ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ವಿಶೇಷ ಧಾರಾವಾಹಿ ‘ಪವಾಡ ಪುರುಷ’ ಈಗ ಕುತೂಹಲಕರ ಘಟ್ಟ ತಲುಪಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿ ಮಧ್ಯಾಹ್ನ 2:30ಕ್ಕೆ ಪ್ರಸಾರವಾಗುತ್ತಿರುವ ಸಂತ ಬಾಳೂ ಮಾಮನ ಬದುಕಿನ ಕಥಾನಕ ‘ಪವಾಡ ಪುರುಷ’ ಈಗಾಗಲೇ ಜನರ ಮನವನ್ನು ತಲುಪಿ ಗೆದ್ದಿದೆ. ಇನ್ನು ಬಾಲಕ ಬಾಳೂ ವಯಸ್ಕನಾಗುವ ಈ ಹಂತದಲ್ಲಿ ಕತೆ ಮತ್ತಷ್ಟು ರೋಚಕವಾಗಿದೆ. ಆದರೆ, ಈ ಪವಾಡ ಪುರುಷರು ನಮ್ಮ ಕರ್ನಾಟಕದವರು ಎಂಬುದು ವಿಶೇಷ.
‘ಪವಾಡ ಪುರುಷ’ದಲ್ಲಿ ಬರುತ್ತಿರುವ ಸಂತ ಬಾಳೂ ಮಾಮ ಯಾರೆಂದು ನಿಮಗೆ ಪ್ರಶ್ನೆ ಬರಬಹುದು. ಅದನ್ನು ಹೆಳುವುದಾದರೇ ಇದೇ ಮಣ್ಣಿನಲ್ಲಿ ಬಾಳಿ ಬದುಕಿದ ಈ ಪವಾಡ ಪುರುಷನನ್ನು ಜನ ಶಿವನ ಅವತಾರವೆಂದು ಕರೆಯುತ್ತಾರೆ.
ಇದನ್ನೂ ಓದಿ | Buddies : ಕಿರುತೆರೆ ನಟ ಕಿರಣ್‌ರಾಜ್ ಈಗ ಸ್ಯಾಂಡಲ್‌ವುಡ್‌ಗೆ
ಇನ್ನು ಸಂತ ಬಾಳೂ ಮಾಮನ ಬಗ್ಗೆ ಹೇಳುವುದಾದರೆ, ಇವರು ನಮ್ಮ ಕನ್ನಡದವರು ಎನ್ನುವುದು ಹೆಮ್ಮೆಯ ವಿಷಯ. ಅವರು ಕರ್ನಾಟಕದ ಚಿಕ್ಕೋಡಿ ಬಳಿಯಿರುವ ಹಳ್ಳಿಯೊಂದರಲ್ಲಿ ಜನಿಸಿದವರು. ಅವರು ಬೇರೆ ಪವಾಡ ಪುರುಷರಂತಲ್ಲ. ಅಗತ್ಯವಿಲ್ಲದೆ ಪವಾಡ ಮಾಡಿ ಜನರನ್ನು ಮರುಳುಮಾಡೋ ಬಾಬಾಗಳಂತಲ್ಲ. ಕುರಿ ಕಾಯುತ್ತಾ ಬದುಕು ಸಾಗಿಸುತ್ತಿದ್ದ ಬಾಳೂ ಮಾಮ ತನ್ನ ಬಳಿ ಸಹಾಯ ಬೇಡಿ ಬಂದವರನ್ನು ಉದ್ದಾರ ಮಾಡುತ್ತಿದ್ದುದು ನಿಜ. ಅವನ್ನು ಪವಾಡ ಎಂದು ಜನ ನಂಬುತ್ತಿದ್ದದ್ದೂ ನಿಜ. ಕುರಿ ಹಾಲಿನಿಂದ ಜನರ ಕಣ್ಣು ಬರಿಸಿದ್ದು ಬಾಳೂ ಮಾಮ. ಪ್ರವಾಹದ ಭೀತಿ ಎದುರಾದಾಗ ತಮ್ಮ ಕಂಬಳಿಯಿಂದ ಅದನ್ನು ಓಡಿಸಿದ್ದು, ಭೂತದ ಕಾಟವನ್ನು ಕಾಲಿನಿಂದ ಮೆಟ್ಟಿ ಪರಿಹರಿಸಿದವರು ಬಾಳೂ ಮಾಮ. ಜನ ಅವರನ್ನು ಪವಾಡ ಪುರುಷ ಎಂದು ನಂಬಿದ್ದರಲ್ಲಿ ಆಶ್ಚರ್ಯವಿಲ್ಲ.
ಬಳಿಕ ಅವರು ಮಹಾರಾಷ್ಟ್ರದ ಅದಮಾಪುರದಲ್ಲಿ ದೇಹತ್ಯಾಗ ಮಾಡಿದ್ದರಿಂದ ಅವರಿಗೆ ಕರ್ನಾಟಕ, ಮಹಾರಾಷ್ಟ್ರಗಳೆರಡರಲ್ಲೂ ಭಕ್ತರಿದ್ದಾರೆ. ಅದಮಾಪುರ ಕರ್ನಾಟಕದ ನಿಪ್ಪಾಣಿಯ ಸಮೀಪ ಇರುವ ಕೊಲ್ಹಾಪುರ ಜಿಲ್ಲೆಯಲ್ಲಿದೆ. ಅಲ್ಲಿ ಭಕ್ತರೇ ಬಾಳೂ ಮಾಮನಿಗಾಗಿ ಗುಡಿಯೊಂದನ್ನು ನಿರ್ಮಿಸಿದ್ದಾರೆ. ಅಲ್ಲಿ ಪ್ರತಿವರ್ಷವೂ ಬಾಳೂ ಮಾಮನ ಜಾತ್ರೆ ನಡೆಯುತ್ತದೆ.
ಕರ್ನಾಟಕ, ಮಹಾರಾಷ್ಟ್ರಗಳಷ್ಟೇ ಅಲ್ಲದೆ ಆಂಧ್ರದಿಂದಲೂ ಸಾವಿರಾರು ಭಕ್ತರು ಬಾಳೂಮಾಮನನ್ನು ನಂಬಿ ಅಲ್ಲಿಗೆ ಬರುತ್ತಾರೆ. ಅಲ್ಲದೇ ಅಲ್ಲಿ ನಿತ್ಯವೂ ಅಲ್ಲಿ ಅನ್ನದಾಸೋಹ ನಡೆಯುತ್ತದೆ.
ಹೀಗೆ ಕಷ್ಟದಲ್ಲಿರುವವರ ಉದ್ದಾರಕ್ಕೆಂದು ಆಯಾ ಕಾಲಕ್ಕೆ ಅಗತ್ಯವಾದ ಪವಾಡಗಳನ್ನು ಮಾಡಿ ನಮ್ಮ ನೆಲದಲ್ಲಿ ಹುಟ್ಟಿ ಬದುಕಿದ ಸಂತ. ಅವರ ಬದುಕು ಹಲವು ಕುತೂಹಲಕರ ತಿರುವುಗಳಿರುವ ಕಥಾನಕ. ಅದೆಲ್ಲವನ್ನೂ ಸ್ವಾರಸ್ಯವಾಗಿ ಹೇಳುವ ಧಾರಾವಾಹಿ ‘ಪವಾಡ ಪುರುಷ’.
ಇದನ್ನೂ ಓದಿ | ಮಗಳು ಜಾನಕಿ ಧಾರವಾಹಿ