ಬೆಳಗಾವಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಾಡದ್ರೋಹಿ ಎಂಇಎಸ್ ಮತ್ತೆ ಕ್ಯಾತೆ ಆರಂಭಿಸಿದೆ. ಮಂಗಳವಾರ (ಜ.೧೭) ನಗರದಲ್ಲಿ ಗಡಿ ವಿವಾದ ಹೋರಾಟದಲ್ಲಿ ಗಲಭೆ ಸೃಷ್ಟಿಸಿ ಗೋಲಿಬಾರ್‌ಗೆ ತುತ್ತಾಗಿ ಮೃತಪಟ್ಟಿದ್ದವರ ಸ್ಮರಣಾರ್ಥ ಹುತಾತ್ಮ ದಿನಕ್ಕೆ ಚಾಲನೆ ನೀಡಿದ್ದು, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದೆ. ಇದಕ್ಕೆ ಶಿವಸೇನೆಯ ಠಾಕ್ರೆ ಬಣ ಸಾಥ್ ನೀಡಿದೆ.
ಬೆಳಗಾವಿಯ ಹುತಾತ್ಮ ಚೌಕ್‌ನಲ್ಲಿ ಎಂಇಎಸ್ ವತಿಯಿಂದ ಹುತಾತ್ಮ ದಿನಾಚರಣೆ ಆಚರಿಸಿದ್ದು, ಕೈಯಲ್ಲಿ ಭಗವಾ ಧ್ವಜ ಹಿಡಿದು ಮೆರವಣಿಗೆ ನಡೆಸಿದರು. ಅಲ್ಲದೆ, ಬೆಳಗಾವಿ, ಖಾನಾಪುರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರ್ಪಡೆ ಆಗಬೇಕೆಂದು ಘೋಷಣೆ ಕೂಗಿದರು. ರಹೆಂಗೇ ತೋ ಮಹಾರಾಷ್ಟ್ರ ಮೇ ನಹೀ ತೋ ಜೈಲ್ ಮೇ ಎಂದೂ ಘೋಷಣೆಯನ್ನು ಕೂಗಿದ್ದಾರೆ.
ಎಂಇಎಸ್ ಅಧ್ಯಕ್ಷ ದೀಪಕ್ ದಳವಿ, ಎಂಇಎಸ್ ಮಹಿಳಾ ಘಟಕ ಅಧ್ಯಕ್ಷೆ ರೇಣು ಕಿಲ್ಲೇಕರ್, ಮಾಜಿ ಮೇಯರ್ ಸರಿತಾ ಪಾಟೀಲ್, ಎಂಇಎಸ್ ಬೆಂಬಲಿತ ಕಾರ್ಪೊರೇಟರ್‌ಗಳಾದ ರವಿ ಸಾಳುಂಕೆ, ಶಿವಾಜಿ ಮಂಡೋಳಕರ್, ವೈಶಾಲಿ ಭಾತ್ಕಾಂಡೆ, ಎಂಇಎಸ್ ಯುವ ಸಮಿತಿ ಅಧ್ಯಕ್ಷ ಶುಭಂ ಶೆಳಕೆ, ಶಿವಾನಿ ಪಾಟೀಲ್, ಎನ್‌ಸಿಪಿ ಮುಖಂಡರಾದ ಅಮೋಲ್ ದೇಸಾಯಿ, ಶಿವಸೇನೆ ಮುಖಂಡ ಪ್ರಕಾಶ್ ಶಿರೋಳಕರ್ ಸೇರಿ ಹಲವರು ಭಾಗಿಯಾಗಿದ್ದರು.
ಸಾಮರಸ್ಯಕ್ಕೆ ಧಕ್ಕೆ ತರಲು ಯತ್ನ
ಎಂಇಎಸ್ ವತಿಯಿಂದ ಹುತಾತ್ಮ ದಿನ ಆಚರಣೆ ಮಾಡುವ ಮೂಲಕ ಭಾಷಾ ಸಾಮರಸ್ಯಕ್ಕೆ ಧಕ್ಕೆ ತರಲು ಯತ್ನವಾಗಿದ್ದಲ್ಲದೆ, ಮರಾಠಿಗರನ್ನು ಪ್ರಚೋದಿಸಲು ಮುಂದಾಗಿದೆ ಎನ್ನಲಾಗಿದೆ. ಕಳೆದ ವಿಧಾನಸಭೆ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಂಇಎಸ್ ನೆಲಕಚ್ಚಿತ್ತು. ಬರುವ ವಿಧಾನಸಭೆ ಚುನಾವಣೆಯಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಎಂಇಎಸ್ ಹೆಣಗಾಟ ನಡೆಸುತ್ತಿದೆ. ಈಗ ರಾಜಕೀಯ ಲಾಭಕ್ಕಾಗಿ ಚುನಾವಣೆ ಹೊಸ್ತಿಲಲ್ಲಿ ಹುತಾತ್ಮ ದಿನ ಆಚರಣೆಗೆ ಮುಂದಾಗಿದೆ ಎಂದೇ ಹೇಳಲಾಗುತ್ತಿದೆ.
ಧೈರ್ಯಶೀಲ್ ಮಾನೆ ಪ್ರವೇಶ ನಿರ್ಬಂಧ
ಎಂಇಎಸ್‌ನ ಹುತಾತ್ಮ ದಿನ ಆಚರಣೆಗೆ ಶಿವಸೇನೆ ಸಂಸದ, ಮಹಾರಾಷ್ಟ್ರದ ಗಡಿ ಸಮನ್ವಯ ಸಮಿತಿ ಅಧ್ಯಕ್ಷ ಧೈರ್ಯಶೀಲ್ ಮಾನೆ ಬೆಳಗಾವಿಗೆ ಆಗಮಿಸುವವರಿದ್ದರು. ಹೀಗಾಗಿ ಅವರ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಸೋಮವಾರ (ಜ.೧೬) ರಾತ್ರಿಯೇ ಆದೇಶಿಸಿದ್ದರು. ಇದು ಸಾರ್ವಜನಿಕವಾಗಿ ವ್ಯಾಪಕ ಪ್ರಶಂಸೆಗೂ ಪಾತ್ರವಾಗಿತ್ತು. ಸಿಆರ್‌ಪಿಸಿ 1997, ಕಲಂ 144 (3) ಅನ್ವಯ ವಿಶೇಷ ಅಧಿಕಾರ ಬಳಸಿ ಧೈರ್ಯಶೀಲ್ ಮಾನೆಗೆ ನಿರ್ಬಂಧ ವಿಧಿಸಿ ಡಿಸಿ ಆದೇಶಿಸಿದ್ದರು. ಪ್ರಚೋದನಾತ್ಮಕ ಭಾಷಣ ಮಾಡಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮವನ್ನು ಜಿಲ್ಲಾಧಿಕಾರಿಗಳು ಕೈಗೊಂಡಿದ್ದರು.
ಇದನ್ನೂ ಓದಿ | Karnataka Election : ರೆಡ್ಡಿ ಹೊಸ ಪಕ್ಷದ ಪ್ರಥಮ ಜಿಲ್ಲಾಧ್ಯಕ್ಷರ ಘೋಷಣೆ; ಆಪ್ತ ರಾಜಶೇಖರ ಗೌಡಗೆ ಪಟ್ಟ