Site icon Vistara News

ಕೆಎಲ್‌ಇ ತಾಂತ್ರಿಕ ವಿವಿ ಲೈಬ್ರರಿ ಆ್ಯಪ್‌ನಿಂದ ವಿದ್ಯಾರ್ಥಿಗಳಿಗೆ ಅನುಕೂಲ: ಡಾ.ಅಶೋಕ್‌ ಶೆಟ್ಟರ್

Heads of various departments of KLE Technological University

ಬೆಳಗಾವಿ: ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯವು ಗ್ರಂಥಾಲಯ ವಿಭಾಗದ ಹೊಸ ಮೊಬೈಲ್ ಆ್ಯಪ್ ಆರಂಭಿಸಿದ್ದು, ಇದರಿಂದ ವಿದ್ಯಾರ್ಥಿಗಳು ಮತ್ತು ವಿವಿ ಬಳಕೆದಾರರಿಗೆ ಮಾಹಿತಿ ಪಡೆಯಲು ಬಹಳ ಅನುಕೂಲವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಅಶೋಕ್‌ ಶೆಟ್ಟರ್ ಹೇಳಿದರು.

ನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎಂ.ಎಸ್.ಶೇಷಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜಿನ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಕಾಲೇಜಿನ ಗ್ರಂಥಾಲಯ ಬಳಕೆದಾರರಿಗಾಗಿ ಗ್ರಂಥಾಲಯದ ಆ್ಯಪ್ ಬಿಡುಗಡೆ‌ ಮಾಡಿ ಮಾತನಾಡಿದ ಅವರು, ಬಳಕೆದಾರರಿಗೆ ಯಾವುದೇ ಸಮಯದಲ್ಲಿ, ಎಂತಹ ವಿಷಯಗಳ ಕುರಿತಾದರೂ ಈ ಆ್ಯಪ್‌ನಲ್ಲಿ ಕೂಡಲೇ ಮಾಹಿತಿ ಲಭ್ಯವಾಗಲಿದೆ. ಇದನ್ನು ಎಲ್ಲರೂ ತಮಗೆ ಅಗತ್ಯವಾದ ಮಾಹಿತಿ ಸಂಗ್ರಹಿಸಲು ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಇದನ್ನೂ ಓದಿ | ವಿಸ್ತಾರ ಅಂಕಣ: ಮುಸ್ಲಿಂ ಮಹಿಳೆಯರನ್ನು ಒಳಗೊಳ್ಳದೆ ಸಮಾನ ನಾಗರಿಕ ಸಂಹಿತೆಯ ಚರ್ಚೆ ಅಪೂರ್ಣ

ಡಾ.ಎಂ.ಎಸ್.ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಎಫ್.ಪಾಟೀಲ ಮಾತನಾಡಿ, ತಂತ್ರಜ್ಞಾನ ಬಳಕೆಯಿಂದ ಗ್ರಂಥಾಲಯಗಳು ಡಿಜಿಟಲೀಕರಣವಾಗುತ್ತಿದ್ದು, ಸಮಯ ಹಾಗೂ ಸರಳ ಬಳಕೆಗೆ ಪೂರಕವಾಗಿದೆ. ಆ್ಯಪ್ ಪೋಷಕರಿಗೆ ಗ್ರಂಥಾಲಯ ಮತ್ತು ಅದರ ಸಂಪನ್ಮೂಲಗಳೊಂದಿಗೆ ಸಂಪರ್ಕ ಸಾಧಿಸಲು ನವೀನ ಮತ್ತು ಅನುಕೂಲಕರ ಮಾರ್ಗವನ್ನು ನೀಡುತ್ತದೆ. ಬಳಕೆದಾರರು ಯಾವುದೇ ಸಮಯದಲ್ಲಿ ಲೈಬ್ರರಿ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಆ್ಯಪ್‌ನಿಂದ ನೆರವಾಗಲಿದೆ ಎಂದು ಹೇಳಿದರು.

