Site icon Vistara News

Rain News | ಬೆಳಗಾವಿಯಲ್ಲಿ ಮಳೆ ಆರ್ಭಟ : ಭೋರ್ಗರೆದ ಘಟಪ್ರಭಾ ‌ನದಿ, ಪ್ರವಾಹ ಭೀತಿ

Rain News

ಬೆಳಗಾವಿ : ಕಳೆದ ಮೂರು ದಿನಗಳಿಂದ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆ ಆರ್ಭಟ (Rain News) ಸೋಮವಾರ (ಸೆ.12) ಹೆಚ್ಚಾಗಿದೆ. ಮಳೆಯಿಂದ ಕೃಷ್ಣ, ಘಟಪ್ರಭಾ ಭೋರ್ಗರೆತ ಹೆಚ್ಚಾಗಿದ್ದು 10ಕ್ಕೂ ಅಧಿಕ ಸೇತುವೆಗಳು ಜಲಾವೃತಗೊಂಡಿವೆ. ಹಿಡಕಲ್‌ ಜಲಾಶಯ ‌ಭರ್ತಿಗೊಂಡಿದೆ. ಗೋಕಾಕ ಹೊರವಲಯದಲ್ಲಿರುವ ಲೋಳಸೂರ ಸೇತುವೆ ಮುಳುಗಡೆ ಭೀತಿಯಲ್ಲಿದೆ. ಮೂರೇ ದಿನಗಳ ಅವಧಿಯಲ್ಲಿ 35ಕ್ಕೂ ಅಧಿಕ ಮನೆಗಳ ಕುಸಿತಗೊಂಡಿವೆ.

ಮೂರೇ ದಿನಗಳಲ್ಲಿ ಅಧಿಕ ಮನೆಗಳು ಕುಸಿತ
ಬೈಲಹೊಂಗಲ, ಸವದತ್ತಿ, ಚಿಕ್ಕೋಡಿ, ಬೆಳಗಾವಿಯಲ್ಲಿ 16 ಮನೆಗಳ ಕುಸಿತವಾಗಿವೆ. ಮೂರೇ ದಿನಗಳ ಅವಧಿಯಲ್ಲಿ 35ಕ್ಕೂ ಅಧಿಕ ಮನೆಗಳ ಕುಸಿತಗೊಂಡಿವೆ. ನಿಪ್ಪಾಣಿ ತಾಲೂಕೊಂದರಲ್ಲೇ ಮಳೆಯಿಂದ 19 ಮನೆಗಳು ಕುಸಿದಿವೆ. 10 ದಿನಗಳ ಹಿಂದೆಯೇ ಘಟಪ್ರಭ, ಮಲಪ್ರಭ ಜಲಾಶಯ ಭರ್ತಿಯಾಗಿತ್ತು. 2294 ಕ್ಯುಸೆಕ್ ಮಲಪ್ರಭ ‌ನದಿಯ ಒಳಹರಿವು ಇದ್ದು, ಅಷ್ಟೇ ಪ್ರಮಾಣದಲ್ಲಿ ನೀರು ಹೊರಕ್ಕೆ ಬಿಡಲಾಗಿದೆ. ಹಿಡಕಲ್ ಜಲಾಶಯದಿಂದ 17 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಇದನ್ನೂ ಓದಿ | Rain News | ಬೆಳಗಾವಿಯಲ್ಲಿ ಮಹಾಮಳೆ; ಮನೆ ಗೋಡೆ ಕುಸಿದು ಮಹಿಳೆ ಬಲಿ!

ಘಟಪ್ರಭಾ ನದಿ

ಜನರಲ್ಲಿ ಮತ್ತೆ ಪ್ರವಾಹದ ಭೀತಿ
ಘಟಪ್ರಭಾ ನದಿ ಪಾತ್ರದ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಚಿಕ್ಕೋಡಿ ತಾಲೂಕಿನ ‌ಕಲ್ಲೋಳ ಬಳಿಯ ಕೃಷ್ಣ ನದಿಯ ಒಳಹರಿವು 33,409 ಆಗಿದೆ. ನದಿಗಳ ಒಳಹರಿವು ಹೆಚ್ಚಳ ಕಾರಣಕ್ಕೆ 10ಕ್ಕೂ ‌ಅಧಿಕ ಸೇತುವೆ ಜಲಾವೃತಗೊಂಡಿವೆ. ಗೋಕಾಕ-ಶಿಂಗಳಾಪುರ, ಹುಕ್ಕೇರಿ-ಯರನಾಳ, ಕುರಣಿ-ಕೋಚರಿ, ಕುನ್ನೂರ-ಬೋರವಾಡ, ಅಕ್ಕೋಳ-ಸಿದ್ನಾಳ ಸೇತುವೆ ಮುಳುಗಡೆ ಆಗಿದೆ. ಕುನ್ನೂರ-ಬೋಜವಾಡ, ಕುನ್ನೂರ-ಬೋರಬಾಡ, ಭಿವಶಿ-ಜತ್ರಾಟ ಸೇತುವೆ ಜಲಾವೃತಗೊಂಡಿದೆ.

