ಬೆಳಗಾವಿ: ರಾಜ್ಯೋತ್ಸವ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಇಬ್ಬರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ ಮೇಲೆ ಘಟನೆ ನಡೆದಿದೆ. ಧಾರವಾಡ ಜಿಲ್ಲೆಯ ನರೇಂದ್ರ ಗ್ರಾಮದ ಲಬೈಕ ಹಲಸಿಗರ, ಬೆಳಗಾವಿಯ ಬಾಳೇಕುಂದ್ರಿ ಗ್ರಾಮದ ಶ್ರೀನಾಥ ಗುಜನಾಳ ಮೃತಪಟ್ಟವರು.
ಬೈಕ್‌ನಲ್ಲಿದ್ದ ಯುವಕರು ಬೆಳಗಾವಿಯಲ್ಲಿ ರಾಜ್ಯೋತ್ಸವ ಮುಗಿಸಿಕೊಂಡು ಹೊರಟಿದ್ದರು. ಇದೇ ವೇಳೆ ದಾಬಾದಲ್ಲಿ ಊಟ ಮುಗಿಸಿಕೊಂಡು ಬರುತ್ತಿದ್ದ ಪಾದಚಾರಿಗಳಿಗೆ ರಭಸದಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಒಬ್ಬ ಬೈಕ್ ಸವಾರ ಹಾಗೂ ಮತ್ತೊಬ್ಬ ಪಾದಚಾರಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಧಾರವಾಡದ ಅಲ್ತಾಫ್ ನಾಲಬಂದ, ಕಡತನಬಾಗೇವಾಡಿಯ ಅರ್ಜುನ ರಂಗಣ್ಣನವರಗೆ ಗಂಭೀರ ಗಾಯಗಳಾಗಿವೆ.
ಶವಗಳು ಬಿದ್ದ ಸ್ಥಳದಿಂದ 300 ಮೀಟರ್ ದೂರದಲ್ಲಿ ಬೈಕ್ ಪತ್ತೆಯಾಗಿದೆ. ಅಪಘಾತ ನಡೆದ ಬಳಿಕವೂ ಇಷ್ಟು ದೂರ ಬೈಕ್ ಹೋದುದು ಹೇಗೆ ಎಂಬುದು ಅಚ್ಚರಿಯ ಪ್ರಶ್ನೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಿತ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಸ್ಪತ್ರೆ ಸಿಬ್ಬಂದಿ ಎಡವಟ್ಟು, ರೋಗಿ ಸಾವು
ವಿಜಯಪುರ: ಇಂಡಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಡಯಾಲಿಸಿಸ್ ಚಿಕಿತ್ಸೆಗೆಂದು ಬಂದಿದ್ದ ಮಹಿಳೆ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.
ಕುಡಿದು ನಶೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಬಂದ ಸಿಬ್ಬಂದಿ ಬಸವರಾಜನಿಂದ ಈ ಎಡವಟ್ಟು ಆಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ನಶೆಯಲ್ಲಿ ಡಯಾಲಿಸಿಸ್ ಮಾಡಿ ಪೇಷೆಂಟ್ ಬಿಸ್ಮಿಲ್ಲಾ ನದಾಫ್ ಅವರ ಪ್ರಾಣವನ್ನೆ ತೆಗೆದಿದ್ದಾರೆ ಎಂದು ನದಾಫ್ ಕುಟುಂಬಸ್ಥರು ಆರೋಪಿಸಿದ್ದಾರೆ. ಡಯಾಲಿಸಿಸ್ ವೇಳೆ ಆಸ್ಪತ್ರೆ ಬೆಡ್ ಮೇಲೆಯೇ ರೋಗಿ ಮೃತಪಟ್ಟಿದ್ದಾರೆ.
ಸಿಟ್ಟಿಗೆದ್ದ ಕುಟುಂಬಸ್ಥರು ಆಸ್ಪತ್ರೆ ಎದುರು ಶವವಿಟ್ಟು ಟಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಶೆಯಲ್ಲೇ ಡಯಾಲಿಸಿಸ್ ಮಾಡಿದ ಬಸವರಾಜಗೆ ಕಪಾಳಮೋಕ್ಷ ಮಾಡಿದರು. ಇಂಡಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ: Road Accident : ಅತಿಥಿ ಶಿಕ್ಷಕನ ಪ್ರಾಣ ತೆಗೆದ ಲಾರಿ!