ಬೆಳಗಾವಿ: ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿಯಲ್ಲಿ ಎಂಇಎಸ್ ನ ಪುಂಡಾಟಿಕೆ ಮತ್ತೆ ಹೆಚ್ಚುತ್ತಿದೆ.
ಸರ್ಕಾರಿ ಕಚೇರಿಗಳಲ್ಲಿ ಮರಾಠಿಗರಿಗೆ ಮರಾಠಿ ಭಾಷೆಯಲ್ಲಿ ದಾಖಲೆ ನೀಡಲು ಆಗ್ರಹಪಡಿಸುತ್ತಿದೆ. ಇದು ಭಾರಿ ವಿವಾದ ಸೃಷ್ಟಿಸಿದೆ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ಎಂಇಎಸ್ ಪುಂಡರ ಪುಂಡಾಟಿಕೆ ನಡೆದಿದೆ. ಅಧಿಕಾರಿಗಳ ಎದುರೇ ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಮುಖಂಡ ದೀಪಕ್ ದಳವಿ, ನ್ಯಾಯಾಲಯ ಆದೇಶ ಇದ್ರೂ ಮರಾಠಿಯಲ್ಲಿ ದಾಖಲೆ ಪತ್ರ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು. ಬೆಳಗಾವಿ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ್ದ ಎಂಇಎಸ್ ಪುಂಡರು, ಎಡಿಸಿ ಅಶೋಕ್ ದುಡಗುಂಟಿ ಮನವಿ ಸ್ವೀಕರಿಸಲು ಆಗಮಿಸಿದ ವೇಳೆ ನಾಡದ್ರೋಹಿ ಘೋಷಣೆ ಕೂಗಿದರು. ಬೆಳಗಾವಿ, ಬೀದರ್, ಭಾಲ್ಕಿ ಕಾರವಾರ, ನಿಪ್ಪಾಣಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕು ಎಂದರು.
ಇದಕ್ಕೂ ಮುನ್ನ ಎಂಇಎಸ್ ವತಿಯಿಂದ ಹುತಾತ್ಮ ದಿನಾಚರಣೆ ನಡೆಸಲಾಯಿತು. ಮಹಾರಾಷ್ಟ್ರದ ಶಿವಸೇನೆ ನಾಯಕರ ಕರೆಯಿಸಿ ಹುತಾತ್ಮ ದಿನಾಚರಣೆ ಮಾಡಲಾಯಿತು. ಈ ಹಿಂದೆ 1986ರಲ್ಲಿ ಎಂಇಎಸ್ ನಾಯಕರ ಪ್ರಚೋದನಕಾರಿ ಮಾತುಗಳಿಂದ ಗಡಿ ಹೋರಾಟದಲ್ಲಿ ಭಾಗಿಯಾಗಿ 9 ಜನ ಬಲಿಯಾಗಿದ್ದರು.