ಬೆಂಗಳೂರು: ಮೀಸಲಾತಿಗಾಗಿ ಆಗ್ರಹಿಸಿ ಮೂರು ದಿನಗಳಿಂದ ನಡೆಯುತ್ತಿರುವ ಬೇಡ ಜಂಗಮ ಹೋರಾಟವು ಮುಂದುವರಿದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರಾಜ್ಯ ಸರ್ಕಾರವು ಕೊಟ್ಟ ಮಾತು ತಪ್ಪಿದ್ದು, ಅಧಿಕೃತ ಆದೇಶ ಬರುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂಬ ಸಂದೇಶವನ್ನು ರವಾನಿಸಲಾಗಿದೆ.
ಗುರುವಾರದಿಂದಲೇ (ಜೂನ್ ೩೦) ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆರಂಭವಾಗಿದ್ದು, ಸರ್ಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಲಾಗಿತ್ತು. ಬೇಡ ಜಂಗಮ ಪ್ರಮಾಣಪತ್ರವನ್ನು ನಮಗೆ ನೀಡಲೇಬೇಕು. ಇದು ಒಂದು ದಿನದ ಹೋರಾಟವಲ್ಲ. ಸರ್ಕಾರವು ನಮ್ಮ ಬೇಡಿಕೆಯನ್ನು ಈಡೇರಿಸದೇ ಇದ್ದರೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಹ ಹೋರಾಟವನ್ನು ಆರಂಭಿಸುವ ಎಚ್ಚರಿಕೆಯನ್ನೂ ನೀಡಲಾಗಿತ್ತು.
ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸಮಾಜಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮನವಿ ಪತ್ರ ಸ್ವೀಕರಿಸಿದ್ದರು. ಬಳಿಕ ಮಾತನಾಡಿದ್ದ ಅವರು, ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಆಗಮಿಸಿದ್ದು, ಬೇಡಿಕೆಗೆ ಪೂರಕ ವಾತಾವರಣ ನಿರ್ಮಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲದೆ, ಆರು ತಿಂಗಳಿನಿಂದ ಪ್ರಯತ್ನ ನಡೆಯುತ್ತಿದ್ದು, ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಆದೇಶಗಳನ್ನು ಗಮನದಲ್ಲಿ ಇಟ್ಟುಕೊಂಡು ಶುಕ್ರವಾರ ಸಂಜೆಯೊಳಗೆ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ | ಬೇಡ ಜಂಗಮರಿಗೆ ಅನ್ಯಾಯ ಮಾಡಬೇಡಿ ಶಾಪ ತಟ್ಟುತ್ತೆ: ರಾಜೇಶ್ವರ ಶ್ರೀಗಳ ಕಿಡಿ
ಅಹೋರಾತ್ರಿ ಧರಣಿಗೆ ಕರೆ
ನಾವು ಈಗಾಗಲೇ ಬೃಹತ್ ಸಮಾವೇಶ ಮೂಲಕ ಸರ್ಕಾರದ ಗಮನ ಸೆಳೆದಿದ್ದೇವೆ. ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅವರು ಸರ್ಕಾರದ ಪರವಾಗಿ ಆಗಮಿಸಿ ಶುಕ್ರವಾರ ಸಂಜೆಯೊಳಗೆ ಆದೇಶ ಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಆದೇಶ ಬಂದಿಲ್ಲ. ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ನಮಗೆ ಕರೆ ಮಾಡಿ ತಿಳಿಸಿದ್ದರು. ಆದರೆ, ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬೇಡ ಜಂಗಮ ಸಂಘಟನೆ ಅಧ್ಯಕ್ಷ ಬಿ.ಡಿ. ಹೀರೆಮಠ್ ಹೇಳಿಕೆ ನೀಡಿದ್ದಾರೆ.
ಆದೇಶ ಬರುವವರೆಗೂ ಕದಲಲ್ಲ – ಹಿರೇಮಠ
ಬೇಡ ಜಂಗಮ ಮೀಸಲಾತಿಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರವು ಮಾತು ತಪ್ಪಿದ್ದು, ಮೀಸಲಾತಿ ಸಂಬಂಧ ಇನ್ನೂ ಆದೇಶವನ್ನು ಹೊರಡಿಸಿಲ್ಲ. ನಾವು ಸರ್ಕಾರದ ಭರವಸೆಗೆ ಮಣಿಯುವ ಪ್ರಶ್ನೆ ಇಲ್ಲ. ಸರ್ಕಾರದ ಆದೇಶ ನಮ್ಮ ಕೈಸೇರುವವರೆಗೂ ಇಲ್ಲಿಂದ ನಾವು ಕದಲುವುದಿಲ್ಲ ಎಂಬ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಬಿ.ಡಿ.ಹಿರೇಮಠ್ ಹೇಳಿದ್ದಾರೆ.
ಇದನ್ನೂ ಓದಿ | ಪಂಚಮಸಾಲಿ ಮೀಸಲಾತಿ: ಎರಡು ತಿಂಗಳು ಬೀಸೊ ದೊಣ್ಣೆಯಿಂದ ಬೊಮ್ಮಾಯಿ ಪಾರು