Site icon Vistara News

Road Accident: ಅಪರಿಚಿತ ವಾಹನ ಡಿಕ್ಕಿಯಾಗಿ ಗಂಟೆಗಟ್ಟಲೇ ನರಳಾಡಿತು ಕರಡಿ

Bear death in road accident at kampli

ಬಳ್ಳಾರಿ: ಅಪರಿಚಿತ ವಾಹನ ಡಿಕ್ಕಿಯಿಂದ (Road Accident) ಹೆಣ್ಣು ಕರಡಿಯೊಂದು ಮೃತಪಟ್ಟಿರುವುದು ಜಿಲ್ಲೆಯ ಕಂಪ್ಲಿ ಸಮೀಪದ ಮಾರೆಮ್ಮ ದೇವಸ್ಥಾನ ಬಳಿ ಭಾನುವಾರ ನಸುಕಿನಲ್ಲಿ ಸಂಭವಿಸಿದೆ.

ಅಪಘಾತದಲ್ಲಿ ಕರಡಿಯ ಹಿಂದಿನ ಎಡಗಾಲಿಗೆ ಬಲವಾದ ಪೆಟ್ಟು ತಗುಲಿ ತೀವ್ರ ರಕ್ತಸ್ರಾವವಾಗಿದೆ. ಅಪಘಾತದ ನಂತರ ಕರಡಿ ಹೆದ್ದಾರಿ ಪಕ್ಕದ ಗದ್ದೆಯಲ್ಲಿ ನರಳುತ್ತಿರುವುದನ್ನು ಗಮನಿಸಿದ ದಾರಿಹೋಕರು ದರೋಜಿ ಕರಡಿಧಾಮದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ನೀರು ಕುಡಿಸಿದ ಸ್ವಲ್ಪ ಸಮಯದಲ್ಲಿ ಅದು ಮೃತಪಟ್ಟಿದೆ.

ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಿಂದ ಈ ಘಟನೆ ನಡೆದಿರುವುದು ಪ್ರಾಥಮಿಕವಾಗಿ ಕಂಡುಬರುತ್ತಿದೆ. ಸುಮಾರು 5ರಿಂದ 6 ವರ್ಷದ ಹೆಣ್ಣು ಕರಡಿಯಾಗಿದ್ದು, ಇದರ ಕಳೇಬರವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳಾಂತರಿಸುವುದಾಗಿ ಅರಣ್ಯಾಧಿಕಾರಿ ತಿಳಿಸಿದರು.

ಇದನ್ನೂ ಓದಿ: Video Viral: ಸರ್ಕಾರಿ ಬಸ್ಸಲ್ಲಿ ಮಹಿಳೆಯರ ಪಾರುಪಥ್ಯ; ಸೀಟ್‌ ಹಿಡಿಯೋಕೆ ಡ್ರೈವರ್‌ ಸೀಟ್‌ನಿಂದ ನುಗ್ಗಿದ ಗಂಡಸರು!

ಶಿಗ್ಗಾಂವಿಯಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಮಾರಣಾಂತಿಕ ದಾಳಿ ಮಾಡಿದ್ದ ಕರಡಿ ಸಾವು!

