ಬೆಳಗಾವಿ: ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ 8ರಿಂದ 12 ಕಾರ್ಯಕರ್ತರ ವಿರುದ್ಧ ತಾಲೂಕಿನ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕರವೇ ಅಧ್ಯಕ್ಷ ನಾರಾಯಣಗೌಡಗೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಹಿರೇಬಾಗೇವಾಡಿ ಟೋಲ್‌ಗೇಟ್ ಬಳಿ ಕರವೇ ಕಾರ್ಯಕರ್ತರು, ಮಹಾರಾಷ್ಟ್ರ ನೋಂದಣಿ ಲಾರಿಗಳಿಗೆ ಕಲ್ಲು ತೂರಾಟ ನಡೆಸಿದ್ದರು. ಗುಂಪು ಕಟ್ಟಿಕೊಂಡು ಕೆಲ ಲಾರಿಗಳ ಗಾಜು ಪುಡಿ ಮಾಡಿ, ನಂಬರ್ ಪ್ಲೇಟ್ ಕಿತ್ತು, ಮಸಿ ಬಳಿದು ಗಲಾಟೆ ಮಾಡಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 143, 147, 341, 427, 149 ಅಡಿ 8 ರಿಂದ 12 ಜನರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಹಿರಂಗ ಸಭೆ ನಡೆಸಲು ಕರವೇ ಅಧ್ಯಕ್ಷ ನಾರಾಯಣ ಗೌಡ ಮುಂದಾಗಿದ್ದರು. ಆದರೆ ಅವರನ್ನು ದಾರಿ ಮಧ್ಯೆಯೇ ಪೊಲೀಸರು ತಡೆದು ವಶಕ್ಕೆ ಪಡೆದಿದ್ದರು. ಇದರಿಂದ ಕೆರಳಿದ ಕರವೇ ಕಾರ್ಯಕರ್ತರು, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ ಮಹಾರಾಷ್ಟ್ರ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.
ಇದನ್ನೂ ಓದಿ | Border dispute | ಕರವೇ ನಾರಾಯಣ ಗೌಡ ಬಂಧನ: ಬೆಳಗಾವಿ ಪ್ರವೇಶ ತಡೆಗೆ ರೊಚ್ಚಿಗೆದ್ದ ಕಾರ್ಯಕರ್ತರು, ಮಹಾರಾಷ್ಟ್ರದ ಲಾರಿಗಳ ಮೇಲೆ ದಾಳಿ