ಬೆಂಗಳೂರು: ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಮಾಲ್ಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದೆ. ಆರು ವರ್ಷಗಳ ಹಿಂದೆ ಅಂತಿಮಗೊಂಡಿದ್ದ ವಿವಾದಾತ್ಮಕ ಒಪ್ಪಂದಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮರುಜೀವ ನೀಡಲು ಮುಂದಾಗಿದ್ದು, ಬಾಡಿಗೆದಾರರು ಹಾಗೂ ಸಾರ್ವಜನಿಕರ ವಿರೋಧದ ನಡುವೆ 7 ಬಿಡಿಎ ಕಾಂಪ್ಲೆಕ್ಸ್‌ಗಳನ್ನು 30 ವರ್ಷದ ಅವಧಿಗೆ ಖಾಸಗಿ ಕಂಪನಿಗೆ ಗುತ್ತಿಗೆಗೆ ನೀಡಲು ಬಿಡಿಎ ನಿರ್ಧರಿಸಿದೆ.
ಆರ್ಥಿಕವಾಗಿ ನಷ್ಟದಲ್ಲಿರುವ ಬಿಡಿಎ, 7 ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಖಾಸಗಿ ಕಂಪನಿ ತೆಕ್ಕೆಗೆ ನೀಡಲು ಮುಂದಾಗಿದೆ. ಎಂಬೆಸ್ಸಿ ಕಂಪನಿಯ ಅಂಗ ಸಂಸ್ಥೆಯಾದ ಎಂಎಫ್‌ಎಆರ್ ಕನ್‌ಸ್ಟ್ರಕ್ಷನ್ಸ್ ಪ್ರೈವೆಟ್ ಲಿಮಿಟೆಡ್ ಕಂಪನಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡುವ ಪ್ರಸ್ತಾವನೆ ಇದೆ.
ಬಿಜೆಪಿ ಸರ್ಕಾರದಲ್ಲಿ ಕಾಂಪ್ಲೆಕ್ಸ್‌ಗಳನ್ನು ಗುತ್ತಿಗೆ ನೀಡುವ ಪ್ರಸ್ತಾವನೆ ತಿರಸ್ಕಾರಗೊಂಡಿತ್ತು. ಇದೀಗ ಕಾಂಗ್ರೆಸ್ ಸರ್ಕಾರದಲ್ಲಿ ಏಳು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಖಾಸಗಿ ಕಂಪನಿಯು, ಬಿಡಿಎ ಅಧೀನದಲ್ಲಿರುವ 7 ವಾಣಿಜ್ಯ ಸಂಕೀರ್ಣಗಳಿಗೆ ಅತ್ಯಾಧುನಿಕ ಸ್ಪರ್ಶ ನೀಡಿ, ಬಾಡಿಗೆಗೆ ನೀಡಲಿದೆ. ಇದರಿಂದ ಬಂದ ಆದಾಯದಲ್ಲಿ ಶೇ.30 ರಷ್ಟು ಬಿಡಿಎಗೆ ಸಿಗಲಿದ್ದು, ಶೇ.70ರಷ್ಟು ಪಾಲು ಖಾಸಗಿ ಕಂಪನಿ ಪಾಲಾಗಲಿದೆ.
ಕೋರಮಂಗಲ, ಇಂದಿರಾನಗರ, ಆಸ್ಟಿನ್ ಟೌನ್, ದೊಮ್ಮಲೂರು, ಎಚ್‌ಎಸ್‌ಆರ್ ಲೇಔಟ್, ನಾಗರಬಾವಿ, ಆರ್‌ಎಂವಿ ಮಿನಿ ಮಾರುಕಟ್ಟೆ, ಆರ್.ಟಿ.ನಗರ, ಎಚ್‌ಬಿಆರ್ ಲೇಔಟ್‌ನಲ್ಲಿರುವ ಕಾಂಪ್ಲೆಕ್ಸ್‌ಗಳನ್ನು ಗುತ್ತಿಗೆ ನೀಡಲು ಬಿಡಿಎ ನಿರ್ಧರಿಸಿದ್ದು, 16 ವರ್ಷಗಳಿಂದಲೂ ಪಾಲುದಾರಿಕೆಗಾಗಿ ಖಾಸಗಿ ಕಂಪನಿ ಪ್ರಯತ್ನ ನಡೆಸುತ್ತಿತ್ತು. 2008ರಿಂದ ಪಾಲುದಾರಿಕೆಗೆ ಪ್ಲ್ಯಾನ್ ನಡೆಯುತ್ತಿತ್ತು ಎನ್ನಲಾಗಿದೆ.
ಬಿಎಸ್‌ವೈ ಸರ್ಕಾರದ ಮುಂದೆ ಕಾಂಪ್ಲೆಕ್ಸ್‌ಗಳನ್ನು ಗುತ್ತಿಗೆ ನೀಡುವ ಪ್ರಸ್ತಾವನೆ ಬಂದಿತ್ತು. ಆದರೆ, ಆಗ ತಿರಸ್ಕೃತಗೊಂಡು ಈಗ ಕಾಂಗ್ರೆಸ್ ಸರ್ಕಾರದಲ್ಲಿ ಗುತ್ತಿಗೆ ಒಪ್ಪಂದ ಫೈನಲ್ ಆಗಿದೆ. ಪುನರ್ ನಿರ್ಮಾಣದ ಹೆಸರಲ್ಲಿ ಸಂಕೀರ್ಣಗಳು ಖಾಸಗಿ ಕಂಪನಿ ಪಾಲಾಗುತ್ತಿದ್ದು, 30 ವರ್ಷಗಳ ನಂತರವೂ ಮತ್ತೆ ಅವಧಿ ವಿಸ್ತರಣೆಗೆ ಅವಕಾಶ ನೀಡಲಾಗಿದೆ.
ಇನ್ನು ಸರ್ಕಾರದಿಂದ ಅಂತಿಮ ಆದೇಶ ಬರುವ ಮುನ್ನವೇ ಕಾಂಪ್ಲೆಕ್ಸ್‌ಗಳನ್ನು ಖಾಸಗಿ ಕಂಪನಿ ವಶಕ್ಕೆ ಪಡೆದಿದ್ದು, ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಬಳಿ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಿದೆ. ಇದಕ್ಕೆ ಬಾಡಿಗೆದಾರರು ಹಾಗೂ ಕೆಲ ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ | Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ
ಬಿಡಿಎ ವಿರುದ್ಧ ಎಎಪಿ ಪ್ರತಿಭಟನೆ
ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಖಾಸಗೀಯರಿಗೆ ನೀಡುವ ಬಿಡಿಎ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಸಾವಿರಾರು ಕೋಟಿ ರೂ. ಬೆಲೆಬಾಳುವ ವಾಣಿಜ್ಯ ಸಂಕೀರ್ಣಗಳನ್ನು ಭೂ ಮಾಫಿಯಾಗಳ ಕೈಗೆ ನೀಡಲಾಗುತ್ತಿದೆ ಎಂದು ಎಎಪಿ ಕಾರ್ಯಕರ್ತರು ಇಂದಿರಾನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದ್ದರು.