Site icon Vistara News

BDA Site : ಬಿಡಿಎ 30×40 ಸೈಟ್‌ಗೆ 59 ಲಕ್ಷ ರೂ.! ಬಡವರಿಗೆ ಗಗನ ಕುಸುಮ

30 40 site in Bengalurus Shivaram Karanth Layout to cost Rs 59 lakh

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA Site) ಪ್ರತಿಷ್ಠಿತ ಬಡಾವಣೆ ಎಂದೇ ಕರೆಸಿಕೊಳ್ಳುತ್ತಿರುವ ಶಿವರಾಮ ಕಾರಂತ ಬಡಾವಣೆಯ (Dr Shivaram Karanth Layout) ಸೈಟ್‌ಗಳ ದರ ನಿಗದಿ ಮಾಡಲಾಗಿದೆ. ಇದರ ಅನುಷ್ಠಾನಕ್ಕೆ ಸರ್ಕಾರದ ಅನುಮೋದನೆಗಾಗಿ ಬಿಡಿಎ ಕಾಯುತ್ತಿದೆ. ಶಿವರಾಮ ಕಾರಂತ ಬಡಾವಣೆಯಲ್ಲಿನ 30×40 ಅಡಿ ಹಾಗೂ ನಂತರದ ಎಲ್ಲ ಅಳತೆಯ ನಿವೇಶನಗಳಿಗೆ ಪ್ರತಿ ಚದರ ಅಡಿಗೆ ₹4,900 ನಿಗದಿಪಡಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವಂತೆಯೂ 20×30 ಅಡಿ ಅಳತೆಯ ನಿವೇಶನಗಳಿಗೆ ₹3,850 ದರ ನಿಗದಿಪಡಿಸಲು ಉದ್ದೇಶಿಸಲಾಗಿದೆ.

ಈ ಮೂಲಕ ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯಲ್ಲಿ 30×40 ಅಳತೆಯ ನಿವೇಶನವು 59 ಲಕ್ಷ ರೂ. ಆಗಲಿದೆ. ಡಾ.ಶಿವರಾಮ ಕಾರಂತ ಬಡಾವಣೆಯ 34,000 ನಿವೇಶನಗಳಲ್ಲಿ ಅರ್ಧದಷ್ಟು ನಿವೇಶನಗಳನ್ನು ಮಾರುಕಟ್ಟೆ ದರದಲ್ಲಿ ಮಾರಾಟ ಮಾಡುತ್ತಿರುವುದಕ್ಕೆ ವಿರೋಧವು ವ್ಯಕ್ತವಾಗಿದೆ. ಮಧ್ಯಮ ವರ್ಗದವರ ಪಾಲಿಗೆ ಕೈಗೆಟಕುವಂತಿರಬೇಕಾದ ಸೈಟುಗಳನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದು ಬಡವರು ಹಾಗೂ ಮಧ್ಯಮ ವರ್ಗದವರ ಭೂಮಿ ಖರೀದಿ ಕನಸು ನನಸಾಗಿಯೇ ಉಳಿಯಲಿದೆ.

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ 2008ರಲ್ಲಿ 3,456 ಎಕರೆ ಜಮೀನು ಬಿಡಿಎ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ 2008ರ ಆಧಾರದ ಮೇಲೆ ಪರಿಹಾರ ನೀಡಲು ಮುಂದಾಗಿದ್ದ ಕಾರಣಕ್ಕೆ, ಭೂಮಿ ನೀಡಿದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಈ ಸಮಸ್ಯೆ ಎಲ್ಲವೂ ಬಗೆಹರಿದಿದೆ. ಬಡಾವಣೆಯಲ್ಲಿ 34 ಸಾವಿರ ನಿವೇಶನಗಳಿದ್ದು, ಇದರಲ್ಲಿ ಸುಮಾರು ಅರ್ಧದಷ್ಟು ನಿವೇಶನಗಳನ್ನು ರೈತರಿಗೆ ಮೀಸಲಿಡಬೇಕಿದೆ. ಹೀಗಾಗಿ, ಅಭಿವೃದ್ಧಿ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಹೆಚ್ಚಿನ ದರವನ್ನು ಶಿವರಾಮ ಕಾರಂತ ಬಡಾವಣೆಯ ನಿವೇಶನಗಳಿಗೆ ನಿಗದಿಪಡಿಸಲು ಬಿಡಿಎ ನಿರ್ಧರಿಸಿದೆ. ಸದ್ಯ ಇದಕ್ಕೆ ಸರ್ಕಾರದ ಅನುಮೋದನೆ ಕೇಳಿದೆ. ಆದರೆ ಬಡಾವಣೆಯ ಸುತ್ತಮುತ್ತಲಿನ ಮಾರುಕಟ್ಟೆ ದರಕ್ಕಿಂತ ಕಡಿಮೆ ದರವನ್ನೇ ಪ್ರಸ್ತಾಪಿಸಲಾಗಿದೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ತಿಳಿಸಿದರು.

ಇದನ್ನೂ ಓದಿ: Karnataka weather : ಮುಂದಿನ 48 ಗಂಟೆಯಲ್ಲಿ ಉತ್ತರ ಕರ್ನಾಟಕ ಮಂದಿ ಗಡಗಡ!

