ಬೆಳಗಾವಿ: ಕೋವಿಡ್ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಗೆ ಹಂಚಿಕೆ ಆಗಿದ್ದ ಆಕ್ಸಿಜನ್ ಅನ್ನು ಹುಬ್ಬಳ್ಳಿ – ಧಾರವಾಡಕ್ಕೆ ತೆಗೆದುಕೊಂಡು ಹೋಗಿ ಇಲ್ಲಿಯ ಜನರಿಗೆ ಅನ್ಯಾಯ ಮಾಡಿರುವ ಜಗದೀಶ್ ಶೆಟ್ಟರ್ (Jagadish Shettar) ಕೊಡುಗೆ ಏನಿದೆ ಬೆಳಗಾವಿ ಜಿಲ್ಲೆಗೆ? ಈಗ ಇಲ್ಲಿಗೆ ಬಂದು ಕರ್ಮಭೂಮಿ ಕರ್ಮಭೂಮಿ ಎನ್ನುತ್ತಿದ್ದಾರೆ. ನಾವೇನು ಹುಚ್ಚರಾ? ಬೆಳಗಾವಿ (Belagavi News) ಜಿಲ್ಲೆಯ ಜನರನ್ನು ಬಕ್ರಾ ಮಾಡಲು ಬಂದಿದ್ದೀರಾ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಾರವಾಗಿ ಪ್ರಶ್ನಿಸಿದ್ದಾರೆ.
ಗೋಕಾಕದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಬೆಳಗಾವಿಗೆ ಏನು ಮಾಡಿದ್ದಾರೆ? ಬೆಳಗಾವಿ ದೊಡ್ಡ ಜಿಲ್ಲೆ, ಜನಸಂಖ್ಯೆ ಹೆಚ್ಚಿದೆ. ಕೊರೋನಾ ಸಂದರ್ಭದಲ್ಲಿ ಜಿಲ್ಲೆಗೆ ಆಕ್ಸಿಜನ್ ಅಲೋಟ್ ಮಾಡಿದ್ದನ್ನು ಹುಬ್ಬಳ್ಳಿ -ಧಾರವಾಡಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಕರ್ಮಭೂಮಿ ಎನ್ನಲು ಏನು ಮಾಡಿದ್ದಾರೆ ಬೆಳಗಾವಿಗೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Money Guide: ಗಮನಿಸಿ; ಏ. 1ರಿಂದ ಬದಲಾಗುತ್ತವೆ ಈ ಎಲ್ಲ ಹಣಕಾಸು ನಿಯಮಗಳು
6 ಬಾರಿ ಹುಬ್ಬಳ್ಳಿ ಜನರು ಶೆಟ್ಟರ್ ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದರು. ಅವರು ವಿರೋಧ ಪಕ್ಷದ ನಾಯಕರಾದರು, ಮಂತ್ರಿಯಾದರು, ಮುಖ್ಯಮಂತ್ರಿಯಾದರು, ಬಿಜೆಪಿ ಅಧ್ಯಕ್ಷರಾದರು. ಎಲ್ಲವನ್ನೂ ಅನುಭವಿಸಿದ್ದಂಥವರನ್ನು ಹುಬ್ಬಳ್ಳಿ- ಧಾರವಾಡ ಜನರು ಹೊರಗೆ ಹಾಕಿದ್ದಾರೆ. ಈಗ ಇಲ್ಲಿಗೆ ಬಂದು ಕರ್ಮಭೂಮಿ ಕರ್ಮಭೂಮಿ ಎನ್ನಲು ಏನಿದೆ ಬೆಳಗಾವಿಗೆ ನಿಮ್ಮ ಕೊಡುಗೆ? ಏನಾದರೂ ಕೊಡುಗೆ ಇದೆಯಾ ನಾಚಿಕೆಯಾಗಬೇಕು ನಿಮಗೆ ಎಂದು ಹೆಬ್ಬಾಳ್ಕರ್ ಕಿಡಿಕಾರಿದರು.
ಇದನ್ನೂ ಓದಿ: IPL 2024 : ವೀಕ್ಷಣೆಯಲ್ಲಿ ದಾಖಲೆ ಬರೆದ ಚೆನ್ನೈ- ಆರ್ಸಿಬಿ ಮ್ಯಾಚ್!
ಗೋ ಬ್ಯಾಕ್ ಶೆಟ್ಟರ್ ಎನ್ನುವುದು ಅವರ ಪಕ್ಷದ ಕಾರ್ಯಕರ್ತರೇ ಮಾಡುತ್ತಿರುವ ಅಭಿಯಾನ, ಅವರ ಪಕ್ಷದ ಕಾರ್ಯಕರ್ತರ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ. ಮೋದಿಯವರು ಎಲ್ಲೋ ಹೋಗಿ ಚುನಾವಣೆಗೆ ನಿಂತಿದ್ದಾರೆ ಎಂದು ತಮ್ಮ ಬೆಳಗಾವಿ ಸ್ಪರ್ಧೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರೇನು ಮೋದಿಯಷ್ಟು ದೊಡ್ಡವರಾ? ನಾಚಿಕೆಯಾಗಬೇಕು ಇವರಿಗೆ ಎಂದು ಹೆಬ್ಬಾಳ್ಕರ್ ಟೀಕಿಸಿದ್ದಾರೆ.