ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಉದ್ಧವ್ ಠಾಕ್ರೆ ಬಣದಿಂದ ಜಿಲ್ಲೆಯ ಗಡಿಯಲ್ಲಿ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸಂಘಟನೆಯ ಸಾಂಗ್ಲಿ ಜಿಲ್ಲಾ ಘಟಕದ ಅಧ್ಯಕ್ಷ ತಾನಾಜಿ ಸಾವಂತ್ ಉದ್ಧಟತನದ ಹೇಳಿಕೆ ನೀಡಿದ್ದು, ಕನ್ನಡಿಗರನ್ನು ಮಹಾರಾಷ್ಟ್ರದಿಂದ ಓಡಿಸಬೇಕಾಗುತ್ತದೆ. ಮಹಾರಾಷ್ಟ್ರಕ್ಕೆ ಬರುವ ಕರ್ನಾಟಕದ ಬಸ್‌ಗಳನ್ನು ಬ್ಯಾನ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಉದ್ಧವ್ ಠಾಕ್ರೆ ಬಣದಿಂದ ಗಡಿಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಮರುದಿನವೇ ರಾಜ್ ಠಾಕ್ರೆ ಬಣದಿಂದ(ಎಂಎನ್‌ಎಸ್) ಪ್ರತಿಭಟನೆ ನಡೆಸಲಾಗಿದೆ. ಎಂಎನ್‌ಎಸ್ ಪುಂಡರು ಬೆಳಗಾವಿಯ ಕಾಗವಾಡ ಚೆಕ್‌ಪೋಸ್ಟ್‌ವರೆಗೂ ಬಂದು ಪ್ರತಿಭಟನೆ ನಡೆಸಿದ್ದಾರೆ.
ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಸಾಂಗ್ಲಿ ಜಿಲ್ಲೆಯ ಅಧ್ಯಕ್ಷ ತಾನಾಜಿ ಸಾವಂತ್ ಮಾತನಾಡಿ, ಕರ್ನಾಟಕದವರು ನಮ್ಮ ಮೇಲೆಯೇ ಅವಲಂಬಿತರಾಗಿದ್ದಾರೆ. ಇವರ ಆರೋಗ್ಯ ಸೇವೆಗೆ ಮಹಾರಾಷ್ಟ್ರ ಬೇಕು, ಉದ್ಯೋಗಕ್ಕೆ ಹಲವು ಜನರು ನಮ್ಮ ರಾಜ್ಯಕ್ಕೆ ಬರುತ್ತಾರೆ. ಇವರಿಗೆ ಕುಡಿಯುವ ನೀರು ಸಹ ಮಹಾರಾಷ್ಟ್ರದಿಂದಲೇ ಬೇಕು. ಆದರೆ ಗಡಿ ವಿಚಾರ ಬಂದಾಗ ಮಾತ್ರ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Border Dispute | ಸಂಸತ್ತಿನಲ್ಲಿ ಕರ್ನಾಟಕದ ವಿರುದ್ಧ ಹರಿಹಾಯ್ದ ಸುಳೆ! ಶಾ ಮಧ್ಯಪ್ರವೇಶಕ್ಕೆ ಆಗ್ರಹ
ಕನ್ನಡ ಪರ ಸಂಘಟನೆಗಳಿಂದ ಮಹಾರಾಷ್ಟ್ರ ವಾಹನಗಳ ಮೇಲೆ ದಾಳಿ ಆಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮಹಾರಾಷ್ಟ್ರದಲ್ಲಿ ಇರುವಂತಹ ಕನ್ನಡಿಗರನ್ನು ಓಡಿಸಬೇಕಾಗುತ್ತದೆ. ಮಹಾರಾಷ್ಟ್ರಕ್ಕೆ ಬರುವ ಬಸ್‌ಗಳನ್ನೂ ಬ್ಯಾನ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಬಸ್ ಸಂಚಾರ ಬಂದ್ ಮಾಡಿರುವುದರಿಂದ ನೆರೆರಾಜ್ಯದಿಂದ ಬರುವ ಪ್ರಯಾಣಿಕರು ಕಾಲ್ನಡಿಗೆಯಲ್ಲಿ ರಾಜ್ಯ ಪ್ರವೇಶ ಮಾಡುತ್ತಿದ್ದಾರೆ. ಮಹಾ ಗಡಿಯವರೆಗೆ ಮಾತ್ರ ಅಲ್ಲಿನ ಬಸ್‌ಗಳು ಜನರನ್ನು ತಂದು ಬಿಡುತ್ತಿರುವ ಹಿನ್ನೆಲೆಯಲ್ಲಿ ಕಾಗವಾಡ ಚೆಕ್ ಪೋಸ್ಟ್ ಮೂಲಕ ಜನರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಬಸ್ ಸಂಚಾರ ಬಂದ್; ಬೆಳಗಾವಿ ವಿಭಾಗಾಧಿಕಾರಿಗೆ ತರಾಟೆ
ಬಸ್ ಸಂಚಾರ ಬಂದ್ ಮಾಡಿರುವುದಕ್ಕೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ ಬೆಳಗಾವಿ ವಿಭಾಗಾಧಿಕಾರಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿದ ಕರವೇ ಕಾರ್ಯಕರ್ತರು, 24 ಗಂಟೆಯೊಳಗೆ ಬಸ್‌ಗಳ ಸಂಚಾರ ಆರಂಭವಾಗಬೇಕು. ನಾವು ಮಹಾರಾಷ್ಟ್ರದ ಬಸ್‌ಗಳಿಗೆ ಏನೂ ಮಾಡಲ್ಲ, ಅವರೇನಾದರೂ ನಮ್ಮ ಬಸ್‌ಗಳಿಗೆ ತೊಂದರೆ ನೀಡಿದರೆ ಮಹಾರಾಷ್ಟ್ರದ ಒಂದೂ ಬಸ್ ಉಳಿಯಲ್ಲ. ರಾಜ್ಯದ ಒಳಗೆ ಇರುವ ಮಹಾರಾಷ್ಟ್ರ ಬಸ್‌ಗಳಿಗೆ ಬೆಂಕಿ ಹಚ್ಚಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Border Dispute | ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲು ಶಿವಸೇನೆ ಒತ್ತಾಯ