Site icon Vistara News

Convocation | ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ರಾಣಿ ಚೆನ್ನಮ್ಮ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರ ಕರೆ

Convocation

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ‌ಸುವರ್ಣಸೌಧದಲ್ಲಿ ರಾಣಿ ಚೆನ್ನಮ್ಮ ವಿವಿಯ 10ನೇ‌ ಘಟಿಕೋತ್ಸವ(Convocation) ಬುಧವಾರ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ವಹಿಸಿದ್ದರು. ಹೆಸರಾಂತ ಚಿತ್ರನಟ ರಮೇಶ್ ಅರವಿಂದ್ ಸೇರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಚಿತ್ರರಂಗದಲ್ಲಿ ರಮೇಶ್‌ ಅರವಿಂದ್‌, ಸಮಾಜ ಸೇವೆ ಕ್ಷೇತ್ರದಲ್ಲಿ ವಿ.ರವಿಚಂದರ್, ಧಾರ್ಮಿಕ ಕ್ಷೇತ್ರದಲ್ಲಿ ಸೇವೆಗೈದ ಮಾತೆ ಅಕ್ಕ ಅನ್ನಪೂರ್ಣ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ವಿವಿಧ ವಿಭಾಗಗಳ 48 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಪ್ರಧಾ‌ನ ಮಾಡಲಾಯಿತು. ಸ್ನಾತಕೋತ್ತರ ಪದವಿಯ 163 ವಿದ್ಯಾರ್ಥಿಗಳಿಗೆ ಪದಕ ವಿತರಣೆ ಮಾಡಲಾಯಿತು. ಆಂಧ್ರದ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಪ್ರೊ. ಟಿ.ವಿ ಕಟ್ಟಿಮನಿ ಅವರಿಂದ ಘಟಿಕೋತ್ಸವ ಭಾಷಣ ಮಾಡಿದರು..

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ನವ ಪದವೀಧರ ಯುವಕ-ಯುವತಿಯರು ನವಭಾರತ, ಶ್ರೇಷ್ಠ ಹಾಗೂ ಆತ್ಮನಿರ್ಭಯ ಭಾರತ ನಿರ್ಮಾಣದಲ್ಲಿ ಕೈಜೋಡಿಸಬೇಕು. ಭಾರತವನ್ನು ಸಾಧನೆ, ಸಮೃದ್ಧಿಯ ಉನ್ನತ ಶಿಖರದತ್ತ ಕೊಂಡೊಯ್ಯುವ ದಿಸೆಯಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು.

ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ʻʻಭಾರತದ ನವೋದ್ಯಮವು ಜಗತ್ತಿನ ಆಕರ್ಷಣೆಯ ಕೇಂದ್ರವಾಗಿದೆ. ಹೊಸ ಶಿಕ್ಷಣ ನೀತಿಯು‌ ನವಭಾರತ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು, ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ನಮ್ಮ ಕ್ರಿಯಾಶೀಲತೆಯ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯೋಣ. ರಾಷ್ಟ್ರೀಯ ಶಿಕ್ಷಣ ನೀತಿ-2022 ರ ಅನುಷ್ಠಾನದ ಜತೆಗೆ ಸಮಗ್ರ ಶಿಕ್ಷಣವನ್ನು ರಾಣಿ ಚೆನ್ನಮ್ಮ ವಿವಿ ನೀಡುತ್ತಿದೆ. ರಾಜ್ಯದ ಅತೀ ದೊಡ್ಡ ವಿವಿಗಳಲ್ಲಿ ರಾಣಿಚೆನ್ನಮ್ಮ ವಿವಿ ಕೂಡ ಒಂದುʼʼ ಎಂದು ರಾಜ್ಯಪಾಲರು ಹೇಳಿದರು.

ವಿಶ್ವವಿದ್ಯಾಲಯದಿಂದ ಪ್ರಥಮ ರ‍್ಯಾಂಕ್ ಪಡೆದುಕೊಂಡ 6 ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ವಿಷಯವಾರು ಅತೀ ಹೆಚ್ಚು ಅಂಕ ಗಳಿಸಿದ 4 ವಿದ್ಯಾರ್ಥಿನಿಯರಿಗೆ ಸೇರಿ 11 ಬಂಗಾರದ ಪದಕಗಳನ್ನು ಪ್ರದಾನ ಮಾಡಲಾಯಿತು. ಬಿಕಾಂನಲ್ಲಿ ವಿದ್ಯಾವತಿ ಗುಡೋದಗಿ, ಬಿಎಸ್ಸಿಯಲ್ಲಿ ದೀಪಿಕಾ ಚೌವ್ಹಾಣ, ಕ‌ನ್ನಡ ಎಂಎನಲ್ಲಿ ದ್ರಾಕ್ಷಾಯಿಣಿ ವಾಲ್ಮೀಕಿ, ಸಮಾಜಶಾಸ್ತ್ರ ಎಂಎನಲ್ಲಿ ತಾತ್ಯಾಸಾಬ್ ಧಾಬಡೆ, ಎಂಬಿಎನಲ್ಲಿ ಗೌರಾ ಅಣೆಪ್ಪನವರ, ಎಂಎಸ್ಸಿ ಗಣಿತದಲ್ಲಿ ಅನುಜಾ ಪಾಟೀಲ ಸುವರ್ಣ ಪದಕ ಪಡೆದುಕೊಂಡರು.

ಇದನ್ನೂ ಓದಿ | ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಕೆಳದಿ ಚೆನ್ನಮ್ಮನ ಹೆಸರು: ವಚನಾನಂದ ಸ್ವಾಮೀಜಿ ಒತ್ತಾಯ

Exit mobile version