ಶಿವರಾಮ ಕಾರಂತ ಬಡಾವಣೆಗೆ ಡಿಮ್ಯಾಂಡ್‌

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 2016 ರಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಚದರ ಅಡಿಗೆ ₹2,200 ರಿಂದ ₹2,400 ನಿಗದಿಪಡಿಸಲಾಗಿತ್ತು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಉದ್ದೇಶಿತ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಸಮೀಪವಿರುವ ಶಿವರಾಮ ಕಾರಂತ ಬಡಾವಣೆಗೆ ಬೇಡಿಕೆ ಹೆಚ್ಚಾಗಿದ್ದು, ಮಾರುಕಟ್ಟೆಯ ಲಾಭ ಗಳಿಸಲು ಬಿಡಿಎ ನಿರ್ಧರಿಸಿದೆ. ಶಿವರಾಮ ಕಾರಂತ ಬಡಾವಣೆಯು 17 ಹಳ್ಳಿಗಳಲ್ಲಿ ವಿಸ್ತರಿಸಿಕೊಂಡಿದ್ದು, ಈವರೆಗೆ ಸುಮಾರು 30 ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸುಮಾರು 25 ಸಾವಿರ ನಿವೇಶನಗಳಿಗೆ ಸಂಖ್ಯೆ ನಿಗದಿಪಡಿಸಲಾಗಿದೆ. ಸೆಪ್ಟೆಂಬರ್‌ನಲ್ಲಿಯೇ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಆರಂಭವಾಗುತ್ತದೆ ಎನ್ನಲಾಗಿತ್ತು. ಆದರೆ ಈವರೆಗೆ ಚಾಲನೆ ಸಿಕ್ಕಿರಲಿಲ್ಲ.

ಎಲ್ಲರ ಕನಸುಗಳನ್ನು ಮೀರಿದೆ ಬಿಡಿಎ ಸೈಟು- ಸುರೇಶ್‌ ಕುಮಾರ್‌ ವ್ಯಂಗ್ಯ

ಬಿಡಿಎ ಸೈಟ್‌ನ ರೇಟು ಕೇಳಿ ಮಾಜಿ ಸಚಿವ ಸುರೇಶ್‌ ಕುಮಾರ್‌ ಅವರು ಟ್ವೀಟ್‌ (ಎಕ್ಸ್‌) ಮಾಡಿದ್ದಾರೆ. ಬಿಡಿಎ ಎಂದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಲ್ಲ, ಎಲ್ಲರ ಕನಸುಗಳನ್ನು ಮೀರಿದ ಪ್ರಾಧಿಕಾರ ಎಂದು ಟೀಕಿಸಿದ್ದಾರೆ. ಬಡವರಿಗೆ ಸುಲಭಕ್ಕೆ ಸಿಗಬೇಕಾದ ಬಿಡಿಎ ಸೈಟುಗಳು ಕನಸಾಗಿಯೇ ಉಳಿಯಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

https://x.com/nimmasuresh/status/1738236520224768151?s=20

ಬಿಡಿಎ ಫ್ಲ್ಯಾಟ್‌ಗಳ ದರವೂ ಏರಿಕೆ

ಬಿಡಿಎ ನಿರ್ಮಿಸಿರುವ ಮಾರಾಟಕ್ಕೆ ಲಭ್ಯವಿರುವ ಏಳು ಯೋಜನೆಗಳ ಫ್ಲ್ಯಾಟ್‌ ದರ ಸದ್ಯದಲ್ಲಿಯೇ ಶೇ 3ರಿಂದ ಶೇ 8ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ನಡೆದ ಸಭೆಯಲ್ಲಿ ಮಾರ್ಗಸೂಚಿ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಫ್ಲ್ಯಾಟ್‌ಗಳ ಅಧಿಸೂಚಿತ ದರವನ್ನು ಹೆಚ್ಚಿಸುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿದೆ.

ಬಿಡಿಎ ವಸತಿ ವಿಭಾಗ ಎಂಜಿನಿಯರ್‌ಗಳು ಫ್ಲ್ಯಾಟ್‌ಗಳ ದರವನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಇದಕ್ಕೆ ಬಿಡಿಎ ಆಯುಕ್ತರ ಸಮ್ಮತಿ ಪಡೆಯಲಾಗುತ್ತದೆ. ಬಳಿಕ ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ಸಮ್ಮತಿ ದೊರೆತ ಮೇಲೆ ಅಧಿಸೂಚಿತ ದರ ಜಾರಿಗೆ ಬರಲಿದೆ. ಮಾರ್ಗಸೂಚಿ ದರದಂತೆ ಫ್ಲ್ಯಾಟ್‌ಗಳ ದರ ಮರುನಿಗದಿಯಾಗಲಿದ್ದು ನಾಗರಬಾವಿಯಲ್ಲಿರುವ ಫ್ಲ್ಯಾಟ್‌ಗಳ ದರ ಶೇ 8ರಷ್ಟು ಹೆಚ್ಚಾಗಲಿದೆ. ಕಣ್ಮಿಣಿಕೆಯಲ್ಲಿ ಫ್ಲ್ಯಾಟ್‌ಗಳ ದರ ಕನಿಷ್ಠ ಶೇ 3ರಷ್ಟು ಅಧಿಕವಾಗಲಿದೆ. ಉಳಿದ ಯೋಜನೆಗಳ ಫ್ಲ್ಯಾಟ್‌ ಶೇ 3ರಿಂದ ಶೇ 8ರಷ್ಟು ಹೆಚ್ಚಾಗಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version