ಬೆಳಗಾವಿ: ಶಾಸಕ ಅಭಯ್ ಪಾಟೀಲ್ ಜಿಲ್ಲಾಧಿಕಾರಿಯನ್ನು ಭೇಟಿಯಾದ ಬೆನ್ನಲ್ಲೇ ಮುಸ್ಲಿಂ ಮುಖಂಡರು ಪ್ರಾದೇಶಿಕ ಆಯುಕ್ತರನ್ನು ಭೇಟಿಯಾಗಿ ಬಾಪಟ್‌ಗಲ್ಲಿಯ ಮಸೀದಿ ಇರುವ ಜಾಗದ ದಾಖಲೆಪತ್ರಗಳನ್ನು ಸಲ್ಲಿಸಿ, ಪೂಜಾ ಸ್ಥಳ ಕಾಯ್ದೆ-1991ರಂತೆ ಸೂಕ್ತ ಕ್ರಮ ಕೈಗೊಳ್ಳಲು ಮನವಿ ಮನವಿ ಮಾಡಿದ್ದಾರೆ. ಈ ಮೂಲಕ ಬೆಳಗಾವಿಯ ಮಂದಿರ ಮಸೀದಿ ವಿವಾದ ತಾರಕಕ್ಕೇರಿದೆ.
ಕಾಂಗ್ರೆಸ್ ಮಾಜಿ ಶಾಸಕ ಫಿರೋಜ್ ಸೇಠ್ ನೇತೃತ್ವದಲ್ಲಿ ಸೋಮವಾರ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ಭೇಟಿ ಮಾಡಿದ ಮುಸ್ಲಿಂ ಮುಖಂಡರು, ರಾಜಕೀಯ ಲಾಭಕ್ಕಾಗಿ ಎರಡು ಸಮುದಾಯದ ನಡುವೆ ಬೆಂಕಿ ಹಚ್ಚಲು ಯತ್ನಿಸಲಾಗುತ್ತಿದೆ. ಹೀಗಾಗಿ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಸ್ಥಳ ವಿವಾದ ಇತ್ಯರ್ಥಗೊಳಿಸಬೇಕು ಎಂದು ಕೋರಿದ್ದಾರೆ.
ನಾವು ದ್ವೇಷಕ್ಕೆ ಉತ್ತರ ಪ್ರೀತಿಯಿಂದಲೇ ನೀಡುತ್ತೇವೆ, ಯಾವುದೇ ಸರ್ಕಾರ ಇರಲಿ ಅಶಾಂತಿ ಇದ್ದರೆ ದೇಶ ಅಭಿವೃದ್ಧಿ ಆಗುವುದಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಈ ರೀತಿ ಮಾತನಾಡಬಾರದು. ಗಾಳಿಮಾತು ಮಾತನಾಡಿ ಜನರನ್ನು ಪ್ರಚೋದಿಸುವುದು ನಿಲ್ಲಿಸಬೇಕು ಎಂದು ಮಾಜಿ ಶಾಸಕ ಫಿರೋಜ್ ಸೇಠ್ ತಿಳಿಸಿದ್ದಾರೆ. ಬೆಳಗಾವಿಯ ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ರಾಜು ಸೇಠ್, ಹಲವು ಮುಸ್ಲಿಂ ಮುಖಂಡರು ಇದ್ದರು.
