ಬೆಂಗಳೂರು: ಅರ್ಕಾವತಿ ಬಡಾವಣೆಯ ಭೂಸ್ವಾಧೀನ ಸಮಸ್ಯೆ ಹಾಗೂ ಕಾಮಗಾರಿಗಳ ಪ್ರಸ್ತುತ ಪ್ರಗತಿ ಕುರಿತು ನಗರದ ಬಿಡಿಎ ಕಚೇರಿ ಸಭಾಂಗಣದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕುಮಾರ್ ನಾಯಕ್ ನೇತೃತ್ವದಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಯಿತು.
ಅರ್ಕಾವತಿ ಬಡಾವಣೆಯ ಭೂಸ್ವಾಧೀನತೆಯ ಕುರಿತಂತೆ 2003ರಿಂದಲೂ ಭೂಮಾಲೀಕರು ಪ್ರತಿರೋಧ ವ್ಯಕ್ತಪಡಿಸುತ್ತಿರುವುದು, ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವುದು ಮತ್ತು ನ್ಯಾಯಮೂರ್ತಿ ಕೆ.ಎನ್. ಕೇಶವ ನಾರಾಯಣ ಸಮಿತಿಯ ಪ್ರಸ್ತುತ ವಿಚಾರಣೆ ಹಾಗೂ ವರದಿ ನೀಡಿರುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ನ್ಯಾಯಮೂರ್ತಿ ಕೆ.ಎನ್. ಕೇಶವ ನಾರಾಯಣ ಸಮಿತಿ ಇತ್ತೀಚೆಗೆ ನೀಡಿರುವ 61 ಪ್ರಕರಣಗಳಿಗೆ ವರದಿಗಳ ಬಗ್ಗೆ ಕ್ರಮಕೈಗೊಳ್ಳಲು ಪ್ರಾಧಿಕಾರದ ಮುಂದಿನ ಮಂಡಳಿ ಸಭೆಯಲ್ಲಿ ಮಂಡಿಸಲು ತೀರ್ಮಾನಿಸಲಾಯಿತು.
ಪ್ರಸ್ತುತ ಅರ್ಕಾವತಿ ಬಡಾವಣೆಯ 13 ಗ್ರಾಮಗಳ ವ್ಯಾಪ್ತಿಯಲ್ಲಿ 234.17 ರೂ. ಕೋಟಿ ಮೊತ್ತದ ರಸ್ತೆ ಅಭಿವೃದ್ಧಿ, ಆರ್‌ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗಳು ಬಹುತೇಕ ಮುಕ್ತಾಯ ಹಂತದಲ್ಲಿರುತ್ತವೆ. ಬಡಾವಣೆಗೆ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಗಾಗಿ 490,00 ಕೋಟಿ ರೂ. ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಬೆಂಗಳೂರು ಜಲಮಂಡಳಿಗೆ ಪ್ರಥಮ ಹಂತದಲ್ಲಿ 150 ಕೋಟಿ ರೂ.ಗಳನ್ನು ಈಗಾಗಲೇ ಠೇವಣಿ ಮಾಡಿದ್ದು, ಈಗಾಗಲೇ ಟೆಂಡರನ್ನು ಕರೆಯಲಾಗಿದೆ ಎಂದು ಆಯುಕ್ತ ಕುಮಾರ್ ನಾಯಕ್ ತಿಳಿಸಿದರು.
ಬಡಾವಣೆಯ 19ನೇ ಬ್ಲಾಕ್ ಚಳ್ಳಕೆರೆ ಗ್ರಾಮದಲ್ಲಿ ಡಾಂಬರೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ. ವಿದ್ಯುದೀಕರಣಕ್ಕಾಗಿ 245.45 ಕೋಟಿ ರೂ. ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ | IT Raid | ಬೆಂಗಳೂರಿನಲ್ಲಿ ಚಿನ್ನದ ವ್ಯಾಪಾರಿಗಳ ಮೇಲೆ ಐಟಿ ದಾಳಿ, 25ಕ್ಕೂ ಹೆಚ್ಚು ಮನೆಗಳಿಗೆ ಅಧಿಕಾರಿಗಳ ಲಗ್ಗೆ