ತುಮಕೂರು: ಇಲ್ಲಿನ ಎಲೆಕಡಕಲು ಗ್ರಾಮದಲ್ಲಿ ಕರಡಿ ದಾಳಿಗೆ (Bear Attacked) ರೈತನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ರೈತನ ಮೇಲೆ ಕರಡಿ ದಾಳಿ ನಡೆಸಿದೆ. ಕರಡಿಗೆ ಪ್ರತಿರೋಧ ತೋರಲು ಆಗದ ರೈತ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ರಾಜು (33) ಮೃತಪಟ್ಟ ಯುವ ರೈತ.
ಇತ್ತ ಹುಲಿಯೂರುದುರ್ಗ ಪಟ್ಟಣದಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಅರಣ್ಯ ಇಲಾಖೆಯ ಕಚೇರಿಯ ಮುಂಭಾಗ ಮೃತ ರೈತನ ಶವವನ್ನಿಟ್ಟು ಗ್ರಾಮಸ್ಥರು ಪ್ರತಿಭಟಿಸಿದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ಪರಿಹಾರ ನೀಡುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಮೃತನ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಒತ್ತಾಯಿಸಿದರು. ಬಳಿಕ ಸ್ಥಳಕ್ಕೆ ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ. ರವಿಬಾಬು ಭೇಟಿ ನೀಡಿ, ಕುಟುಂಬದವರ ಮನವೊಲಿಕೆಗೆ ಪ್ರಯತ್ನಿಸಿದರು. 7.5 ಲಕ್ಷ ಪರಿಹಾರದ ಆದೇಶ ಪ್ರತಿ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಇದನ್ನೂ ಓದಿ | ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ಆಯ್ಕೆಯಾಗಲು ಎಂ-ಸೀಲ್ ಅಂಟಿಸಿಕೊಂಡು ಬಂದ ಯುವತಿ; ಕುಳ್ಳ ಹುಡುಗಿಯ ಖತರ್ನಾಕ್ ಐಡಿಯಾ!