Site icon Vistara News

Beekeeping | ಜೇನು ಕೃಷಿ ಪಾಠ ಬೆಟ್ಟಂಪಾಡಿ ಟು ಗುಜರಾತ್‌; ಮೋದಿ ತವರಿನಲ್ಲಿ ಕರುನಾಡ ಹವಾ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಕನಸಾದ ಮಧು ಕಾಂತ್ರಿಯನ್ನು (Beekeeping) ನನಸು ಮಾಡಲು ದೇಶದೆಲ್ಲೆಡೆ ಜೇನು ಕೃಷಿಯ ಮೇಲೆ ಒಲವು ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಧಾನಿ ತವರು ಗುಜರಾತ್‌ನ ರೈತರು ಜೇನು ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದ್ದಾರೆ.

ಗುಜರಾತ್ ರೈತರಿಗೆ ಜೇನು ಸಾಕಾಣಿಕೆಯ ಬಗ್ಗೆ ಹೆಚ್ಚಿನ ತರಬೇತಿ ನೀಡಲು ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜೇನು ಉತ್ಪಾದಕರೊಬ್ಬರು ಗುಜರಾತ್‌ಗೆ ತೆರಳಲಿದ್ದಾರೆ. ಈಗಾಗಲೇ ದಕ್ಷಿಣಕನ್ನಡ ಜಿಲ್ಲೆಯ 100 ಜೇನು ಕುಟುಂಬಗಳನ್ನು ಗುಜರಾತ್‌ಗೆ ರವಾನಿಸಿರುವ ಇವರಿಗೆ ಒಟ್ಟು 1 ಸಾವಿರ ಜೇನು ಕುಟುಂಬಗಳನ್ನು ಗುಜರಾತ್‌ನಲ್ಲಿ ಬೆಳೆಸುವ ಜವಾಬ್ದಾರಿ ವಹಿಸಲಾಗಿದೆ.

ಹೌದು ಜೇನು ಕೃಷಿಯಲ್ಲಿ ಅಪ್ರತಿಮ ಸಾಧನೆ ತೋರುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಯುವಕ ಮನಮೋಹನ್ ಆರಂಬ್ಯ ತುಡುವೆ ಜೇನಿನ ಸಿಹಿಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸುವಲ್ಲಿ ಹೆಜ್ಜೆ ಇರಿಸಿದ್ದು, ಗುಜರಾತ್‍ನಲ್ಲಿಯೂ ಇವರ ಜೇನು ಕೃಷಿಗೆ ಬೇಡಿಕೆ ವ್ಯಕ್ತವಾಗಿದೆ.

ಜೇನು ಕೃಷಿ ಸಂಬಂಧ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿದ್ದು, ಕರ್ನಾಟಕ ರಾಜ್ಯದ ಜೇನು ಉತ್ಪಾದನೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇದ್ದಾರೆ. ಇವರು ರಾಜ್ಯಾದ್ಯಂತ ಜೇನು ಕುಟುಂಬಗಳನ್ನು ಒದಗಿಸಿಕೊಟ್ಟು, ಜೇನು ಕೃಷಿಕರಿಗೆ ಪ್ರೇರಣೆಯಾಗಿದ್ದಾರೆ. ಜೇನು ಕೃಷಿಯಲ್ಲಿನ ಇವರ ಸಾಧನೆ ಮತ್ತು ಯಶಸ್ಸಿನ ಬಗ್ಗೆ ತಿಳಿದ ಗುಜರಾತ್‌ನ ಕೃಷಿಕರಿಂದ 1000 ಪೆಟ್ಟಿಗೆಗೆ ಬೇಡಿಕೆ ಬಂದಿದೆ.

