ಬೆಳಗಾವಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ವಿವಾಹ ಪ್ರೋತ್ಸಾಹ ಧನ ಯೋಜನೆಯಡಿ ವಿಕಲಚೇತನ ಯುವಕ ಅಥವಾ ಯುವತಿಯನ್ನು ವಿವಾಹವಾದ ವ್ಯಕ್ತಿಗೆ ನೀಡಲಾಗುವ ಪ್ರೋತ್ಸಾಹಧನವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬುಧವಾರ ಬೆಳಗಾವಿಯ (Belagavi News) ತಮ್ಮ ಗೃಹ ಕಚೇರಿಯಲ್ಲಿ ವಿತರಿಸಿದರು.
ವಿಕಲಚೇತನ ಯುವಕ ಅಥವಾ ಯುವತಿಯನ್ನು ವಿವಾಹವಾದ ಸಾಮಾನ್ಯ ವ್ಯಕ್ತಿಗೆ 50 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ಹಿನ್ನಲೆಯಲ್ಲಿ ಪ್ರಸಕ್ತ 2023-24 ನೇ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯ ಮೂರು ಜನ ಫಲಾನುಭವಿಗಳಿಗೆ ತಲಾ 50 ಸಾವಿರ ವಿವಾಹ ಪ್ರೋತ್ಸಾಹ ಧನದ ಆದೇಶ ಪತ್ರಗಳನ್ನು ವಿತರಿಸಲಾಯಿತು. ಪ್ರೋತ್ಸಾಹ ಧನವನ್ನು ಫಲಾನುಭವಿಗಳ ಜಂಟಿ ಬ್ಯಾಂಕ್ ಖಾತೆಯಲ್ಲಿ 5 ವರ್ಷಗಳ ಅವಧಿಯವರೆಗೆ ಭದ್ರತಾ ಠೇವಣಿ ಮಾಡಲಾಗುತ್ತದೆ.
ಇದನ್ನೂ ಓದಿ: James Anderson: 41ನೇ ವಯಸ್ಸಿನಲ್ಲೂ ವಿಶ್ವ ದಾಖಲೆ ಬರೆಯಲು ಸಜ್ಜಾದ ಜೇಮ್ಸ್ ಆಂಡರ್ಸನ್!
ಇದೇ ಸಮಯದಲ್ಲಿ, ಅಂಗವಿಕಲತೆ ನಿವಾರಣಾ ಶಸ್ತ್ರ ಚಿಕಿತ್ಸೆಗಾಗಿ ಪರಿಹಾರ ಧನ ಯೋಜನೆಯಡಿ ಕು.ಪ್ರೇಮಾ ಮಹಾಂತೇಶ ಗೌಳಿ ಇವರ ಶಸ್ತ್ರ ಚಿಕಿತ್ಸೆಗಾಗಿ 1 ಲಕ್ಷ ರೂ. ಗಳನ್ನು ಮಂಜೂರು ಮಾಡಿ ಕೆ.ಎಲ್.ಇ ಆಸ್ಪತ್ರೆಗೆ ಸಂದಾಯ ಮಾಡಿದ ಆದೇಶ ಪತ್ರವನ್ನು ನೀಡಲಾಯಿತು.
ಬಳಿಕ ಹೊಲಿಗೆ ಯಂತ್ರದ ಯೋಜನೆಯಡಿ ಆಯ್ಕೆಯಾದ ಮುತಗಾ ಗ್ರಾಮದ ಪ್ರಜ್ಞಾ ಎಸ್.ಕೆ ಅವರಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.
ಇದನ್ನೂ ಓದಿ: IND vs ENG: ರಾಜ್ಕೋಟ್ನ ಪಿಚ್ ರಿಪೋರ್ಟ್, ಹವಾಮಾನ ವರದಿ ಹೇಗಿದೆ?
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜ ಎ.ಎಂ, ಜಿಲ್ಲಾ ವಿಕಲ ಚೇತನರ ಕಲ್ಯಾಣಾಧಿಕಾರಿ ನಾಮದೇವ್ ಬಿಳಕಿ ಹಾಗೂ ಗ್ರಾಮೀಣ ಪುನರ್ವಸತಿಯ ಸದಸ್ಯರು, ಇತರರು ಉಪಸ್ಥಿತರಿದ್ದರು.