ಬೆಳಗಾವಿ: ಸುವರ್ಣ ವಿಧಾನ ಸೌಧದಲ್ಲಿ ಸೋಮವಾರ ವಿಧಾನ ಮಂಡಲ ಅಧಿವೇಶನ (Belagavi session) ಆರಂಭಗೊಂಡ ನಡುವೆಯೇ ಹೊರಗಡೆ ಹಲವು ಹೋರಾಟಗಳ ಸರಣಿಯೇ ಆರಂಭಗೊಂಡಿದೆ. ಈ ರೀತಿ ಪ್ರತಿಭಟನೆ ಮಾಡುವವರಿಗಾಗಿಯೇ ಒಂದು ಶಾಮಿಯಾನಾ ಹಾಕಲಾಗಿದ್ದು, ಗಾಳಿಯ ರಭಸಕ್ಕೆ ಅದು ಕುಸಿದು ಬಿದ್ದು ಭಾರಿ ಅವಾಂತರವೇ ಸಂಭವಿಸಿತು. ಆದರೆ, ಯಾವುದೇ ಅಪಾಯವಾಗಿಲ್ಲ.
ಕೊಂಡಸಕೊಪ್ಪ ಎಂಬಲ್ಲಿ ಪ್ರತಿಭಟನೆಗಾಗಿ ಶಾಮಿಯಾನ ಹಾಕಲಾಗಿದ್ದು, ಅಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮ ಪಂಚಾಯತ್ ನೌಕರರ ಸಂಘದಿಂದ ಪ್ರತಿಭಟನೆ ನಡೆಯುತ್ತಿತ್ತು.
ಸಿ ಮತ್ತು ಡಿ ದರ್ಜೆಗೆ ಮುಂಬಡ್ತಿ ನೀಡುವುದು, ಭವಿಷ್ಯ ನಿಧಿ ಹಾಗೂ ಆರೋಗ್ಯ ಭದ್ರತೆ ಒದಗಿಸುವುದು, ವೇತನ ಶ್ರೇಣಿ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ವಿವಿದೆಡೆಗಳಿಂದ ಆಗಮಿಸಿರುವ ಮೂರು ಸಾವಿರಕ್ಕೂ ಅಧಿಕ ಗ್ರಾಮ ಪಂಚಾಯತ್ ನೌಕರರು ಧರಣಿಯಲ್ಲಿ ಭಾಗಿಯಾಗಿದ್ದರು.
ಈ ವೇಳೆ ಗ್ರಾಮ ಪಂಚಾಯತ್ ನೌಕರರ ಧರಣಿ ವೇಳೆ ಅವಘಡ ಸಂಭವಿಸಿದ್ದು, ಗಾಳಿಯ ರಭಸಕ್ಕೆ ಟೆಂಟ್ ಕುಸಿದುಬಿದ್ದಿದೆ. ಕೂಡಲೆ ಎಚ್ಚೆತ್ತುಕೊಂಡ ಧರಣಿ ನಿರತರು ಹೊರಗೆ ಓಡಿ ಬಂದಿದ್ದರಿಂದ ಅನಾಹುತ ತಪ್ಪಿದೆ. ಸುವರ್ಣ ಸೌಧ ಎತ್ತರದ ಜಾಗದಲ್ಲಿರುವುದರಿಂದ ಗಾಳಿ ವಿಪರೀತವಾಗಿದ್ದು, ಪೆಂಡಾಲುಗಳನ್ನು ಎಷ್ಟು ಗಟ್ಟಿಯಾಗಿ ಹಾಕಿದರು ಸಾಕಾಗುತ್ತಿಲ್ಲ.
ಇದನ್ನೂ ಓದಿ| Belagavi session | ಸುವರ್ಣ ಸೌಧದಲ್ಲಿ ಸಾವರ್ಕರ್ ಫೋಟೊ: ಕಾಂಗ್ರೆಸ್ ಮೌನದ ಹಿಂದಿದ್ದಾರೆ ಸೋನಿಯಾ ಗಾಂಧಿ!