Site icon Vistara News

ಖಾನಾಪುರದ ಶೇಡೆಗಾಳಿ ತೋಟಗಾರಿಕೆ ಕ್ಷೇತ್ರದಲ್ಲಿ ವಿವಿಧ ಹಣ್ಣುಗಳ ಸಸಿ ನಾಟಿ, ಅಧಿಕಾರಿಗಳಿಂದ ಮೆಚ್ಚುಗೆ

Belagavi

ಬೆಳಗಾವಿ: ಖಾನಾಪುರ ತಾಲೂಕಿನ ಶೇಡೆಗಾಳಿಯಲ್ಲಿರುವ ಸುಮಾರು ೩೦.೦೮ಎಕರೆ ವಿಸ್ತೀರ್ಣದಲ್ಲಿ ರಾಜ್ಯ ಸರ್ಕಾರದ ತೋಟಗಾರಿಕೆ ಅಭಿವೃದ್ಧಿ ಸಂಸ್ಥೆ (ಕೆಎಸ್‌ಎಚ್‌ಡಿಎ), ತೋಟಗಾರಿಕೆ ಇಲಾಖೆಯ ತೋಟಗಾರಿಕೆ ಕ್ಷೇತ್ರಕ್ಕೆ ಬೆಂಗಳೂರು ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದರ್‌ಕುಮಾರ ಕಟಾರಿಯ (IAS) ಹಾಗೂ ತೋಟಗಾರಿಕೆ ನಿರ್ದೇಶಕರಾದ ನಾಗೇಂದ್ರಪ್ರಸಾದ್.ಕೆ (IAS) ಅವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ತೋಟಗಾರಿಕೆ ಕ್ಷೇತ್ರದಲ್ಲಿ ಸುಮಾರು ೨೦ ತರಹದ ಪ್ರಧಾನ ಮತ್ತು ಅಪ್ರಧಾನ ಹಣ್ಣುಗಳ ಸಸಿಗಳನ್ನು ನಾಟಿ ಮಾಡಲಾಗಿದ್ದು, ಇದೊಂದು ಮಾದರಿಯ ತೋಟಗಾರಿಕೆ ಕ್ಷೇತ್ರವಾಗಿದೆ. ಇದು ರೈತರಿಗಾಗಿ ಒಂದು ಒಳ್ಳೆಯ ಮಾದರಿಯ ನರ್ಸರಿಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಯ ರೈತರಿಗೆ ಉತೃಷ್ಟ ಸಸಿಗಳನ್ನು ನೀಡುವ ಮೂಲಕ ತೋಟಗಾರಿಕೆ ಸದುದ್ದೇಶಗಳನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ತೋಟಗಾರಿಕೆಯಲ್ಲಿನ ಆಸಕ್ತ ರೈತರ ಹೊಲಗಳಿಗೆ ಉತ್ಕೃಷ್ಟ ಸಸಿಗಳನ್ನು ನೀಡಿ ರೈತರಿಗೆ ಆರ್ಥಿಕ ಚೈತನ್ಯ ತುಂಬುವಂತಹ ಕೆಲಸವಾಗಿದ್ದು, ರಾಜ್ಯ ತೋಟಗಾರಿಕೆ ಅಭಿವೃದ್ಧಿ ಸಂಸ್ಥೆ (ಕೆಎಸ್‌ಎಚ್‌ಡಿಎ) ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಅವರ ವಿಶೇಷ ಕಾಳಜಿ ಹಾಗೂ ಮುತುವರ್ಜಿಗೆ ರಾಜೇಂದರ್‌ಕುಮಾರ ಕಟಾರಿಯ ಹಾಗೂ ನಾಗೇಂದ್ರಪ್ರಸಾದ್.ಕೆ ಮಚ್ಚುಗೆ ವ್ಯಕ್ತಪಡಿಸಿದರು.

ತೋಟಗಾರಿಕೆ ಕ್ಷೇತ್ರ ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜಕುಮಾರ ಅವರು ಆರ್‌ಐಡಿಎಫ್ ಅಡಿ ನರ್ಸರಿ ಸಂರಕ್ಷಣೆಗಾಗಿ ತಂತಿಬೇಲಿ ಅಳವಡಿಸುವ ಕಾರ್ಯಕ್ಕೆ ಚುರುಕು ಮುಟ್ಟಿಸಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಹಾಗೆಯೇ ಟ್ರೈನಿಂಗ್ ಹಾಲ್, ೨೦ ಗುಂಟೆ ಜಾಗದಲ್ಲಿ ಪಾಲಿ ಹೌಸ್, ಎರೆಹುಳು ಗೊಬ್ಬರ ಘಟಕ ಮತ್ತು ಬಯೋ ಡೈಸ್ಟರ್ ಘಟಕ ಸೇರಿದಂತೆ ಬೋರವೆಲ್ ಕೊರೆಸುವ ಎಲ್ಲ ಯೋಜನೆಗಳನ್ನು ಈಗಾಗಲೇ ಪೂರ್ಣಗೊಳಿಸಿದ್ದು, ಅತ್ಯಂತ ಕಡಿಮೆ ವೇಳೆಯಲ್ಲಿ ಮಾದರಿ ಫಾರ್ಮ್‌ಗೆ ಮುನ್ನುಡಿ ಬರೆದಿದ್ದಾರೆ.

೧೯೬೫ರಲ್ಲಿಯೇ ಸ್ಥಾಪನೆಯಾದ ಶೇಡೆಗಾಳಿಯ ತೋಟಗಾರಿಕೆಯ ಈ ನರ್ಸರಿಯಲ್ಲಿ ಸುಮಾರು ಸೇಬು-೧೪೦, ಬಟರ್‌ಫ್ರೂಟ್-೧೦೦, ರೋಜ ಆ್ಯಪಲ್-೮೦, ಮಿರಾಕಲ್ ಫ್ರೂಟ್-೧೨೦, ಬ್ರೆಡ್ ಫ್ರೂಟ್-೪೦ ಸೇರಿ ವಿವಿಧ ಬಗೆಯ ಹಣ್ಣುಗಳ ಸಸಿಗಳನ್ನು ನಾಟಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಆಗ್ರೋ ಟ್ಯೂರಿಸಂ ಮಾಡುವ ಮೂಲಕ ಅತ್ಯಾಕರ್ಷಣೆಯ ಕೇಂದ್ರವನ್ನಾಗಿ ಮಾಡುವುದಲ್ಲದೇ ರಾಜ್ಯದಲ್ಲಿಯೇ ಮಾದರಿಯ ನರ್ಸರಿಯಾಗಿ ಮಾಡಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ರಾಜಕುಮಾರ ದೋ. ಟಾಕಳೆ ತಿಳಿಸಿದ್ದಾರೆ.

ಇದನ್ನೂ ಓದಿ | ಬಾಗಲಕೋಟೆ ತೋಟಗಾರಿಕೆ ವಿವಿ ಘಟಿಕೋತ್ಸವದಲ್ಲಿ 77 ಚಿನ್ನದ ಪದಕ ಪ್ರದಾನ

Exit mobile version