Site icon Vistara News

ಮಕ್ಕಳ ಕಾರಣಕ್ಕೆ ಉಳಿಯಿತು ಬೆಕ್ಕಿನ ಜೀವ: ಬೆಳಗಾವಿಯಲ್ಲೊಂದು ಮಾನವೀಯ ಘಟನೆ

ಬೆಳಗಾವಿ: ಕಷ್ಟದಲ್ಲಿರುವ ಜೀವ, ಜೀವಿಗೆ ಸಕಾಲದಲ್ಲಿ ಸಹಾಯ ಸಿಕ್ಕ ಕ್ಷಣ ಎಲ್ಲರಿಗೂ ಸಮಾಧಾನ ತರುತ್ತದೆ. ಇಂತಹದ್ದೊಂದು ಘಟನೆಯಲ್ಲಿ, ಬಹುಮಹಡಿ ಕಟ್ಟಡದ ಮೇಲೆ ಅಚಾನಾಕ್ಕಾಗಿ ಸಿಲುಕಿಕೊಂಡಿದ್ದ ಬೆಕ್ಕನ್ನು ರಕ್ಷಣೆ ಮಾಡುವಲ್ಲಿ ಪುಟ್ಟ ಮಕ್ಕಳು ಮಹತ್ವದ ಪಾತ್ರ ವಹಿಸಿದ್ದಾರೆ.

ಖಡೇಬಜಾರ್‌ನ ಮೂರಂತಸ್ತಿನ ಕಟ್ಟಡದಲ್ಲಿ ವಾಸಿಸುತ್ತಿರುವ ಕುಟುಂಬವೊಂದರ ಮಕ್ಕಳು ಮುದ್ದಿನಿಂದ ಬೆಕ್ಕು ಸಾಕಿದ್ದರು. ಭಾನುವಾರ ಬೆಳಗ್ಗೆ ಬೆಕ್ಕು ಮನೆಯ ಹೊರಗಿನ ಬಾಲ್ಕನಿಗೆ ಇಳಿದಿದೆ. ಆದರೆ ಅಲ್ಲಿಂದ ಮೇಲೆ ಹತ್ತಿ ಬರಲಾಗದೆ ಸಂಕಷ್ಟಪಡುತ್ತಿತ್ತು.

ಮುದ್ದಿನ ಬೆಕ್ಕು ಎಲ್ಲಿ ಎಂದು ಹುಡುಕಾಡಿದ ಮಕ್ಕಳು ಬಾಲ್ಕನಿಯಲ್ಲಿ ಕಷ್ಟಪಡುತ್ತಿರುವ ಮುದ್ದಿನ ಪ್ರಾಣಿಯನ್ನು ಕಂಡಿದ್ದಾರೆ. ಪ್ರಾಣಭಯದಲ್ಲಿ ಎರಡು ಗಂಟೆಗಳ ಕಾಲ ಅತ್ತಿಂದಿತ್ತ ಬೆಕ್ಕು ಅಲೆದಾಡುತ್ತಿತ್ತು. ಇದನ್ನು ಕಂಡ ಮಕ್ಕಳು, ಬೆಕ್ಕನ್ನು ರಕ್ಷಿಸುವಂತೆ ಪಾಲಕರ ಬಳಿ ಹಠ ಹಿಡಿದಿದ್ದಾರೆ.

ಬೆಕ್ಕನ್ನು ರಕ್ಷಿಸಿದ ಅಗ್ನಿಶಾಮಕ ಮತ್ತು ಅನಿಮಲ್‌ ವೆಲ್‌ಫೇರ್‌ ತಂಡ

ಬೆಕ್ಕನ್ನು ರಕ್ಷಣೆ ಮಾಡಲು ಪಾಲಕರು ಹರಸಾಹಸಪಟ್ಟಿದ್ದಾರೆ. ಆದರೆ ಅದು ಸಾಧ್ಯವಾಗದೇ ಇದ್ದಾಗ ಅನಿಮಲ್ ವೆಲ್ಫೇರ್​ ಅಸೋಸಿಯೇಷನ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಅನಿಮಲ್ ವೆಲ್‌ಫೇರ್‌ ಅಸೋಸಿಯೇಷನ್‌ನ ವರುಣ್ ಕರ್ಕನೀಸ್ ತಂಡ ನಡೆಸಿದ ಪ್ರಯತ್ನವೂ ಸಫಲವಾಗಲಿಲ್ಲ.

ಕೊನೆಗೆ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ತಂಡ, ಏಣಿಯ ಸಹಾಯದಿಂದ ಬಾಲ್ಕನಿ ಏರಿ ಬೆಕ್ಕನ್ನು ರಕ್ಷಣೆ ಮಾಡಿದ್ದಾರೆ. ಈ ರಕ್ಷಣಾ ಕಾರ್ಯಾಚರಣೆಯ ದೃಶ್ಯವನ್ನು ನೋಡಿ ಸುತ್ತ ನೆರೆದಿದ್ದ ಜ‌ನರು ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.

ಇದನ್ನೂ ಓದಿ | ಬೆಕ್ಕುಗಳ ವರ್ತನೆ ಅರಿಯಲು ಅದರ ಮಾಲೀಕರಿಗೆ ಟೆಸ್ಟ್!

Exit mobile version