂತಹ ಹಗರಣ ನಡೆದಿವೆ. ಈ ಹಿಂದೆ ನಡೆದ ಹಗರಣಗಳ‌ನ್ನೂ ಬಯಲಿಗೆಳೆಯುತ್ತೇವೆ. ನಮ್ಮ ಇಲಾಖೆ ಹಗರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿಗಳನ್ನೇ ಜೈಲಿಗೆ ಕಳುಹಿಸಿದೆ. ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ,” ಎಂದರು.‌

ಬೆಂಗಳೂರಿನಲ್ಲಿ ಹುಜ್ಬುಲ್ ಉಗ್ರನ ಸೆರೆ ವಿಚಾರವಾಗಿ ಹೆಚ್ಚಿಗೆ ಮಾತಾಡುವುದಿಲ್ಲ. ಶ್ರೀನಗರ ಪೊಲೀಸರು ಬೆಂಗಳೂರಿನಲ್ಲಿ ಒಬ್ಬನನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸರು ಶ್ರೀನಗರ ಪೊಲೀಸರ ಜೊತೆ ಸಂಪರ್ಕದಲ್ಲಿದ್ದಾರೆ. ದೇಶದ ಸಮಗ್ರತೆ, ಹಿತದೃಷ್ಟಿಯಿಂದ ಈ ಬಗ್ಗೆ ಹೆಚ್ಚಾಗಿ ಮಾತಾಡೋದಿಲ್ಲ ಎಂದರು.

ರಾಜ್ಯದಲ್ಲಿ ಸ್ಯಾಟಲೈಟ್ ಸಿಗ್ನಲ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಅರಗ ಜ್ಞಾನೇಂದ್ರ, ಶಿವಮೊಗ್ಗ ಸೇರಿದಂತೆ ರಾಜ್ಯದ ಕೆಲ ಭಾಗಗಳಲ್ಲಿ ಸ್ಯಾಟಲೈಟ್ ಕಾಲ್ ಹೋಗಿರೋದು ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಕೇಂದ್ರದ ತನಿಖಾ ತಂಡದ ಜೊತೆ ಸಂಪರ್ಕದಲ್ಲಿದ್ದೇವೆ ಎಂದರು.‌

ಇದನ್ನು ಓದಿ| ನನ್ನ ವಾಚ್‌ ಹೆಸರು ಹೇಳಿ ನಿಮ್ಮ ಹಗರಣ ಮುಚ್ಚಿಹಾಕುವ ಪ್ರಯತ್ನ ಎಂದೂ ಫಲಿಸಲ್ಲ

Exit mobile version