ಚಿಕ್ಕೋಡಿ: ತಾಲೂಕಿನ ಕೇರೂರ ಪಪೂ ಕಾಲೇಜಿನಲ್ಲಿ ಇತ್ತೀಚೆಗೆ ನೇತ್ರದಾನ (eye donation) ಕಾರ್ಯಕ್ರಮ ಆಯೋಜಿಸಲಾಗಿತ್ತು.ಎನ್‌ಎಸ್‌ಎಸ್ ಸ್ವಯಂ ಸೇವಕರು ಸೇರಿದಂತೆ ಒಟ್ಟು 105 ಜನರು ನೇತ್ರದಾನ ವಾಗ್ದಾನ ಮಾಡಿರುವ ಪ್ರಮಾಣ ಪತ್ರಗಳನ್ನು ಬೆಳಗಾವಿ ವಿಭಾಗದ ಎನ್‌ಎಸ್‌ಎಸ್ ವಿಭಾಗೀಯ ಅಧಿಕಾರಿ ಪ್ರೊ.ರವಿಕುಮಾರ್ ಅಂಬೋರೆ, ಪತ್ರಕರ್ತ ಬ್ರಹ್ಮಾನಂದ ಎನ್. ಹಡಗಲಿ, ಪ್ರಾಚಾರ್ಯ ಎಂ.ಆರ್.ಬಾಗಾಯಿ ವಿತರಿಸಿದರು.
ಈ ವೇಳೆ ಮಾತನಾಡಿದ ಬೆಳಗಾವಿ ವಿಭಾಗದ ಎನ್‌ಎಸ್‌ಎಸ್ ವಿಭಾಗೀಯ ಅಧಿಕಾರಿ ಪ್ರೊ.ರವಿಕುಮಾರ್ ಅಂಬೋರೆ ಅವರು, ಎನ್‌ಎಸ್‌ಎಸ್ ಸ್ವಯಂ ಸೇವಕರು ನೇತ್ರದಾನ ಮಾಡುವ ವಾಗ್ದಾನ ಮಾಡಿರುವುದು ಬಹಳ ಹೆಮ್ಮೆಯ ಸಂಗತಿಯಾಗಿದ್ದು, ನಿಮ್ಮ ಈ ನಡೆಯು ಆದರ್ಶನೀಯವಾಗಿದೆ ಎಂದು ತಿಳಿಸಿದರು.
ಮತ್ತೊಬ್ಬರ ಬಾಳಿಗೆ ಬೆಳಕಾಗುವುದು ಉತ್ತಮ ಸಾಮಾಜಿಕ ನಡೆಯಾಗಿದೆ. ಈ ನಿಟ್ಟಿನಲ್ಲಿ ನೀವೆಲ್ಲರೂ ಬಹಳ ಪುಣ್ಯ ಮಾಡಿದ್ದೀರಿ. ನೇತ್ರದಾನ ವಾಗ್ದಾನ ಮಾಡುವ ಮೂಲಕ ತಾವು ನಿಜವಾದ ಸೇವೆಗೆ ಅಣಿಯಾಗಿದ್ದೀರಿ ಎಂಬುವುದನ್ನು ಸಾಬೀತುಪಡಿಸಿದಂತಾಗಿದೆ. ನಿಮ್ಮ ನಡೆ ಶ್ಲಾಘನೀಯವಾಗಿದ್ದು, ಇತರರಿಗೂ ಮಾದರಿಯಾಗಿದೆ. ಮಾತ್ರವಲ್ಲ, ನಿಮ್ಮ ಈ ಕಾರ್ಯವು ಇತರೆ ಸ್ವಯಂ ಸೇವಕರಿಗೂ ಮುನ್ನುಡಿಯಾಗಿದೆ ಎಂದು ಹೇಳಿದರು.
ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿ ಅರಿತಾಗ ಸೇವೆಯ ನೈಜ ಅರ್ಥವಾಗುತ್ತದೆ ಎಂದರು. ಪಠ್ಯೇತರ ಚಟುವಟಿಕೆಯಿಂದಾಚೆಗೆ ವಿದ್ಯಾರ್ಥಿಗಳು ಹೊಸ ನೋಟ ಬೀರಬೇಕು ಎಂಬ ಕಾರಣಕ್ಕೆ ಎನ್‌ಎಸ್‌ಎಸ್ ಸೇವೆಯತ್ತ ವಿದ್ಯಾರ್ಥಿಗಳು ಧಾವಿಸಬೇಕು. ಎನ್‌ಎಸ್‌ಎಸ್ ಸೇವೆಯ ಮೂಲಕ ನಿಮ್ಮಲ್ಲಿರುವ ವ್ಯಕ್ತಿತ್ವವನ್ನು ಕೂಡ ವಿಕಸನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪತ್ರಕರ್ತ ಬ್ರಹ್ಮಾನಂದ ಎನ್. ಹಡಗಲಿ ಮಾತನಾಡಿ, ನೇತ್ರದಾನ ಮಾಡುವ ವಾಗ್ದಾನ ಮಾಡಿದ ತಾವು ಒಂದು ರೀತಿಯ ರಾಷ್ಟ್ರಕ್ಕೆ ಸೇವೆಯನ್ನೇ ಮಾಡಿದ್ದೀರಿ. ಮತ್ತೊಬ್ಬರಿಗೆ ಸ್ಫೂರ್ತಿದಾಯಕ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದರು.
ಇದನ್ನೂ ಓದಿ ವಿದ್ಯುತ್ ಶಾಕ್‌ನಿಂದ ಯುವಕ ಸಾವು, ನೇತ್ರದಾನ ಮಾಡಿ ಸಾರ್ಥಕತೆ
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಆರ್.ಬಾಗಾಯಿ ಮಾತನಾಡಿದರು. ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಶ್ರೀಶೈಲ ಕೋಲಾರ ಅವರು ಎನ್‌ಎಸ್‌ಎಸ್ ಸ್ವಯಂ ಸೇವಕರು ಕೈಗೊಂಡ ಕಾರ್ಯಕ್ರಮಗಳ ವಿವರಗಳನ್ನು ತೆರೆದಿಟ್ಟರು. ನಂತರ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಅನಿಲ ದಲಾಲ, ವಿರುಪಾಕ್ಷ ಕವಟಗಿ, ಉಪನ್ಯಾಸಕರಾದ ಎಸ್.ಎಂ.ಕುಲಕರ್ಣಿ, ಅಮೂಲ್ ದಾನೋಳೆ, ಎ.ಟಿ.ಬಾನೆ, ಸಂಜೀವ ಬಾನೆ, ಗಣಪತಿ ಪಾಟೀಲ್, ಕವಿತಾ ಮಲಬನ್ನವರ್, ಪ್ರತಿಭಾ ಒಟ್ನಾಳ, ಸ್ವಾತಿ ಮಾಳಿ ಸೇರಿದಂತೆ ಇತರರು ಇದ್ದರು. ರಮೇಶ ಬಿ.ಎನ್. ನಿರೂಪಿಸಿದರು. ಎಸ್.ಎಂ.ತೇಲಿ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಲಕ್ಷ್ಮಿ ಬಾಡಕರ್ ಪ್ರಾರ್ಥಿಸಿದರೆ, ಅಂಕಿತಾ ಮತ್ತು ಸಾವಿತ್ರಿ ಎನ್‌ಎಸ್‌ಎಸ್ ಗೀತೆ ಹಾಡಿದರು.