Site icon Vistara News

Shakti Scheme : ಕೈ ತೋರಿದರೂ ನಿಲ್ಲಿಸದ ಬಸ್‌; ಸಿಟ್ಟಿಗೆದ್ದ ವಿದ್ಯಾರ್ಥಿಗಳಿಂದ ಕಲ್ಲೆಸೆತ, ಗಾಜು ಪೀಸ್‌ ಪೀಸ್!

Angry students pelted stones glass pieces

ಬೆಳಗಾವಿ: ಶಕ್ತಿ ಯೋಜನೆ (Shakti Scheme) ಜಾರಿಯಾದ್ಮೇಲೆ ಸರ್ಕಾರಿ ಬಸ್‌ಗಳಲ್ಲಿ ಜನ ಸಾಗರದಂತಾಗಿದೆ. ಕೆಲವೊಮ್ಮೆ ನಿಲ್ಲಲೂ ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಸ್‌ ರಷ್‌ ಇದ್ದ ಕಾರಣಕ್ಕೆ ಚಾಲಕರು ಸಹ ನಿಲ್ಲಿಸದೇ ಹೋಗುವ ಸ್ಥಿತಿ ಇದೆ. ಇದೇ ರೀತಿ ಬೆಳಗಾವಿಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ಕೈ ತೋರಿಸಿದರೂ ಬಸ್‌ ನಿಲ್ಲಸದೇ ಹೋಗಿದ್ದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಕಲ್ಲೆಸೆದಿದ್ದಾರೆ. ಇದರಿಂದಾಗಿ ಬಸ್‌ನ ಹಿಂಭಾಗದ ಗಾಜು ಪುಡಿ ಪುಡಿಯಾಗಿರುವ ವರದಿಯಾಗಿದೆ.

ದೊಡವಾಡ ಗ್ರಾಮದಿಂದ ಬೈಲಹೊಂಗಲಕ್ಕೆ ಬಸ್ ಹೊರಟಿತ್ತು. ವಿದ್ಯಾರ್ಥಿಗಳು ಬಸ್‌ ನಿಲ್ಲಿಸುವಂತೆ ಕೈ ತೋರಿಸಿದ್ದಾರೆ. ಆದರೆ ಚಾಲಕ ನಿಲ್ಲಿಸದೆ ಬಸ್‌ ಮುಂದಕ್ಕೆ ಹೋಗಿದೆ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಬಸ್ಸಿಗೆ ಕಲ್ಲು ಎಸೆದು ಆಕ್ರೋಶ ಹೊರ ಹಾಕಿದ್ದಾರೆ.

ಕಾಲೇಜು ವಿದ್ಯಾರ್ಥಿಗಳು ಹಾಗೂ ಚಾಲಕ, ನಿರ್ವಾಹಕರ ಮಧ್ಯೆ ಮಾತಿನ‌ ಚಕಮಕಿ ನೀಡಿದೆ. ಕೆಲಕಾಲ ಸ್ಥಳದಲ್ಲಿ ವಾತಾವರಣ ಉದ್ವಿಗ್ನಗೊಂಡಿತ್ತು. ದಾರಿ ಮಧ್ಯೆ ಬಸ್‌ ತಡೆದು ವಿದ್ಯಾರ್ಥಿಗಳು ಪ್ರತಿಭಟಿಸಿದರು. ರಸ್ತೆ ಮಧ್ಯೆ ಬಸ್‌ ನಿಂತಿದ್ದರಿಂದ ಟ್ರಾಫಿಕ್‌ಜಾಮ್‌ ಉಂಟಾಗಿತ್ತು. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: Cyber Crime : ಎಚ್‌ಡಿ ಕುಮಾರಸ್ವಾಮಿ ಬಳಿಕ ಈಗ ರಾಜ್ಯಪಾಲರ ಮೇಲೆ ಸೈಬರ್‌ ವಂಚಕರ ಕಣ್ಣು!

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಶಕ್ತಿ” ಯೋಜನೆಯು (Shakti Scheme) ಜಾರಿಗೆ ಬಂದ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ಗಳು (KSRTC Bus) ತುಂಬಿ ತುಳುಕುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರ್ಕಾರಿ ಬಸ್‌ಗಳನ್ನು ಹತ್ತುತ್ತಿದ್ದಾರೆ. ಆದರೆ, ಇದು ಇನ್ನೊಂದು ವರ್ಗವಾದ ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಬಹಳವೇ ತೊಂದರೆಯನ್ನು ಕೊಡುತ್ತಿದೆ. ಒಂದೋ ರಶ್‌ ಇರುವ ಬಸ್ಸನ್ನೇ ಹತ್ತಬೇಕು. ಅಲ್ಲಿ ಜಾಗವಿಲ್ಲದೇ ಇದ್ದರೆ ಇನ್ನೊಂದು ಬಸ್‌ ಬರುವ ತನಕ ಕಾಯಬೇಕು.

ಆ ಬಸ್‌ ಸಹ ರಶ್‌ ಇದ್ದರೆ? ಮತ್ತದೇ ತೊಂದರೆಯನ್ನು ಅನುಭವಿಸಬೇಕು. ಇನ್ನು ಕೆಲವು ಕಡೆ ಸರ್ಕಾರಿ ಬಸ್‌ಗಳು ರಶ್‌ ಎಂಬ ಕಾರಣಕ್ಕೋ ಅಥವಾ ವಿದ್ಯಾರ್ಥಿಗಳು ಎಂಬ ಕಾರಣಕ್ಕೋ ನಿಲುಗಡೆ ಪ್ರದೇಶವಿದ್ದರೂ ನಿಲ್ಲಿಸದೇ ಹೋಗುತ್ತಿರುವ ಆರೋಪಗಳು ಕೇಳಿಬಂದಿವೆ. ಬಸ್ ನಿಲ್ಲಿಸದ ಕಾರಣ ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜಿಗೆ ಹೋಗಲಾಗದೇ ಸಮಸ್ಯೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version