ಹಾವೇರಿ: ಶಿಗ್ಗಾಂವಿ ತಾಲೂಕಿನ ಬಸವನಕಟ್ಟಿ ಗ್ರಾಮದ ಬಳಿ ಇಬ್ಬರು ವ್ಯಕ್ತಿಗಳು ಜಮೀನಿಗೆ ತೆರಳಿದ್ದ ವೇಳೆ ಕರಡಿಯೊಂದು ದಾಳಿ (Bear Attack) ಮಾಡಿ ಮಾರಣಾಂತಿಕವಾಗಿ ಗಾಯಗೊಳಿಸಿತ್ತು. ಇದು ಸ್ಥಳೀಯರ ಆತಂಕಕ್ಕೂ ಕಾರಣವಾಗಿತ್ತು. ಈಗ ಇವರ ಮೇಲೆ ದಾಳಿ ಮಾಡಿದ್ದ ಕರಡಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಶಿಗ್ಗಾಂವಿ ತಾಲೂಕು ಬಸನಕಟ್ಟಿ ಗ್ರಾಮದಲ್ಲಿ ರೈತರಾದ ಬಸಿರ್ ಸಾಬ್ ಸೌದತ್ತಿ , ರಜಾಕ್ ಎಂಬುವವರ ಮೇಲೆ ಕರಡಿ ದಾಳಿ ಮಾಡಿತ್ತು. ಆಗ ಕರಡಿ ಜತೆ ಈ ಇಬ್ಬರೂ ಸೆಣಸಾಡಿದ್ದಾರೆ. ಈ ವೇಳೆ ತಮ್ಮ ರಕ್ಷಣೆಗಾಗಿ ಇಬ್ಬರು ರೈತರು ಕರಡಿ ಮೇಲೆ ಕೊಡಲಿಯನ್ನು ಬೀಸಿದ್ದರು. ಇದರಿಂದ ಪೆಟ್ಟು ತಿಂದ ಕರಡಿ ಅಲ್ಲಿಂದ ಓಡಿ ಹೋಗಿತ್ತು. ಬಲವಾದ ಕೊಡಲಿ ಏಟಿಗೆ ರಕ್ತಸ್ರಾವವಾಗಿ ಕರಡಿ ಮೃತಪಟ್ಟಿರುವುದು ಗೊತ್ತಾಗಿದೆ.

ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಬಸಿರ್ ಸಾಬ್ ಸೌದತ್ತಿ , ರಜಾಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಇವರಿಬ್ಬರು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೊಸದುರ್ಗ ತಾಲೂಕಿನಲ್ಲಿ ಕರಡಿಗಳ ಹಾವಳಿ

ಚಿತ್ರದುರ್ಗ: ಹೊಸದುರ್ಗ ತಾಲೂಕಿನಲ್ಲಿ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಗೌಸಿಯ ನಗರದಲ್ಲಿ ಮೂರು ಕರಡಿಗಳು ಕಾಣಿಸಿಕೊಂಡಿವೆ. ಶನಿವಾರ ಸಂಜೆ ಗೌಸಿಯ ನಗರದಲ್ಲಿ ಈ ಕರಡಿಗಳು ಪ್ರತ್ಯಕ್ಷಗೊಂಡಿವೆ.

ಕಳೆದ ಆರು ತಿಂಗಳಲ್ಲಿ ಹುಳಿಯಾರ್ ಸರ್ಕಲ್, ಗೌಸಿಯ ನಗರ, ಭೈರಪ್ಪನ ಬೆಟ್ಟ, ಕೋಟೆ ಬಡಾವಣೆ, ಚನ್ನ ಸಮುದ್ರ ಬೆಟ್ಟದಲ್ಲಿ ಕರಡಿಗಳು ಕಾಣಿಸುತ್ತಿವೆ. ಇದರಿಂದ ಈ ಭಾಗದಲ್ಲಿ ಸಂಚರಿಸಲು ಭಯಪಡುವಂತೆ ಆಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Free Bus Service: ಹೆಚ್ಚಿದ ನಾರಿ ಶಕ್ತಿ! 166 ಕೋಟಿ ರೂಪಾಯಿ ಮೀರಿ ಮುನ್ನುಗ್ಗುತ್ತಿರುವ ಶಕ್ತಿ ಸ್ಕೀಂ!

ಜಮೀನುಗಳಿಗೆ ಹೋಗಲು ರೈತರು ಹಿಂದೇಟು ಹಾಕುತ್ತಿದ್ದು, ಶಾಲಾ – ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಭಯದಿಂದಲೇ ಸಂಚರಿಸಬೇಕಾಗಿದೆ. ಈ ಬಗ್ಗೆ ಎಷ್ಟೇ ಮನವಿ ಮಾಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

Exit mobile version