ಕರ್ನಾಟಕದ ಏಕೈಕ ಯುವ ಕೃಷಿಕ
ಮನಮೋಹನ 8ನೇ ತರಗತಿಯಲ್ಲಿ ಇರುವಾಗಲೇ ಜೇನು ಕೃಷಿಯಲ್ಲಿ ತೊಡಗಿದ್ದರು. ಕೇವಲ ಒಂದು ಪೆಟ್ಟಿಗೆಯಿಂದ ಆರಂಭಗೊಂಡ ಕಾಯಕವು ಈ ನಾಲ್ಕು ಸಾವಿರ ಪೆಟ್ಟಿಗೆಯನ್ನು ದಾಟಿದೆ. ಒಂದು ಪೆಟ್ಟಿಗೆಯಿಂದ ಗರಿಷ್ಠ 48.6 ಕಿಲೋ ಜೇನು ಸಂಗ್ರಹಿಸಿದ್ದೂ ಇದೆ. ಬೆಟ್ಟಂಪಾಡಿ ಸಹಿತ ರಾಜ್ಯದ ನಾನಾ ಕಡೆಗಳಲ್ಲಿ ಬೇರೆಯವರ ಜಾಗದಲ್ಲೂ ಜೇನು ಪೆಟ್ಟಿಗೆ ಇರಿಸಿದ್ದಾರೆ. ಸ್ಥಳ ಬಾಡಿಗೆಯಾಗಿ ಮಾಲಿಕನಿಗೆ ಒಂದಷ್ಟು ಜೇನು ಮತ್ತು ಪರಾಗಸ್ಪರ್ಶದಿಂದ ಫಸಲು ಹೆಚ್ಚಳವಾಗಿದೆ. ವಾರ್ಷಿಕವಾಗಿ 20,000 ಕೆ.ಜಿ. ಜೇನು, 450 ಕೆ.ಜಿ. ಮೇಣ ಸಂಗ್ರಹ, 4000 ಜೇನು ಕುಟುಂಬ ಮಾರಾಟ ಮಾಡಿರುವುದು ಮನಮೋಹನರ ಸಾಧನೆಯಾಗಿದೆ. ‘ಹನಿ ವರ್ಲ್ಡ್’ ಇವರ ಬ್ರಾಂಡ್ ಆಗಿದೆ. ಜೇನು ಕುಟುಂಬ ಮಾರಾಟ ಮಾಡುವ ಹಾಗೂ ಶುದ್ಧ ಜೇನು ಸಂಗ್ರಹಿಸುವ ಕರ್ನಾಟಕದ ಏಕೈಕ ಯುವ ಕೃಷಿಕ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

ಕೇರಳ, ಕರ್ನಾಟಕ ರಾಜ್ಯದ ದಕ್ಷಿಣಕನ್ನಡ, ಕೊಡಗು, ಚಿತ್ರದುರ್ಗ ಹೀಗೆ ನಾನಾ ಕಡೆಗಳಲ್ಲಿ ಮನಮೋಹನ ಅವರ ಜೇನಿನ ಪೆಟ್ಟಿಗೆ ಇದೆ. ಜೇನು ಕೃಷಿಯಲ್ಲೇ ಸುಮಾರು 20 ಜನರಿಗೆ ನೇರ ಉದ್ಯೋಗ ನೀಡುತ್ತಿರುವ ಮನಮೋಹನ್ ಜೇನಿನ ಕೃಷಿ ತನ್ನ ಅಗಾಧ ಅನುಭವವನ್ನು ಜೇನು ಸಾಕಾಣಿಕೆಗಾಗಿ ತಮ್ಮ ಬಳಿ ಬರುವವರಿಗೆಲ್ಲಾ ಧಾರೆ ಎರೆದಿದ್ದಾರೆ.

ಗುಜರಾತಿನಿಂದ 1000 ತುಡುವೆ ಜೇನಿನ ಕುಟುಂಬಕ್ಕೆ ಬೇಡಿಕೆ ವ್ಯಕ್ತವಾಗಿದೆ. 100 ಪೆಟ್ಟಿಗೆಯಲ್ಲಿ ಜೇನು ಕುಟುಂಬವನ್ನು ಒದಗಿಸಿದ್ದೇನೆ. ನಾಲ್ಕು ದಿನದಲ್ಲಿ ಅಲ್ಲಿಗೆ ತೆರಳಿ ಕೃಷಿಗೆ ಸಹಕಾರ ನೀಡಲಿದ್ದೇನೆ. ಈಗಾಗಲೇ ವಾರ್ಷಿಕವಾಗಿ ಜೇನು ಕೃಷಿಯಿಂದ 20 ಟನ್ ಜೇನು ಉತ್ಪಾದನೆ ಆಗುತ್ತಿದೆ.
| ಮನಮೋಹನ್ ಆರಂಬ್ಯ, ಜೇನು ಕೃಷಿಕ

ಇದನ್ನೂ ಓದಿ | Queen Elizabeth Death | ರಾಣಿ ನಿಧನದ ಸುದ್ದಿಯನ್ನು ಜೇನು ನೊಣಗಳಿಗೆ ಏಕೆ ತಿಳಿಸಬೇಕು? ಹೇಳದಿದ್ದರೆ ಏನಾಗುತ್ತದೆ?

Exit mobile version