Site icon Vistara News

Road Accident : ಬೈಕ್‌ಗೆ ಗೂಡ್ಸ್‌ ವಾಹನ ಡಿಕ್ಕಿ; ಮಸಣ ಸೇರಿದ ಸರ್ಕಾರಿ ಶಾಲಾ ಶಿಕ್ಷಕ

Goods vehicle collides with bike Government school teacher dies

ಚಿಕ್ಕೋಡಿ: ಅಥಣಿ- ಮದಭಾವಿ ರಸ್ತೆಯಲ್ಲಿ ಗೂಡ್ಸ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಸವಾರ ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಬೆಳಗಾವಿಯ ಅಥಣಿ ಪಟ್ಟಣ ಹೊರವಲಯದ ಗುಡ್ಡದ ಲಕ್ಷ್ಮಿ ದೇವಸ್ಥಾನ ಬಳಿ ಅಪಘಾತ (Road Accident) ಸಂಭವಿಸಿದೆ.

ರಾವಸಾಬ ರಾಮಪ್ಪ ಹಿಪ್ಪರಗಿ (57) ಮೃತ ದುರ್ದೈವಿ. ರಾವಸಾಬ ಮಸರಗುಪ್ಪಿ ಗ್ರಾಮದ ಕಲಕಟ್ಟಿ ಹಳ್ಳದ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದರು. ಶನಿವಾರ ಮುಂಜಾನೆ ಶಾಲೆಗೆಂದು ಬೈಕ್‌ನಲ್ಲಿ ತೆರಳುವಾಗ ಗೂಡ್ಸ್ ವಾಹನಕ್ಕೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Road Accident : ಆಯತಪ್ಪಿ ಕಂದಕ್ಕೆ ಉರುಳಿದ ಬಸ್‌; ಒಬ್ಬ ಸಾವು, 25 ಮಂದಿಗೆ ಗಾಯ

ಯಾದಗಿರಿ/ ಚಿಕ್ಕಮಗಳೂರು: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ ಬಳಿ ಖಾಸಗಿ ಬಸ್‌ವೊಂದು ಆಯತಪ್ಪಿ ಕಂದಕ್ಕೆ (Road Accident) ಉರುಳಿದೆ. ಕಂದಕ್ಕೆ ರಭಸವಾಗಿ ಬಿದ್ದ ಪರಿಣಾಮ ಪ್ರಯಾಣಿಕನೊರ್ವ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ ಬಸ್ಸಿನಲ್ಲಿದ್ದ 25 ಮಂದಿ ಗಾಯಗೊಂಡಿದ್ದಾರೆ.

ಬಾಲು ಕುಮಾರ್ (36) ಮೃತ ಪ್ರಯಾಣಿಕರಾಗಿದ್ದಾರೆ. ಈತ ಬೀದರ್ ಜಿಲ್ಲೆಯ ಹುಮನಬಾದ್ ತಾಲೂಕಿನ ಹಳ್ಳಿಖೇಡ ನಿವಾಸಿ ಎಂದು ತಿಳಿದು ಬಂದಿದೆ. ಬೀದರ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದಾಗ ತಡರಾತ್ರಿ ಈ ಅಪಘಾತ ನಡೆದಿದೆ. ಬಸ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಇತರೆ ಗಾಯಾಳು ಪ್ರಯಾಣಿಕರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಸುರಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಚಿಕ್ಕಮಗಳೂರಲ್ಲಿ ದಟ್ಟ ಮಂಜು; ರಸ್ತೆ ಕಾಣದೇ ಬಂಡೆಗೆ ಲಾರಿ ಡಿಕ್ಕಿ

ಕಳೆದ ಎರಡ್ಮೂರು ದಿನಗಳಿಂದ ಚಿಕ್ಕಮಗಳೂರಲ್ಲಿ ಮಳೆ ಸುರಿಯುತ್ತಿದೆ. ಬೆಳಗಿನ ಹೊತ್ತು ದಟ್ಟವಾದ ಮಂಜು ಆವರಿಸುತ್ತಿದೆ. ಇದರಿಂದಾಗಿ ಸವಾರರು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೆ ವಾಹನವನ್ನು ಚಲಾಯಿಸುವ ಸ್ಥಿತಿ ನಿರ್ಮಾಣವಾಗಿದೆ. ಕಳೆದರಡು ದಿನಗಳಿಂದ ಮಳೆಗೆ ರಸ್ತೆಯಲ್ಲಿ ಸ್ಕಿಡ್‌ ಆಗಿ ಅಪಘಾತಗಳು ಸಂಭವಿಸುತ್ತಿದೆ. ಸದ್ಯ ಚಾರ್ಮಾಡಿ ಘಾಟ್‌ನ 6ನೇ ತಿರುವಿನಲ್ಲಿ ಲಾರಿಯೊಂದು ಬಂಡೆಗಲ್ಲಿಗೆ ಗುದ್ದಿದೆ.

ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗೊಬ್ಬರ ತುಂಬಿಕೊಂಡು ಚಿಕ್ಕಮಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದಾಗ ಈ ಅಪಘಾತ ನಡೆದಿದೆ. ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಜು ಕವಿದ ಕಾರಣಕ್ಕೆ ಚಾಲಕನ ನಿಯಂತ್ರಣ ತಪ್ಪಿ ಬಂಡೆಗೆ ಡಿಕ್ಕಿಯಾಗಿದೆ. ಇನ್ನು ತಿರುವಿನಲ್ಲೇ ಅಪಘಾತವಾದ ಕಾರಣಕ್ಕೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಾಯಗೊಂಡು ನರಳಾಡುತ್ತಿದ್ದ ಚಾಲಕ, ಕ್ಲೀನರ್‌ನನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಳ್ತಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಚಿಕ್ಕಮಗಳೂರು-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version