ಘಟ್ಟಪ್ರದೇಶದಲ್ಲಿ ಭಾರಿ ಮಳೆ
ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ. ಘಟಪ್ರಭಾ,‌ ಮಾರ್ಕಂಡೇಯ ನದಿಗಳು ಅಪಾಯದ ಮಟ್ಟ ತಲುಪುವಂತಿದೆ. ಜಿಲ್ಲೆಯ ಗೋಕಾಕ ತಾಲೂಕಿನ ಶಿಂಗಳಾಪುರ ಗ್ರಾಮ ಗೋಕಾಕ ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಡೆ ಆಗಿದೆ. ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಿದ್ದರಿಂದ ಪರ್ಯಾಯ ಮಾರ್ಗವನ್ನು ಬಳಿಸಿ ಜನರು ಸಂಚರಿಸುತ್ತಿದ್ದಾರೆ.

ಹಿಡಕಲ್‌ ಜಲಾಶಯ ‌

ಹಿಡಕಲ್‌ ಜಲಾಶಯ ‌ಭರ್ತಿ
ಘಟಫ್ರಭಾ ನದಿ ಭೋರ್ಗರೆತ ಹೆಚ್ಚಾಗಿದ್ದು, ಹುಕ್ಕೇರಿ ತಾಲೂಕಿನ‌ ಹಿಡಕಲ್ ಜಲಾಶಯದಲ್ಲಿ 26 ಸಾವಿರ ಕ್ಯುಸೆಕ್ ನೀರು ಬಿಡುಗಡೆಗೊಂಡಿದೆ. ಗೋಕಾಕ ‌ತಾಲೂಕು ಕೇಂದ್ರದಿಂದ 5 ಕಿ.ಮೀ ದೂರದಲ್ಲಿರುವ ಗೋಕಾಕ್‌ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.

ಇದನ್ನೂ ಓದಿ | Rain News | ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ಹೈರಾಣಾದ ಜನ

ಹುಕ್ಕೇರಿ, ಗೋಕಾಕ, ಮೂಡಲಗಿ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ. ಕರ್ನಾಟಕ ನೀರಾವರಿ ನಿಗಮ ನಿಯಮಿತ ಪ್ರವಾಹ ಮುನ್ನೆಚ್ಚರಿಕೆ ಸೂಚನೆ ನೀಡಿದೆ. 2175 ಅಡಿ ಸಾಮರ್ಥ್ಯದ ಹಿಡಕಲ್ ಜಲಾಶಯ ಸಂಪೂರ್ಣ ಭರ್ತಿ ಆಗಿದೆ. ಹಿಡಕಲ್ ಜಲಾಶಯಕ್ಕೆ 26 ಸಾವಿರ ಕ್ಯೂಸೆಕ್ ಒಳಹರಿವು ಆಗಿದೆ. ಒಳಹರಿವು ಹೆಚ್ಚಾದರೆ ಯಾವುದೇ ಕ್ಷಣದಲ್ಲಿ 40 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತದೆ ಎನ್ನಲಾಗಿದೆ. ಘಟಪ್ರಭಾ, ಹಿರಣ್ಯಕೇಶಿ ನದಿ ಪಾತ್ರದ ಗ್ರಾಮಸ್ಥರು ಎಚ್ಚರದಿಂದ ಇರಲು ಸೂಚನೆ ನೀಡಿದೆ.

ಶಿಂಗಳಾಪುರ ಗ್ರಾಮದ ಸಂಪರ್ಕ ಕಡಿತ

ಮುಳುಗಡೆ ಭೀತಿಯಲ್ಲಿ ಲೋಳಸೂರ ಸೇತುವೆ
ಹಿಡಕಲ್ ಜಲಾಶಯದಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡುಗಡೆ ಹಿನ್ನೆಲೆಯಲ್ಲಿ ಗೋಕಾಕ ಹೊರವಲಯದಲ್ಲಿರುವ ಲೋಳಸೂರ ಸೇತುವೆ ಮುಳುಗಡೆ ಭೀತಿಯಲ್ಲಿದೆ. ಘಟಪ್ರಭಾ-ಗೋಕಾಕ ಸಂಪರ್ಕಿಸುವ ಲೋಳಸೂರ ಸೇತುವೆ ಕಳೆದ ಮೂರು ವರ್ಷಗಳಿಂದ ಸತತವಾಗಿ ಮುಳುಗಡೆ ಆಗುತ್ತಿದೆ. ಲೋಳಸೂರ ಸೇತುವೆ ಮುಳುಗಡೆಗೆ ಒಂದೇ ಅಡಿ ಬಾಕಿ ಇದೆ. ಸೇತುವೆ ಮುಳುಗಡೆ ಆದರೆ ಮತ್ತೆ ಸಂಪರ್ಕ ಕಡಿತಗೊಳ್ಳಲಿವೆ.

ಇದನ್ನೂ ಓದಿ | Rain News | ಬೆಳಗಾವಿಯಲ್ಲಿ ಮಳೆಯ ಆರ್ಭಟಕ್ಕೆ ಅಪಾರ ಹಾನಿ: ಎಲ್ಲಿ ಎಷ್ಟು?

Exit mobile version