ನಗರದ ರಾಮದೇವಗಲ್ಲಿಯಲ್ಲಿರುವ ಶಾಹಿ ಮಸೀದಿಯನ್ನು ದೇವಸ್ಥಾನ ಕೆಡವಿ ಕಟ್ಟಲಾಗಿದೆ. ಈ ಬಗ್ಗೆ ಸರ್ವೇ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಅಭಯ್ ಪಾಟೀಲ್ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ | ಮಳಲಿ ಮಸೀದಿಯ ಹಿಡಿ ಮಣ್ಣನ್ನೂ ಮುಟ್ಟಲು ಬಿಡುವುದಿಲ್ಲ: SDPI ಅಧ್ಯಕ್ಷ ಅಬ್ದುಲ್ ಮಜೀದ್
ಬ್ರಾಹ್ಮಣರು, ಮುಸ್ಲಿಮರು ಸೇರಿ ಕಟ್ಟಿದ ಮಸೀದಿ
ಬೆಳಗಾವಿ: ನಗರದ ಬಾಪಟ್‌ಗಲ್ಲಿಯಲ್ಲಿರುವ ಶಾಹಿ ಮಸೀದಿಯನ್ನು ಬ್ರಾಹ್ಮಣರು, ಮುಸ್ಲಿಮರು ಸೇರಿ ಕಟ್ಟಿದ್ದು ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ರಾಜ್ಯಾಧ್ಯಕ್ಷ ದಸ್ತಗೀರ್ ಅಗಾ ತಿಳಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ. ತೈಲಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ನಿವಾರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ, ಇವರ ಆಡಳಿತ ವೈಫಲ್ಯ ಮುಚ್ಚಿಡಲು ಮಂದಿರ ಮಸೀದಿ ವಿವಾದ ಮುಂದಿಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಾಸಕ ಅಭಯ್ ಪಾಟೀಲ್ ರಾಜಕೀಯ ಲಾಭಕ್ಕಾಗಿ ಆರೋಪ ಮಾಡುತ್ತಿದ್ದಾರೆ. 10 ತಿಂಗಳಲ್ಲಿ ಚುನಾವಣೆ ಬರಲಿದೆ, ಹೀಗಾಗಿ ಇಂತಹ ವಿಚಾರ ಮುಂದೆ ತರುತ್ತಿದ್ದಾರೆ. ಬಾಪಟ್ ಅನ್ನೋದು ಬ್ರಾಹ್ಮಣರ ಮನೆತನದ ಹೆಸರು, ಬಾಪಟ್ ಗಲ್ಲಿಯಲ್ಲಿ ಮೊದಲು ವಾತಾವರಣ ಬಹಳ ಕೆಟ್ಟಿತ್ತು. ಇದನ್ನು ಅಳಿಸಿ ಹಾಕಲು ಬ್ರಾಹ್ಮಣರು ಹಾಗೂ ಮುಸ್ಲಿಮರು ಸೇರಿ ಶಾಹಿ ಮಸೀದಿ ಕಟ್ಟಿದ್ದಾರೆ, ಭಾರತೀಯ ಶಿಲ್ಪಿಗಳು ಈ ಮಸೀದಿ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ ಎಂದು ಹೇಳಿದ್ದಾರೆ.
12 ವರ್ಷಗಳ ಹಿಂದೆ ಶಾಸಕ ಅಭಯ್ ಪಾಟೀಲ್ ಸಾಯಿಬಾಬಾ ಮಂದಿರ ಧ್ವಂಸಗೊಳಿಸಿದ್ದರು ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಧರ್ಮಗಳ ಮಧ್ಯೆ ಸಂಘರ್ಷ ತರುವುದು ಒಳ್ಳೆಯದಲ್ಲ, ನಾವು ಸಹ ಇಂದು ಅಥವಾ ನಾಳೆ ಜಿಲ್ಲಾಧಿಕಾರಿಯನ್ನು ಭೇಟಿಯಾಗುತ್ತೇವೆ. ಮಸೀದಿ ಸರ್ವೇ ಮಾಡಲು ಜಿಲ್ಲಾಧಿಕಾರಿಗೆ ಅಭಯ್ ಪಾಟೀಲ್ ಸಲ್ಲಿಸಿರುವ ಮನವಿ ತಿರಸ್ಕರಿಸುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯಲ್ಲಿನ ಮದರಸಾ ಖಾಲಿ ಮಾಡಿಸಲು ಆಗ್ರಹ