ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ಒಂದು ಕಡೆ ಅಧಿವೇಶನ (ಬೆಳಗಾವಿ ಅಧಿವೇಶನ) ನಡೆಯುತ್ತಿದ್ದರೆ, ಇನ್ನೊಂದು ಕಡೆ ಮೀಸಲಾತಿ ಹೋರಾಟದ ಕಿಚ್ಚೂ ಜೋರಾಗಿದೆ. ಕ್ಷತ್ರಿಯ ಮರಾಠಾ ಸಮಾಜದ ವತಿಯಿಂದ 2ಎ ಮೀಸಲಾತಿಗಾಗಿ ಸುವರ್ಣ ಸೌಧದ ಎದುರು ಕೊಂಡಸಕೊಪ್ಪದಲ್ಲಿ ಮರಾಠರು ಧರಣಿ ನಡೆಸುತ್ತಿದ್ದಾರೆ.
ʻʻಕಳೆದ ಹತ್ತು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಇದ್ದಾಗ ಮೀಸಲಾತಿ ನೀಡುವಂತೆ ಶಂಕ್ರಪ್ಪ ಆಯೋಗ ಶಿಫಾರಸು ಮಾಡಿದೆ. ಹತ್ತು ವರ್ಷಗಳ ಹಿಂದೆಯೇ 2ಎ ಮೀಸಲಾತಿ ಘೋಷಣೆ ಮಾಡಬೇಕಾಗಿತ್ತು. ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದು 24 ಗಂಟೆಗಳಲ್ಲಿ 2ಎ ಮೀಸಲಾತಿ ಘೋಷಣೆ ಮಾಡುತ್ತೇವೆ ಎಂದು ಯಡಿಯೂರಪ್ಪನವರು ಹೇಳಿದ್ದರು. ಬೊಮ್ಮಾಯಿ ಸಿಎಮ್ ಆದಮೇಲೆ ಕೂಡ 2ಎ ಮೀಸಲಾತಿ ನೀಡುತ್ತೇವೆಂದು ಹೇಳಿದ್ದರು. ಆದರೆ ಬೇಡಿಕೆ ಈಡೇರಿಸಲಿಲ್ಲ. ಡಿಸೆಂಬರ್ 30ರೊಳಗೆ ಮರಾಠಾ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ 50 ಕ್ಷೇತ್ರಗಳಲ್ಲಿ ಮರಾಠಾ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುವುದು. ನಮ್ಮ ಶಕ್ತಿ ಏನೆಂದು ರಾಜಕೀಯ ಪಕ್ಷಗಳಿಗೆ ತೋರಿಸುತ್ತೇವೆʼʼ ಎಂದು ವಿಸ್ತಾರ ನ್ಯೂಸ್‌ಗೆ ಕರ್ನಾಟಕ ಕ್ಷತ್ರಿಯ ಮರಾಠಾ ಮಹಾ ಒಕ್ಕೂಟದ ಅಧ್ಯಕ್ಷ ಶಾಮಸುಂದರ ಗಾಯಕ್ವಾಡ್ ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಶಾಸಕ ಸತೀಶ್ ಜಾರಕಿಹೊಳಿ ಭೇಟಿ ನೀಡಿದರು. ಮರಾಠಾ ಸಮಾಜದ ಮೀಸಲಾತಿ ಹೋರಾಟಕ್ಕೆ ಸಾಥ್ ನೀಡಿದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ʻʻಮರಾಠಾ ಸಮಾಜ ಸ್ವಾಭಿಮಾನಿ ಸಮಾಜ. ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಕೇಳುತ್ತಿದ್ದೀರಿ. ರಾಜಕಾರಣದಲ್ಲಿ ನನಗೆ ಪುನರ್ಜನ್ಮ ಕೊಟ್ಟಿದ್ದು ಮರಾಠಾ ಸಮಾಜʼʼ ಎಂದರು. ʻʻನಿಮ್ಮ ಸಮಾಜದ ಬೆಂಬಲಕ್ಕೆ ನಿಲ್ಲುತ್ತೇನೆ. ಸದನದಲ್ಲಿ ಮಾತಾಡಲಿಕ್ಕೆ ಅವಕಾಶ ಕೇಳಿದ್ದೇನೆ. ಮೀಸಲಾತಿಗಾಗಿ ಸಿಎಮ್‌ಗೆ ಆಗ್ರಹಿಸುತ್ತೇನೆ. ನಮ್ಮ ಪಕ್ಷದ ಮುಖಂಡರ ಜೊತೆಗೂ ಮಾತಾಡುತ್ತೇನೆʼʼ ಎಂದು ಕನ್ನಡ ಹಾಗೂ ಮರಾಠಿಯಲ್ಲಿ ಭಾಷಣ ಮಾಡಿದರು.
ಸತೀಶ್ ಜಾರಕಿಹೊಳಿ ಮಾತಿಗೆ ಅಡ್ಡಿ
ಈ ವೇಳೆ ಭಾಷಣ ಮಾಡಲು ಮುಂದಾಗಿದ್ದ, ಸತೀಶ ಜಾರಕಿಹೊಳಿ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಮರಾಠರು ಅಡ್ಡಿಪಡಿಸಿದರು. ಜೈ ಭವಾನಿ, ಜೈ ಶಿವಾಜಿ ಎಂದು ಘೋಷಣೆ ಕೂಗಿದರು. ಹಿಂದು ಪದ ಹಾಗೂ ಸಂಭಾಜಿ ಮಹಾರಾಜರ ಕುರಿತು ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆಂದು ಸತೀಶ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಧರ್ಮದ ವಿಚಾರ ಬೇಡ. ಮರಾಠರ ಮೀಸಲಾತಿಗೆ ನಮ್ಮ ಪಕ್ಷ ಬದ್ಧವಿದೆ ಎಂದಷ್ಟೇ ಹೇಳಿದ ಸತೀಶ ಜಾರಕಿಹೊಳಿ ಮಾತು ಮುಗಿಸಿದರು.
ʻʻನನ್ನ ಕ್ಷೇತ್ರದಲ್ಲಿನ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ. ನಾನು ಮಾತಾಡಿರುವುದು ಆನ್ ರೆಕಾರ್ಡ್ ಇದೆ, ರಾಜಕೀಯ ಅಂದ ಮೇಲೆ ಪರವಿರೋಧ ಎರಡೂ ಇರುತ್ತದೆʼʼ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಮರಾಠಾ ಸಮಾಜದ ಆಕ್ರೋಶದ ಕಾರಣ ಸತೀಶ ಜಾರಕಿಹೊಳಿಯವರು ಮುಜುಗರ ಎದುರಿಸಬೇಕಾಯಿತು. ಪೊಲೀಸರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿಯಲ್ಲಿ ಸತೀಶ್ ಜಾರಕಿಹೊಳಿಯವರನ್ನು ಕರೆದೊಯ್ದರು. ಪ್ರತಿಭಟನಾ ಸ್ಥಳದಿಂದ ಬಿಗಿ ಭದ್ರತೆಯಲ್ಲಿ ಕಳಿಸಿದರು.
ಇದನ್ನೂ ಓದಿ | ಬೆಳಗಾವಿ ಅಧಿವೇಶನ: ವಿಧಾನಸಭೆಯಲ್ಲಿ 4 ವಿಧೇಯಕಗಳ ಮಂಡನೆ; ಆರಗ ಜ್ಞಾನೇಂದ್ರ ಮಂಡಿಸಿದ ವಿಧೇಯಕಕ್ಕೆ ತಡೆ