ಮುಖ್ಯ ಗ್ರಂಥಪಾಲಕ ಡಾ. ಸತೀಶ ತೋಟಾರ ಮಾತನಾಡಿ, ವಿದ್ಯಾರ್ಥಿಗಳಿಗೆ ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆಯುವ ಹಾಗೂ ವಾಪಸಾತಿ ಮಾಡುವ ಪ್ರಕ್ರಿಯೆಯನ್ನು ಈ ಆ್ಯಪ್ ಸುಲಭಗೊಳಿಸಿದೆ. ಗ್ರಂಥಾಲಯದಿಂದ ತೆಗೆದುಕೊಂಡ ಪುಸ್ತಕಗಳ ಮಾಹಿತಿ, ವಾಪಸ್‌ ಕೊಡುವ ದಿನಾಂಕ, ಶುಲ್ಕವಿದ್ದರೇ ಗ್ರಂಥಾಲಯಕ್ಕೆ ಹೊಸದಾಗಿ ಬಂದ ಹೊಸ ಪುಸ್ತಕಗಳು, ಗ್ರಂಥಾಲಯದ ವೇಳೆ, ರಜೆ ದಿನಗಳ ಹೀಗೆ ಹಲವಾರು ಮಾಹಿತಿಯನ್ನು ನೇರವಾಗಿ ಅವರ ಮೊಬೈಲ್‌ಗೆ ಮೆಸೇಜ್ ಮೂಲಕ ಅವರಿಗೆ ಸೂಚಿಸುವ ವ್ಯವಸ್ಥೆ ಇದರಲ್ಲಿ ಇದೆ. ಪುಸ್ತಕಗಳ ಮರು ವಾಪಸಾತಿಯ ದಿನ ಹಾಗೂ ದಂಡ ಆಗಿದ್ದರೇ ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಮುನ್ನೆಚ್ಚರಿಕೆ ಹಾಗೂ ಜಾಗೃತಗೊಳಿಸಲು ಈ ಆ್ಯಪ್ ಅತ್ಯಂತ ಸಹಕಾರಿಯಾಗಿದೆ ಎಂದರು.

ಸಾಮಾನ್ಯವಾಗಿ ಫೇಸಬುಕ್, ಇ-ಮೇಲ್ ಬಳಕೆಯನ್ನು ಮಾಡುವಾಗ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್‌ ಅನ್ನು ನಾವೇ ರೂಪಿಸಿಕೊಳ್ಳುತ್ತೇವೆ. ಆದರೆ, ಈ ಆ್ಯಪ್‌ನಲ್ಲಿ ವಿದ್ಯಾಲಯಕ್ಕೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಗುರುತಿನ ಚೀಟಿಯಲ್ಲಿ ನೀಡುವ ಬಾರ್‌ಕೊಡ್ ಅಥವಾ ಪಾಸ್‌ವರ್ಡ್ ಮತ್ತು ಯೂಸರ್ ನೇಮ್ ಬಳಸಿ ಈ ಆ್ಯಪ್ ಮೂಲಕ ನೇರವಾಗಿ ಪ್ರವೇಶಿಸಿ ಮತ್ತು ಗ್ರಂಥಾಲಯ ಬಳಸಿಕೊಳ್ಳಬಹುದು ಎಂದು ತಿಳಿಸಿದರು.

ಇದರಲ್ಲಿ ಯಾವುದೇ ದತ್ತಾಂಶ ಪರಿಷ್ಕರಣೆ ಮಾಡುವಂತಿಲ್ಲ. ಇದರ ಮೂಲಕ ನಿರ್ವಾಹಕರ ಜತೆ ಸಂಪರ್ಕ ಸಾಧಿಸಬಹುದಾಗಿದೆ. ಅಲ್ಲದೆ ಬಳಕೆದಾರ ಯಾವುದೇ ಖಾಸಗಿ ಮಾಹಿತಿ ಬಹಿರಂಗವಾಗುವುದಿಲ್ಲ. ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳು ಈ ಆ್ಯಪ್‌ನ್ನು ಉಪಯೋಗಿಸಬಹುದು. ಬಳಕೆದಾರ ತನ್ನ ಸಲಹೆಗಳನ್ನು ಸೂಚಿಸಬಹುದಾಗಿದೆ. ಇದು ಮುಖ್ಯವಾಗಿ ಸಂಶೋಧನಾ, ಪದವಿ ಹಂತದ ವಿದ್ಯಾರ್ಥಿಗಳಿಗೆ ಹಾಗೂ ಗ್ರಂಥಾಲಯದ ಸಿಬ್ಬಂದಿಗೆ ವರದಾನವಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಆಯುರ್‌ಕೇರ್‌ ವಂಚನೆ ಪ್ರಕರಣ, ಇಂಥವರ ವಿರುದ್ಧ ಕಠಿಣ ಕ್ರಮ ಅಗತ್ಯ

ಕಾಲೇಜಿನ ಬಿಇ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಮಹಮ್ಮದ್ ಪಟೇಲ ಮತ್ತು ಕು.ಧಿರಜ್ ಇಂಚಲಕರಂಜಿ ಗ್ರಂಥಾಲಯ ಆ್ಯಪ್‌ ಅನ್ನು ಅಭಿವೃದ್ಧಿಗೊಳಿಸಿದ್ದಾರೆ. ಮೊಬೈಲ್ ಅಪ್ಲಿಕೇಶನ್ ಬಳಕೆದಾರರಿಗೆ ತಕ್ಷಣ ಹಾಗೂ ತ್ವರಿತವಾಗಿ ಗ್ರಂಥಾಲಯದ ಸೇವೆ ಪಡೆದುಕೊಳ್ಳಲು ಈ ಹೊಸ ಯೋಜನೆಯನ್ನು ರೂಪಿಸಲಾಗಿದೆ. ಮಹಾವಿದ್ಯಾಲಯದ ವಿದ್ಯಾರ್ಥಿಗಳ ಬೇಡಿಕೆ ಮತ್ತು ಅಗತ್ಯವನ್ನು ಈ ಆ್ಯಪ್ ಪೂರೈಸಲಿದೆ. ಆ್ಯಪ್‌ ಬಿಡುಗಡೆ ಸಂದರ್ಭದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು, ಗ್ರಂಥಾಲಯ ಸಿಬ್ಬಂದಿ, ಅಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ಗೂಗಲ್ ಪ್ಲೆ-ಸ್ಟೋರ್‌ನಲ್ಲಿ ಈ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ಪ್ರತಿ ಬಾರಿ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್‌ ಅನ್ನು ನಮೂದಿಸದೇ ಗ್ರಂಥಾಲಯದ ವೆಬ್ ಒಪ್ಯಾಕ್‌ ಅನ್ನು ಪ್ರವೇಶಿಸಬಹುದು. ಗ್ರಂಥಾಲಯ ಸಿಬ್ಬಂದಿಯ ನೆರವಿಲ್ಲದೆ ಪುಸ್ತಕಗಳ ಸ್ಥಳವನ್ನು ಹಾಗೂ ಸದ್ಯದ ಪುಸ್ತಕದ ಲಭ್ಯತೆ ತಿಳಿದುಕೊಳ್ಳುವ ಜತೆಗೆ ಹೊಸ ಪುಸ್ತಕಗಳ ಶೋಧಕಾರ್ಯವನ್ನು ಮಾಡಬಹುದಾಗಿದೆ.
| ಸತೀಶ ತೋಟಾರ, ಮುಖ್ಯ ಗ್ರಂಥಪಾಲಕರು, ಡಾ.ಎಂ.ಎಸ್.ಶೇಷಗಿರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕಾಲೇಜು, ಬೆಳಗಾವಿ

Exit mobile version